India vs England: ಮೈದಾನದಲ್ಲಿ ಚಿರತೆಯಂತೆ ಎಗರಿ ಕ್ಯಾಚ್​ ಹಿಡಿದ ವಿರಾಟ್.. ಕೊಹ್ಲಿಯ ಈ ಅದ್ಭುತ ಕ್ಯಾಚ್​ ಭಾರತವನ್ನು ಗೆಲ್ಲಿಸಿತು! ವಿಡಿಯೋ ನೋಡಿ

Mar 30, 2021

Virat Kohli Catch Video: 40 ನೇ ಓವರ್‌ನಲ್ಲಿ ರಶೀದ್ ಶಾರ್ದುಲ್ ಅವರ ಎರಡನೇ ಎಸೆತವನ್ನು ಕವರ್ಸ್​ ಕಡೆ ಆಡಿದರು. ಅಲ್ಲಿ ಹಾಜರಿದ್ದ ಭಾರತದ ನಾಯಕ ಕೊಹ್ಲಿ, ಚಿರತೆಯಂತೆ ಎಗರಿ ಕೇವಲ ಒಂದೇ ಕೈಯಿಂದ ಅಚ್ಚರಿಯ ಕ್ಯಾಚ್ ತೆಗೆದುಕೊಂಡರು.

ಪುಣೆ: ಕಳೆದ ಒಂದೂವರೆ ತಿಂಗಳಿನಿಂದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಕ್ರಿಕೆಟ್ ಕದನ ಮಾರ್ಚ್ 28 ರ ಭಾನುವಾರ ಪುಣೆಯಲ್ಲಿ ನಡೆದ ಅದ್ಭುತ ಪಂದ್ಯದೊಂದಿಗೆ ಕೊನೆಗೊಂಡಿತು. ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ಕೇವಲ 7 ರನ್‌ಗಳ ಅಂತರದಿಂದ ಇಂಗ್ಲೆಂಡ್‌ನ್ನು ಸೋಲಿಸಿ ಸರಣಿಯನ್ನು 2-1 ರಿಂದ ತನ್ನ ಮುಡಿಗೆರಿಸಿಕೊಂಡಿತು. ಈ ಪಂದ್ಯದಲ್ಲಿ, ಎರಡೂ ತಂಡಗಳಿಂದ ಅನೇಕ ಅತ್ಯುತ್ತಮ ಪ್ರದರ್ಶನಗಳು ಕಂಡುಬಂದವು. ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ಶಿಖರ್ ಧವನ್ ಮತ್ತು ಸ್ಯಾಮ್ ಕರಣ್ ಅವರ ಅತ್ಯುತ್ತಮ ಬ್ಯಾಟಿಂಗ್ ಎಲ್ಲರ ಗಮನ ಸೆಳೆಯಿತು. ಆದರೆ ಶಾರ್ದುಲ್ ಠಾಕೂರ್ ಮತ್ತು ಭುವನೇಶ್ವರ್ ಕುಮಾರ್ ಅವರ ಬೌಲಿಂಗ್ ಪಂದ್ಯವನ್ನು ಭಾರತದ ಪರವಾಗಿ ತಿರುಗಿಸುವಲ್ಲಿ ಪ್ರಮುಖ ಪಾತ್ರವಹಿಸಿತು. ಅದೇ ಸಮಯದಲ್ಲಿ, ವಿರಾಟ್ ಕೊಹ್ಲಿಗೆ, ಈ ಪಂದ್ಯವು ಬ್ಯಾಟಿಂಗ್ ವಿಷಯದಲ್ಲಿ ನಿರಾಶಾದಾಯಕವಾಗಿತ್ತು. ಆದರೆ ಕಿಂಗ್ ಕೊಹ್ಲಿ ಅಚ್ಚರಿಯ ಕ್ಯಾಚ್ ತೆಗೆದುಕೊಳ್ಳುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತವು ಇಂಗ್ಲೆಂಡ್ ಎದುರು 330 ರನ್ ಗಳಿಸುವ ಗುರಿಯನ್ನು ನೀಡಿತ್ತು. ತಂಡಕ್ಕೆ ಶಿಖರ್ ಧವನ್ (67), ರಿಷಭ್ ಪಂತ್ (78) ಮತ್ತು ಹಾರ್ದಿಕ್ ಪಾಂಡ್ಯ (64) ಅರ್ಧಶತಕ ಬಾರಿಸಿದರು. ಅದೇ ಸಮಯದಲ್ಲಿ, ಹಿಂದಿನ ಎರಡೂ ಪಂದ್ಯಗಳಲ್ಲಿ ಅರ್ಧಶತಕ ಬಾರಿಸಿದ ವಿರಾಟ್ ಕೊಹ್ಲಿ ಈ ಬಾರಿ ಕೇವಲ 7 ರನ್ ಗಳಿಸುವ ಮೂಲಕ ಔಟಾದರು. ಕೊಹ್ಲಿಗೆ ಬ್ಯಾಟಿಂಗ್‌ನಿಂದ ಯಾವುದೇ ಮಹತ್ವದ ಕೊಡುಗೆ ನೀಡಲು ಸಾಧ್ಯವಾಗದಿದ್ದರೂ, ಅವರು ಫೀಲ್ಡಿಂಗ್‌ನಲ್ಲಿ ತಮ್ಮ ಕ್ಷೇತ್ರದಲ್ಲಿ ಸಾಕಷ್ಟು ಸಹಾಯ ಮಾಡಿದರು ಮತ್ತು ಪ್ರಮುಖ ಪಾಲುದಾರಿಕೆಯನ್ನು ಮುರಿಯುವಲ್ಲಿ ಸಹಕರಿಸಿದರು.

ಕವರ್ಸ್​ನಲ್ಲಿ ಕೊಹ್ಲಿಯ ಅದ್ಭುತ ಕ್ಯಾಚ್
ಭಾರತ ಬೌಲಿಂಗ್‌ನಲ್ಲಿ ಉತ್ತಮ ಆರಂಭವನ್ನು ನೀಡಿತ್ತು ಮತ್ತು ಇಂಗ್ಲೆಂಡ್‌ನ ಅಗ್ರ 4 ಬ್ಯಾಟ್ಸ್‌ಮನ್‌ಗಳನ್ನು 95 ರನ್‌ಗಳಿಸುವಷ್ಟರಲ್ಲೇ ಔಟ್​ ಮಾಡಿತು. ಇದರಿಂದಾಗಿ ಇಂಗ್ಲೆಂಡ್‌ನ 7 ವಿಕೆಟ್‌ಗಳು 200 ರನ್‌ಗಳಿಸುವಷ್ಟರಲ್ಲಿ ಕುಸಿತ ಕಂಡವು. ಇಲ್ಲಿಂದ, ಸ್ಯಾಮ್ ಕರಣ್ ಮತ್ತು ಆದಿಲ್ ರಶೀದ್ ತಂಡವನ್ನು ಉಳಿಸುವ ಕೆಲಸವನ್ನು ಪ್ರಾರಂಭಿಸಿದರು. ಇವರಿಬ್ಬರ ನಡುವೆ ಅರ್ಧಶತಕ ಉತ್ತಮ ಪಾಲುದಾರಿಕೆ ಇತ್ತು. ಭಾರತ ವಿಕೆಟ್ ಹುಡುಕುತ್ತಿತ್ತು ಮತ್ತು ಅಂತಹ ಪರಿಸ್ಥಿತಿಯಲ್ಲಿ ಕೊಹ್ಲಿ ಶಾರ್ದುಲ್ ಠಾಕೂರ್ ಅವರನ್ನು ಬೌಲಿಂಗ್ ಮಾಡಲು ಕರೆದರು.

40 ನೇ ಓವರ್‌ನಲ್ಲಿ ರಶೀದ್ ಶಾರ್ದುಲ್ ಅವರ ಎರಡನೇ ಎಸೆತವನ್ನು ಕವರ್ಸ್​ ಕಡೆ ಆಡಿದರು. ಅಲ್ಲಿ ಹಾಜರಿದ್ದ ಭಾರತದ ನಾಯಕ ಕೊಹ್ಲಿ, ಚಿರತೆಯಂತೆ ಎಗರಿ ಕೇವಲ ಒಂದೇ ಕೈಯಿಂದ ಅಚ್ಚರಿಯ ಕ್ಯಾಚ್ ತೆಗೆದುಕೊಂಡರು. ಇದರಿಂದ ಟೀಂ ಇಂಡಿಯಾದ ಗೆಲುವಿಗೆ ಕಂಟಕವಾಗಿದ್ದ ಈ ಜೋಡಿಯ ಜೊತೆಯಾಟವನ್ನು ಕೊಹ್ಲಿ ಕೊನೆಗಾಣಿಸಿದರು.

 

Source:TV9Kannada