ಕಿಚ್ಚ ಸುದೀಪ್ (Sudeep) ಅವರ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಅಭಿಮಾನಿಗಳ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸುದೀಪ್ ಸದ್ಯ ಚೆನ್ನೈನಲ್ಲಿದ್ದಾರೆ. ಅವರ ಹೊಸ ಸಿನಿಮಾದ ಚಿತ್ರೀಕರಣ ಅಲ್ಲಿ ನಿರಂತರವಾಗಿ ನಡೆಯುತ್ತಿದೆ. ಶೂಟಿಂಗ್ ನಡುವೆಯೂ ಬ್ರೇಕ್ ತೆಗೆದುಕೊಂಡು ಅಭಿಮಾನಿಗಳ ಜೊತೆ ಅವರು ಒಂದು ದಿನ ಕಳೆಯಲಿದ್ದಾರೆ.

ಈ ಕುರಿತು ಅಖಿಲ ಕರ್ನಾಟಕ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳ ಸಂಘ ಪೋಸ್ಟರ್ ವೊಂದನ್ನು ಬಿಡುಗಡೆ ಮಾಡಿದ್ದು, ‘ಪ್ರತಿ ವರ್ಷ ಸುದೀಪ್ ಅವರ ಹುಟ್ಟು ಹಬ್ಬವನ್ನು ಜೆಪಿ ನಗರದಲ್ಲಿರುವ ಅವರ ನಿವಾಸದ ಮುಂದೆ ಆಚರಣೆ ಮಾಡಲಾಗುತ್ತಿತ್ತು. ಜನಸಂದಣಿಯಿಂದಾಗಿ ಅಭಿಮಾನಿಗಳಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕಾಗಿ ಈ ಬಾರಿ ಒಂದು ದಿನ ಮೊದಲೇ ಸೆಪ್ಟೆಂಬರ್ 1ರಂದು ಬೆಂಗಳೂರಿನ ನಂದಿ ಲಿಂಕ್ಸ್ ಮೈದಾನದಲ್ಲಿ ಹುಟ್ಟು ಹಬ್ಬವನ್ನು ಆಚರಿಸಲು ನಿರ್ಧರಿಸಲಾಗಿದೆ’ ಎಂದು ಹೇಳಲಾಗಿದೆ.

ಸೆಪ್ಟೆಂಬರ್ 1ರಂದು ಸಂಜೆ 7 ಗಂಟೆಯಿಂದ ಮಧ್ಯರಾತ್ರಿ 12ರವರೆಗೆ ಸುದೀಪ್ ಅವರು ನಂದಿ ಲಿಂಕ್ಸ್ ಮೈದಾನದಲ್ಲಿ ಅಭಿಮಾನಿಗಳ ಜೊತೆ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಹಾಗಾಗಿ ಸೆಪ್ಟೆಂಬರ್ 2ಕ್ಕೆ ಯಾರೂ ಸುದೀಪ್ ಅವರ ಮನೆಯ ಮುಂದೆ ಬರಬಾರದು ಎಂದು ವಿನಂತಿಸಲಾಗಿದೆ.

ಸುದೀಪ್ ಅವರ ಹುಟ್ಟು ಹಬ್ಬಕ್ಕೆ ಹಲವು ಅಚ್ಚರಿಗಳು ಕೂಡ ಇರಲಿವೆಯಂತೆ. ಹೊಸ ಸಿನಿಮಾದ ಟ್ರೈಲರ್ ಮತ್ತು ಹೊಸ ಸಿನಿಮಾಗಳ ಘೋಷಣೆ ಕೂಡ ಆಗಲಿವೆ ಎನ್ನುವ ಮಾಹಿತಿ ಇದೆ. ಸತತವಾಗಿ ಶೂಟಿಂಗ್ ನಲ್ಲಿ ಭಾಗಿಯಾಗಿರುವ ಸುದೀಪ್, ಈ ಬಾರಿ ಅಭಿಮಾನಿಗಳ ಒತ್ತಡಕ್ಕೆ ಮಣಿದು, ಶೂಟಿಂಗ್ ಕ್ಯಾನ್ಸಲ್ ಮಾಡಿಕೊಂಡು ಹುಟ್ಟು ಹಬ್ಬವನ್ನು ಆಚರಿಸುತ್ತಿರುವುದು ವಿಶೇಷ.

Source: PUBLICTV KANNADA