ಸುನಂದಾ ಪುಷ್ಕರ್ ಪ್ರಕರಣ: ಶಶಿ ತರೂರ್ರನ್ನು ಆರೋಪ ಮುಕ್ತಗೊಳಿಸಿದ ದೆಹಲಿ ನ್ಯಾಯಾಲಯ
2014ರ ಜನವರಿಯಲ್ಲಿ ದೆಹಲಿಯ ಪಂಚತಾರಾ ಹೋಟೆಲ್ನ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದ ಸುನಂದಾ ಪುಷ್ಕರ್ (Sunanda Pushkar ) ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಶಶಿ ತರೂರ್ (Shashi Tharoor)ಇದೀಗ ಆರೋಪ ಮುಕ್ತರಾಗಿದ್ದಾರೆ. ಅವರನ್ನು ಆರೋಪ ಮುಕ್ತಗೊಳಿಸಿ ದೆಹಲಿ ಕೋರ್ಟ್ ತೀರ್ಪು ನೀಡಿದೆ. ಪತ್ನಿ ಸುನಂದಾ ಪುಷ್ಕರ್ ಆತ್ಮಹತ್ಯೆಗೆ ಕಾಂಗ್ರೆಸ್ ನಾಯಕ ಶಶಿ ತರೂರ್ ಕುಮ್ಮಕ್ಕು ನೀಡಿದ್ದಾರೆ ಎಂಬ ಆರೋಪದಡಿ ದೆಹಲಿ ಪೊಲೀಸರು ಅವರ ವಿರುದ್ಧ, ಸೆಕ್ಷನ್ 498 ಎ (ಮಹಿಳೆಯು ತನ್ನ ಪತಿ ಅಥವಾ ಪತಿಯ ಸಂಬಂಧಿಗಳಿಂದ ಕ್ರೌರ್ಯಕ್ಕೆ ಒಳಗಾಗುವುದು), ಸೆಕ್ಷನ್ 306 ( ಆತ್ಮಹತ್ಯೆಗೆ ಕುಮ್ಮಕ್ಕು) ಸೇರಿ ವಿವಿಧ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಮಾಜಿ ಕೇಂದ್ರ ಸಚಿವರೂ ಆಗಿರುವ ಶಶಿ ತರೂರ್ ಜಾಮೀನು ಆಧಾರದ ಮೇಲೆ ಜೈಲಿನಿಂದ ಹೊರಗಿದ್ದರು. ಈ ಸಂಬಂಧ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿತ್ತು. ಇಂದು ತರೂರ್ ದೋಷಮುಕ್ತರೆಂದು ಕೋರ್ಟ್ ತೀರ್ಪು ನೀಡಿದೆ. ಬರೋಬ್ಬರಿ ಏಳೂವರೆ ವರ್ಷದ ಹಿಂಸೆ ಕೊನೆಗೊಂಡಿದೆ ಎಂದು ಹೇಳಿರುವ ಶಶಿ ತರೂರ್, ಕೋರ್ಟ್ಗೆ ಧನ್ಯವಾದ ಸಲ್ಲಿಸಿದ್ದಾರೆ.
Source: tv9 Kannada