ಕೊವಿಡ್​-19 ಲಸಿಕೆ ಕಳಿಸಿದ ಭಾರತ ಸರ್ಕಾರಕ್ಕೆ ಶುಕ್ರಿಯಾ ಎಂದ ಭೂತಾನ್​ನ ಪುಟ್ಟ ಬಾಲಕಿಗೆ ಮನಸೋತ ನೆಟ್ಟಿಗರು; ಎರಡೂ ದೇಶಗಳ ಸ್ನೇಹಕ್ಕೊಂದು ಸಾಕ್ಷಿ

Mar 30, 2021

ನಮ್ಮ ದೇಶ ಭೂತಾನ್​ಗೆ ದೊಡ್ಡ ಪ್ರಮಾಣದಲ್ಲಿ ಕೊವಿಡ್ 19 ಲಸಿಕೆ ನೀಡಿದ ಭಾರತ ಸರ್ಕಾರಕ್ಕೆ ಕೃತಜ್ಞತೆಗಳು. ಭಾರತವನ್ನು ನೆರೆರಾಷ್ಟ್ರವನ್ನಾಗಿ ಪಡೆದ ನಾವು ಭೂತಾನೀಯರು ತುಂಬ ಪುಣ್ಯವಂತರು ಎಂದು ಬಾಲಕಿ ವಿಡಿಯೋದಲ್ಲಿ ಹೇಳಿದ್ದಾಳೆ.

ಥಿಂಪು: ಕೊವಿಡ್​-19 ಲಸಿಕೆಯನ್ನು ಭೂತಾನ್​​ಗೆ ಕಳಿಸಿದ ಭಾರತ ಸರ್ಕಾರಕ್ಕೆ ಅಲ್ಲಿನ ಪುಟ್ಟ ಹುಡುಗಿಯೊಬ್ಬಳು ಕೃತಜ್ಞತೆ ಸಲ್ಲಿಸಿದ ರೀತಿಯನ್ನು ಭಾರತೀಯರು ತುಂಬು ಮನಸಿನಿಂದ ಶ್ಲಾಘಿಸಿದ್ದಾರೆ. ಈ ವಿಡಿಯೋ ಇದೀಗ ಭಾರತ-ಭೂತಾನ್​ ನಡುವಿನ ಸೌಹಾರ್ದತೆಗೆ ಸಾಕ್ಷಿಯಾಗಿ ನಿಂತಿದೆ. ಕೊರೊನಾ ಲಸಿಕೆ ಕೊಟ್ಟು ಉಪಕರಿಸಿದ ಭಾರತಕ್ಕೆ ಶುಕ್ರಿಯಾ ಎಂದು ಬಾಲಕಿ ಹೇಳುತ್ತಿರುವ ವಿಡಿಯೋ ಇಂಟರ್​​ನೆಟ್​​ನಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ. ಈ ಪುಟ್ಟು ಹುಡುಗಿ ಹಿಂದಿ ಹಾಗೂ ಇಂಗ್ಲಿಷ್​ ಎರಡಲ್ಲೂ ಮಾತನಾಡಿ ಭಾರತಕ್ಕೆ ಧನ್ಯವಾದ ತಿಳಿಸಿದ್ದಾಳೆ.

ಭಾರತದಲ್ಲಿ 2 ಕೊರೊನಾ ಲಸಿಕೆಗಳನ್ನು ನೀಡಲಾಗುತ್ತಿದೆ. ಹಾಗೇ ಭಾರತದಿಂದ ಸೀರಂ ಇನ್​ಸ್ಟಿಟ್ಯೂಟ್ ಆಫ್​ ಇಂಡಿಯಾದ ಕೊವಿಶೀಲ್ಡ್​ ಲಸಿಕೆಯನ್ನು ಪಡೆದ ಮೊದಲ ದೇಶ ಭೂತಾನ್​. ಭಾರತ ಸರ್ಕಾರ ಭೂತಾನ್​ಗೆ ಲಸಿಕೆಯನ್ನು ರಫ್ತು ಮಾಡಿದ ಬಳಿಕ ಬಾಲಕಿ ಈ 47 ಸೆಕೆಂಡ್​ಗಳ ವಿಡಿಯೋ ಮಾಡಿ ಕೃತಜ್ಞತೆ ಸಲ್ಲಿಸಿದ್ದಾಳೆ. ವಿಡಿಯೋವನ್ನು ಭೂತಾನ್​​​ನ ಭಾರತದ ರಾಯಭಾರಿ ರುಚಿರಾ ಕಾಂಬೊಜ್ ಮೊದಲು ಪೋಸ್ಟ್ ಮಾಡಿದ್ದು, ನಂತರ ತುಂಬ ಜನರು ಶೇರ್ ಮಾಡಿಕೊಂಡಿದ್ದಾರೆ. ಬಾಲಕಿ ಭೂತಾನ್​​ನ ಬಾಲ ಕಲಾವಿದೆ ಖೆನ್ರಾಬ್ ಯೀಡ್ಜಿನ್ ಸೈಲ್ಡೆನ್. ಇವಳು ಮುದ್ದುಮುದ್ದಾಗಿ, ಮುಗ್ಧವಾಗಿ ಶುಕ್ರಿಯಾ ಭಾರತ್​ ಎಂದಿದ್ದಾಳೆ.

ನಮ್ಮ ದೇಶ ಭೂತಾನ್​ಗೆ ದೊಡ್ಡ ಪ್ರಮಾಣದಲ್ಲಿ ಕೊವಿಡ್ 19 ಲಸಿಕೆ ನೀಡಿದ ಭಾರತ ಸರ್ಕಾರಕ್ಕೆ ಕೃತಜ್ಞತೆಗಳು. ಭಾರತವನ್ನು ನೆರೆರಾಷ್ಟ್ರವನ್ನಾಗಿ ಪಡೆದ ನಾವು ಭೂತಾನೀಯರು ತುಂಬ ಪುಣ್ಯವಂತರು ಎಂದು ವಿಡಿಯೋದಲ್ಲಿ ಹೇಳಿದ್ದಾಳೆ. ಅದನ್ನು ನೋಡಿದ ಭಾರತದ ನೆಟ್ಟಿಗರು, ಖೆನ್ರಾಬ್, ನೀನು ಸಲ್ಲಿಸಿದ ಕೃತಜ್ಞತೆ ನಮ್ಮ ಹೃದಯವನ್ನು ಸ್ಪರ್ಶಿಸಿತು ಎಂದಿದ್ದಾರೆ. ಇದರೊಂದಿಗೆ Vaccine Maitri (ವ್ಯಾಕ್ಸಿನ್ ಮೈತ್ರಿ), India Bhutan Friendship (ಭಾರತ-ಭೂತಾನ್​ ಸ್ನೇಹ) ಹ್ಯಾಷ್​ಟ್ಯಾಗ್​ಗಳು ಟ್ರೆಂಡ್ ಆಗುತ್ತಿವೆ.

 

Source:TV9Kannada