50ವರ್ಷದಲ್ಲಿ 5 ಪಟ್ಟು ಹೆಚ್ಚಾದ ಹವಾಮಾನ ವಿಪತ್ತು; ಆರ್ಥಿಕ ನಷ್ಟದಲ್ಲಿ ಏರಿಕೆ, ಮರಣ ಪ್ರಮಾಣ ಇಳಿಕೆ

Sep 1, 2021

ಕಳೆದ 50ವರ್ಷಗಳಲ್ಲಿ ಹವಾಮಾನ ಏರಿಳಿತದಿಂದ ಆಗುವ ವಿಪತ್ತುಗಳ (Weather Disasters) ಪ್ರಮಾಣ ಹೆಚ್ಚಾಗಿದ್ದು, ಇದರಿಂದಾಗಿ 2 ಮಿಲಿಯನ್ (20ಲಕ್ಷಕ್ಕೂ ಹೆಚ್ಚು)​ಗೂ ಅಧಿಕ ಮಂದಿ ಮೃತಪಟ್ಟಿದ್ದಾರೆ. 3.64 ಟ್ರಿಲಿಯನ್ ಡಾಲರ್​ಗಳಷ್ಟು ನಷ್ಟವಾಗಿದೆ ಎಂದು ವಿಶ್ವಸಂಸ್ಥೆಯ ಏಜೆನ್ಸಿ (UN Agency)ಯೊಂದು ತಿಳಿಸಿದೆ. ಅಂದರೆ ಕಳೆದ 50 ವರ್ಷಗಳಲ್ಲಿ ಹವಾಮಾನದಲ್ಲಿ ವಿಪರೀತ ಬದಲಾವಣೆ (Climate Change)ಯಾಗಿದೆ. ಇದರಿಂದಾಗಿ ಪ್ರವಾಹ, ಉಷ್ಣಗಾಳಿಯಂತಹ ವಿಪತ್ತುಗಳ ಪ್ರಮಾಣ ಜಾಸ್ತಿಯಾಗಿ ಎಂದು ವರದಿ ನೀಡಿದೆ. ಕಳೆದ 50 ವರ್ಷಗಳಲ್ಲಿ ವಾತಾವರಣ, ನೀರು ಮತ್ತು ಹವಾಮಾನ ವೈಪರೀತ್ಯಗಳಿಂದ ಉಂಟಾದ ಮರಣ, ಆರ್ಥಿಕ ನಷ್ಟದ ಸಮಗ್ರ ವಿಮರ್ಶೆಯನ್ನು ತನ್ನ ಅಟ್ಲಾಸ್ ಈಗ ಒಳಗೊಂಡಿದೆ. ಈ ಪ್ರಮಾಣ ಹಿಂದೆಂದಿಗಿಂತಲೂ ಅಧಿಕವಾಗಿದ್ದು ಸ್ಪಷ್ಟವಾಗುತ್ತದೆ ಎಂದು ವಿಶ್ವ ಹವಾಮಾನ ಸಂಸ್ಥೆ (WMO) ತಿಳಿಸಿದೆ.

1979ರಿಂದ 2019ರ ಅವಧಿಯಲ್ಲಿ ನಡೆದ ಪ್ರಮುಖ ದುರಂತಗಳ ಸಮೀಕ್ಷೆಯನ್ನು ಡಬ್ಲ್ಯೂಎಮ್​ಒ ನಡೆಸಿದೆ. ಅದರಲ್ಲಿ ಆಫ್ರಿಕಾದ ಇಥಿಯೋಪಿಯಾದಲ್ಲಿ 1983ರಲ್ಲಿ ಉಂಟಾಗಿದ್ದ ಬರ ಪರಿಸ್ಥಿತಿ, 2005ರಲ್ಲಿ ಅಪ್ಪಳಿಸಿದ್ದ ಕತ್ರೀನಾ ಚಂಡಮಾರುತಗಳು ಮುಖ್ಯವಾದವುಗಳು. ಇಥಿಯೋಪಿಯಾದ ಅಂದಿನ ಭೀಕರ ಬರಗಾಲದಲ್ಲೇ 3 ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. ಕತ್ರೀನಾ ಚಂಡಮಾರುತದಿಂದ 163.61 ಬಿಲಿಯನ್​ ಡಾಲರ್​ಗಳಷ್ಟು ನಷ್ಟವುಂಟಾಗಿತ್ತು.

ಇದೀಗ WMO ತೋರಿಸಿದ ವರದಿ ಪ್ರಕಾರ, 1970ರ ಈಚೆಗೆ ಪಾಕೃತಿಕ ವಿಕೋಪಗಳು 5 ಪಟ್ಟು ಹೆಚ್ಚಾಗಿವೆ. ಜಾಗತಿಕ ತಾಪಮಾನ ಏರಿಕೆಯಿಂದ ಹವಾಮಾನ ವೈಪರೀತ್ಯಗಳು ಸಿಕ್ಕಾಪಟೆ ಏರಿಕೆಯಾಗಿವೆ. ಹಾಗೇ 1970ರ ಅವಧಿಯಲ್ಲಿ ಪ್ರಾಕೃತಿಕ ವಿಕೋಪದಿಂದ ಉಂಟಾದ ನಷ್ಟ ಸುಮಾರು 175.4 ಬಿಲಿಯನ್ ಡಾಲರ್​ಗಳಷ್ಟು ಇತ್ತು. ಅದು 2010ರಲ್ಲಿ ಯುಎಸ್​​ನಲ್ಲಿ ಅಪ್ಪಳಿಸಿದ ಹಾರ್ವೆ, ಮರಿಯಾ ಮತ್ತು ಇರ್ಮಾ ಚಂಡಮಾರುತಗಳಿಂದಾಗಿ 1.38 ಟ್ರಿಲಿಯನ್ ಡಾಲರ್​ಗಳಿಗೆ ಏರಿತು ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮರಣ ಪ್ರಮಾಣ ಕಡಿಮೆ
1970ರಿಂದ ಇತ್ತೀಚಿನ ದಶಕಗಳಲ್ಲಿ ಆರ್ಥಿಕ ನಷ್ಟ ಹೆಚ್ಚಾಗಿದ್ದರೂ, ಮತ್ತೊಂದೆಡೆ ವಾರ್ಷಿಕ ಮರಣ ಪ್ರಮಾಣ ಕಡಿಮೆಯಾಗಿದೆ ಎಂದು ಡಬ್ಲ್ಯೂಎಂಒ ಮಾಹಿತಿ ನೀಡಿದೆ. 1970ರಿಂದ ಈಚೆಗೆ ಪ್ರಾಕೃತಿಕ ವಿಕೋಪಗಳ ಪ್ರಮಾಣ ಮತ್ತು ಸ್ವರೂಪ ಭೀಕರವಾಗಿಯೇ ಇದ್ದರೂ ವಾರ್ಷಿಕ ಸಾವಿನ ಪ್ರಮಾಣ ಕಡಿಮೆಯಾಗಿದೆ. ಆಗ 1970ರ ಅವಧಿಯಲ್ಲಿ 50 ಸಾವಿರಗಳಷ್ಟಿತ್ತು. ಅದು 2010ರಲ್ಲಿ 18 ಸಾವಿರಕ್ಕೆ ಇಳಿಯಿತು. ಅಂದರೆ ಪ್ರಾಕೃತಿಕ ವಿಕೋಪವನ್ನು ಎದುರಿಸಲು ರೂಪಿಸುತ್ತಿರುವ ಯೋಜನೆಗಳು ಫಲಕೊಡುತ್ತಿವೆ ಎಂಬುದನ್ನು ಸೂಚಿಸುತ್ತದೆ. ಅದರಲ್ಲೂ ಈಗೀಗ ಅಪಾಯವನ್ನು ಮುಂಚಿಯವಾಗಿಯೇ ಅಂದಾಜಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ರಕ್ಷಣಾ ಪಡೆಗಳ ಸಂಖ್ಯೆ ಹೆಚ್ಚಿದೆ..ಈ ಎಲ್ಲ ಕಾರಣಗಳಿಂದ ಪ್ರಾಕೃತಿಕ ವಿಪತ್ತಿನಿಂದ ಉಂಟಾಗುವ ಮರಣದ ಸಂಖ್ಯೆ ಇಳಿಮುಖವಾಗಿದೆ ಎಂದು ವಿಶ್ವಸಂಸ್ಥೆ ಏಜೆನ್ಸಿ ಅಭಿಪ್ರಾಯಪಟ್ಟಿದೆ.

ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಹೆಚ್ಚು ಮರಣ ಪ್ರಮಾಣ
ಕಳೆದ 50ವರ್ಷಗಳಲ್ಲಿ 2 ಮಿಲಿಯನ್​ಗೂ ಅಧಿಕ ಮಂದಿ ಈ ಹವಾಮಾನ ವೈಪರೀತ್ಯದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಇದರಲ್ಲಿ ಶೇ.91ಕ್ಕೂ ಅಧಿಕ ಸಾವಾಗಿರುವುದು ಮುಂದುವರಿಯುತ್ತಿರುವ ರಾಷ್ಟ್ರಗಳಲ್ಲಿ. ಈ ಹವಾಮಾನ ಅವಲೋಕನ ವ್ಯವಸ್ಥೆಯಲ್ಲಿ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ತೀವ್ರ ಅಂತರವಿದೆ. ಅದರಲ್ಲೂ ಮುಂಚಿತವಾಗಿ ಅಂದಾಜಿಸುವ ವ್ಯವಸ್ಥೆಯಲ್ಲಿ ಆಫ್ರಿಕಾ ಹಿಂದುಳಿದಿದೆ ಎಂದೂ ಡಬ್ಲ್ಯೂಎಂಒ ಹೇಳಿದೆ.

Source:Tv9kannada