ಮಳೆ ನೀರು ಕುಡಿಯಲು ಆಯುರ್ವೇದ ಶಿಫಾರಸು ಮಾಡುತ್ತದೆ, ಏಕೆ? ಇಲ್ಲಿದೆ ಮಾಹಿತಿ

May 30, 2023

 

ಮಳೆನೀರನ್ನು ಕುಡಿಯುವುದು ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಆಯುರ್ವೇದ ತಜ್ಞರೊಬ್ಬರು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಮಳೆನೀರನ್ನು ಕುಡಿಯುವ ಪ್ರಕ್ರಿಯೆಯನ್ನು ಸಹ ಹಂಚಿಕೊಂಡಿದ್ದು, ಕಾಳಜಿ ವಹಿಸಬೇಕಾದ ಕೆಲವು ವಿಷಯಗಳ ಬಗ್ಗೆ ವಿವರವಾಗಿ ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

ಜನರು ಮಳೆ ನೀರಿನ ಕೊಯ್ಲು ಮಾಡುವುದನ್ನು ನೀವು ನೋಡಿರಬಹುದು. ಬೇಸಿಗೆಯಲ್ಲಿ ನೀರಿನ ಬವಣೆ ಕಡಿಮೆ ಮಾಡಲು ಮಳೆಯ ನೀರನ್ನು ಸಂಗ್ರಹಿಸಿ ಇಡುವ ಕ್ರಮದ ಬಗ್ಗೆ ನೀವು ಈಗಾಗಲೇ ತಿಳಿದಿರಬಹುದು. ನೀರನ್ನು ಉಳಿಸಲು ಮತ್ತು ವಿವಿಧ ಉದ್ದೇಶಗಳಿಗಾಗಿ ಬಳಸಲು ಇದನ್ನು ಹೆಚ್ಚಾಗಿ ಉಪಯೋಗಿಸಲಾಗುತ್ತಿತ್ತು. ಆದರೆ ಮಳೆ ನೀರನ್ನು ಕುಡಿಯುವ ಬಗ್ಗೆ ಯಾರೂ ನಿಜವಾಗಿಯೂ ಯೋಚಿಸಿರಲಿಕ್ಕಿಲ್ಲ, ಅಲ್ಲವೇ? ಮಳೆ ನೀರನ್ನು ಕುಡಿಯುವುದರಿಂದ ಹಲವು ರೀತಿಯ ಪ್ರಯೋಜನಗಳಿವೆ ಎಂಬುದನ್ನು ನಂಬುತ್ತೀರಾ? ಹೌದು, ಅಂತರಿಕ್ಷದಿಂದ ಬರುವ ಜಲವನ್ನು ಕುಡಿಯುವುದು ನಮ್ಮ ದೇಹಕ್ಕೆ ಪ್ರಯೋಜನಕಾರಿಯಾಗಿದೆ. ಆಯುರ್ವೇದ ತಜ್ಞರೊಬ್ಬರು ಇತ್ತೀಚೆಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಳೆ ನೀರು ಹೇಗೆ ಪ್ರಯೋಜನಕಾರಿ ಎಂಬುದರ ಬಗ್ಗೆ ತಿಳಿಸಿದ್ದಾರೆ. ಜೊತೆಗೆ ಅದರ ಪ್ರಕ್ರಿಯೆಯನ್ನು ಸಹ ಹಂಚಿಕೊಂಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ಈ ವಿಷಯದ ಕುರಿತು ಡಾ. ರೇಖಾ ರಾಧಾಮಣಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದು, “ಮಳೆ ನೀರನ್ನು (ಅಂತರಿಕ್ಷ ಜಲ) ಕುಡಿಯಲು ಆಯುರ್ವೇದ ಶಿಫಾರಸು ಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ?” ಎಂಬುದರ ಬಗ್ಗೆ ಮಾಹಿತಿಗಳ ಜೊತೆಗೆ ಹಂಚಿಕೊಂಡಿದ್ದಾರೆ. ಮಳೆ ನೀರನ್ನು ಬಳಸುವಾಗ ನೆನಪಿನಲ್ಲಿಟ್ಟು ಕೊಳ್ಳಬೇಕಾದ ಕೆಲವು ವಿಷಯಗಳ ಬಗ್ಗೆ ಅವರು ತಮ್ಮ ಅಭಿಪ್ರಾಯ ಹಂಚಿ ಕೊಂಡಿದ್ದಾರೆ.

ಮಳೆನೀರನ್ನು ಕುಡಿಯುವಾಗ ಕಾಳಜಿ ವಹಿಸಬೇಕಾದ ಕೆಲವು ವಿಷಯಗಳ ಬಗ್ಗೆ ಇಲ್ಲಿದೆ ಮಾಹಿತಿ:

-ಕೆಲವು ದಿನಗಳು ಮಳೆ ಬಿದ್ದ ಬಳಿಕ ಮಳೆ ನೀರನ್ನು ಕುಡಿಯುವುದು ಸೂಕ್ತವಾಗಿದೆ.

-ತಾಮ್ರದ ಪಾತ್ರೆಗಳಲ್ಲಿ ಮಳೆನೀರನ್ನು ಸಂಗ್ರಹಿಸುವುದು ಉತ್ತಮವಾಗಿವೆ.

-ಮಳೆ ನೀರನ್ನು ಮಳೆ ಆರಂಭವಾಗಿ ಒಂದು ಗಂಟೆಯ ನಂತರ ಸಂಗ್ರಹಿಸಿ. ರಾತ್ರಿಯಿಡೀ ಅದನ್ನು ಚಂದ್ರನ ಬೆಳಕಿನಲ್ಲಿ ಇಡಿ. ಜೊತೆಗೆ ಅದಕ್ಕೆ ತೆಳುವಾದ ಹತ್ತಿ ಬಟ್ಟೆಯಿಂದ ಮುಚ್ಚಿಟ್ಟು, ಮರುದಿನ ಕುದಿಸಿ ಕುಡಿಯಿರಿ!

ಅಂತರಿಕ್ಷ ಜಲ ಅಥವಾ ಮಳೆ ನೀರು ಅಮೃತದಂತೆ ಎನ್ನುತ್ತಾರೆ ತಜ್ಞರು. ಇದು ನಿಮ್ಮ ದೇಹದ ಜೀವಂತಿಕೆಗೆ ಹೊಸ ಬಣ್ಣ ನೀಡುತ್ತದೆ. ಜೊತೆಗೆ ದೇಹದ ಆಯಾಸವನ್ನು ನಿವಾರಿಸುತ್ತದೆ. ಆಯುರ್ವೇದದ ಪ್ರಕಾರ ಮಳೆ ನೀರು ಆರೋಗ್ಯಕ್ಕೆ ಉತ್ತಮವಾಗಿದೆ. ಆದರೆ ನೀವು ವಾಸಿಸುತ್ತಿರುವ ಜಾಗ ಅತ್ಯಂತ ಕಲುಷಿತವಾಗಿದ್ದರೆ, ಗಾಳಿಯ ಗುಣಮಟ್ಟದಲ್ಲಿ ವ್ಯತ್ಯಾಸವಿದ್ದರೆ, ಮಳೆನೀರನ್ನು ಕುಡಿಯುವುದು ನಿಮಗೆ ಸೂಕ್ತವಲ್ಲ! ದೆಹಲಿ ಜನರು ಪ್ರಯತ್ನಿಸುವುದು ಸಲ್ಲ. ದುಬೈಯಲ್ಲಿ ವರ್ಷಕ್ಕೊಮ್ಮೆ ಅತೀ ಕಡಿಮೆ ಮಳೆಯಾಗುಗುವುದರಿಂದ ಅವರಿಗೂ ಸಾಧ್ಯವಿಲ್ಲ. ಎಲ್ಲಿ ಅತೀ ಹೆಚ್ಚು ಮಳೆಯಾಗುತ್ತದೆಯೋ ಅವರು ಈ ಪ್ರಯೋಗ ಮಾಡಬಹುದು ಎಂದು ತಜ್ಞರು ತಿಳಿಸಿದ್ದಾರೆ.