75ನೇ ಸ್ವಾತಂತ್ರ್ಯೋತ್ಸವ: ಇಂದು ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ರಾಷ್ಟ್ರಪತಿ ರಾಮನಾಥ ಕೋವಿಂದ್
75ನೇ ಸ್ವಾತಂತ್ರ್ಯೋತ್ಸವ (Independence Day-2021)ದ ನಿಮಿತ್ತ ಇಂದು ರಾಷ್ಟ್ರಪತಿ (President Of India) ರಾಮನಾಥ ಕೋವಿಂದ್ (Ram Nath Kovind) ಅವರು ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ರಾಷ್ಟ್ರಪತಿ ಭಾಷಣ ಇಂದು ಸಂಜೆ 7ಗಂಟೆಯಿಂದ ದೂರದರ್ಶನ ಹಿಂದಿಯಲ್ಲಿ ಪ್ರಸಾರವಾಗಲಿದೆ. ಭಾಷಣದ ಇಂಗ್ಲಿಷ್ ಆವೃತ್ತಿ ಕೂಡ ಸಿಗಲಿದೆ. ಇನ್ನುಳಿದಂತೆ ಆಲ್ ಇಂಡಿಯಾ ರೇಡಿಯೋ (AIR)ದ ಎಲ್ಲ ರಾಷ್ಟ್ರೀಯ ನೆಟ್ವರ್ಕ್ಗಳಲ್ಲೂ ಪ್ರಸಾರಗೊಳ್ಳಲಿದೆ. ರಾಷ್ಟ್ರಪತಿಯವರು ಹಿಂದಿಯಲ್ಲೇ ಮಾತನಾಡಲಿದ್ದು, ಅದು ಏಳುಗಂಟೆಯಿಂದ ಪ್ರಸಾರಗೊಳ್ಳಲಿದೆ. ಬಳಿಕ ರಾತ್ರಿ 9.30ರಿಂದ ಎಲ್ಲ ಪ್ರಾದೇಶಿಕ ಚಾನಲ್ಗಳಲ್ಲಿ, ಆಯಾ ಸ್ಥಳೀಯ ಭಾಷೆಗಳಲ್ಲಿ ಪ್ರಸಾರಗೊಳ್ಳಲಿದೆ.
ಪ್ರಸಕ್ತ ವರ್ಷದ ಸ್ವಾತಂತ್ರ್ಯ ದಿನಾಚರಣೆ ಭಾರತಕ್ಕೆ ವಿಶೇಷ. ಕಾರಣ ಇದು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ (75ನೇ ವರ್ಷ). 75ನೇ ಸ್ವಾತಂತ್ರ್ಯೋತ್ಸವ ನಿಮಿತ್ತ ಮಾರ್ಚ್ 12ರಂದು ಪ್ರಧಾನಿ ನರೇಂದ್ರ ಮೋದಿಯವರು ಆಜಾದಿ ಕಾ ಅಮೃತಮಹೋತ್ಸವ್ದ ಕಾರ್ಯಕ್ರಮಗಳ ಸರಣಿಗೆ ಚಾಲನೆ ನೀಡಿದ್ದಾರೆ. ಇದು 2023ರ ಸ್ವಾತಂತ್ರ್ಯೋತ್ಸವದವರೆಗೂ ಮುಂದುವರಿಯಲಿದೆ.
ಇನ್ನು ನಾಳೆ ಮುಂಜಾನೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೆಂಪುಕೋಟೆ ಮೇಲೆ ರಾಷ್ಟ್ರಧ್ವಜಾರೋಹಣ ಮಾಡಿ, ದೇಶವನ್ನುದ್ದೇಶಿಸಿ ಮಾತನಾಡುವರು. ಈ ಹಿನ್ನೆಲೆಯಲ್ಲಿ ಕೆಂಪುಕೋಟೆ ಸೇರಿ ದೇಶದ ಹಲವು ಸೂಕ್ಷ್ಮ ಪ್ರದೇಶಗಳಲ್ಲಿ ಈಗಾಗಲೇ ಬಿಗಿ ಭದ್ರತೆ ಕಲ್ಪಿಸಲಾಗಿದೆ. ದೆಹಲಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಫೋಟಿಸುವುದಾಗಿ ಬೆದರಿಕೆ ಮೇಲ್ ಬಂದ ಹಿನ್ನೆಲೆಯಲ್ಲಿ ಅಲ್ಲಿ ಕೂಡ ರಕ್ಷಣಾ ಪಡೆಗಳ ಭದ್ರತೆ ಹೆಚ್ಚಿಸಲಾಗಿದೆ.
Source: tv9 kannada