ಹುಟ್ಟುಹಬ್ಬ ದಿನದಂದೇ ಲೋಕಸಭೆಯಲ್ಲಿ ಪ್ರಜ್ವಲ್ ರೇವಣ್ಣ ಅಬ್ಬರ; ಮೇಕೆ ದಾಟು ಯೋಜನೆ ಬಗ್ಗೆ ಕೇಂದ್ರ ಕೊಟ್ಟ ಉತ್ತರ ಇಲ್ಲಿದೆ
ನವದೆಹಲಿ: ಮೇಕೆ ದಾಟು ಯೋಜನೆಯ ಈಗಿನ ಸ್ಥಿತಿಗತಿ ಬಗ್ಗೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೋಕಸಭೆಗೆ ಪ್ರಶ್ನೆ ಕೇಳಿ ಉತ್ತರ ಪಡೆದಿದ್ದಾರೆ. ಅದು ಕೂಡ ಹುಟ್ಟುಹಬ್ಬದಂದು ಲೋಕಸಭೆಯಲ್ಲಿ ಪ್ರಶ್ನೆ ಕೇಳುವುದಕ್ಕೆ ಅವಕಾಶ ಸಿಕ್ಕಿರುವುದು ವಿಶೇಷವಾಗಿದೆ. ಕೇಂದ್ರ ಜಲಶಕ್ತಿ ಇಲಾಖೆಗೆ ಮೇಕೆದಾಟು ಯೋಜನೆಗೆ ಅನುಮತಿ ನೀಡುವ ಕುರಿತು ಇಂದು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪ್ರಶ್ನೆ ಕೇಳಿದ್ದಾರೆ.
ಜೆಡಿಎಸ್ ಸಂಸದ (JDS MP) ಪ್ರಜ್ವಲ್ ರೇವಣ್ಣನವರ (Prajwal Revanna) ಪ್ರಶ್ನೆಗೆ ಕೇಂದ್ರ ಜಲಶಕ್ತಿ ಸಚಿವರು ಉತ್ತರ ನೀಡಿದ್ದಾರೆ. ಕರ್ನಾಟಕ ಸಲ್ಲಿಸಿದ್ದ ಮೇಕೆದಾಟು ಸಮಗ್ರ ಯೋಜನಾ ವರದಿಗೆ ಷರತ್ತು ಬದ್ಧ ಅನುಮತಿ ನೀಡಿದ್ದೇವೆ, ಆದರೆ ಇದು ಅಂತಾರಾಜ್ಯ ಯೋಜನೆ ಆಗಿರೋದ್ರಿಂದ ಕಣಿವೆ ರಾಜ್ಯಗಳ ಅನುಮತಿ ಬೇಕೆಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಉತ್ತರಿಸಿದ್ದಾರೆ.
ಮೇಕೆ ದಾಟು ಯೋಜನೆಗೆ ಕೇಂದ್ರ ಸರ್ಕಾರ ಕೊಕ್ಕೆ; ಬರ್ತ್ಡೇ ಬಾಯ್ ಪ್ರಜ್ವಲ್ ರೇವಣ್ಣ ಎತ್ತಿರುವ ಪ್ರಶ್ನೆಗಳು ಏನು?:
ಮೇಕೆ ದಾಟು (Mekedatu Project) ತಮಿಳುನಾಡು, ಕೇರಳ ಮತ್ತು ಪುದುಚೇರಿ ಕಾವೇರಿ ಕಣಿವೆಯ ರಾಜ್ಯಗಳಾಗಿದ್ದು, ಒಪ್ಪಿಗೆ ಪಡೆಯುವುದು ಅಗತ್ಯವೆಂದು ರಾಜ್ಯ ಡಿಪಿಆರ್ ಕೊಟ್ಟಾಗಲೇ ಇದನ್ನ ಸ್ಪಷ್ಟವಾಗಿ ತಿಳಿಸಿದ್ದೆವು ಎಂದು ಶೇಖಾವತ್ ಹೇಳಿದ್ದಾರೆ.
ಕಾವೇರಿ ನೀರು ನಿರ್ವಹಣಾ ಮಂಡಳಿಯ ಅನುಮತಿ ಕೂಡ ಕಡ್ಡಾಯವಾಗಿದೆ. ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಸಮ್ಮತಿ ಇನ್ನೂ ಯೋಜನೆಗೆ ಸಿಕ್ಕಿಲ್ಲ, ಯೋಜನೆಗೆ ಅನುಮತಿಯನ್ನು 6 ತಿಂಗಳ ಒಳಗೆ ನೀಡಿಲ್ಲ ಎಂದಾದ್ರೆ ಅದನ್ನ ಕರ್ನಾಟಕವು ಕೇಂದ್ರ ಸಮ್ಮತಿ ನೀಡಿದೆ (deemed approval) ಎಂದೇ ಭಾವಿಸಲಿದೆ ಎಂದು ಪ್ರಜ್ವಲ್ ರೇವಣ್ಣ ಜಲಶಕ್ತಿ ಸಚಿವರ ಗಮನಕ್ಕೆ ತಂದಿದ್ದಾರೆ.
ಸಮ್ಮತಿ ಇದೆ ಎಂದು ಕರ್ನಾಟಕ ಭಾವಿಸಿದರೂ ಅದನ್ನ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ತಿಳಿಸಬೇಕು ಮತ್ತು ಪ್ರಾಧಿಕಾರದ ಅನುಮತಿಯು ಬೇಕು. ಪರಿಸರ ಮತ್ತು ಅರಣ್ಯ ಇಲಾಖೆಗೆ ಪರಿಶೀಲನೆ ನಡೆಸಿ ಎಂದು ತಿಳಿಸಿದ್ದೇವೆ. ಅಲ್ಲಿಂದ ದಾಖಲೆ ಬರಬೇಕಷ್ಟೆ ಎಂದ ಗಜೇಂದ್ರ ಸಿಂಗ್ ಶೇಖಾವತ್ ಉತ್ತರಿಸಿದ್ದಾರೆ.
Source: Tv9 kannada