ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲು ಕಾಂಗ್ರೆಸ್ ಇನ್ನಿಲ್ಲದ ಕಸರತ್ತು ನಡೆಸಿದೆ, ಇದಕ್ಕಾಗಿ ಬಿಜೆಪಿ ಹಾಗೂ ಜೆಡಿಎಸ್​ನ ಪ್ರಮುಖ ನಾಯಕರುಗಳಿಗೆ ಗಾಳ ಹಾಕುತ್ತಿದೆ. ಲೋಕಸಭಾ ಚುನಾವಣೆ ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ ಕಾಂಗ್ರೆಸ್ ಈ ಆಪರೇಷನ್​ ಹಸ್ತ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಇನ್ನು ಈ ಕಾಂಗ್ರೆಸ್​ ಆಪರೇಷನ್​ ಬಗ್ಗೆ ಸ್ವತಃ ಜೆಡಿಎಸ್​ ಶಾಸಕ ಬಿಚ್ಚಿಟ್ಟಿದ್ದಾರೆ.

ಬೆಂಗಳೂರು, (ಆಗಸ್ಟ್ 24): ಕಾಂಗ್ರೆಸ್ (Congress) ಆಪರೇಷನ್​ ಹಸ್ತದ ಮೂಲಕ ಬಿಜೆಪಿ-ಜೆಡಿಎಸ್​ ಶಾಸಕರುಗಳಿಗೆ ಬಲೆ ಬೀಸಿದೆ. ಈಗಾಗಲೇ ಬಿಜೆಪಿ(BJP) ಶಾಸಕ ಎಸ್​ಟಿ ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್​ ಕಾಂಗ್ರೆಸ್ ಆಪರೇಷನ್​ ಬಲೆಗೆ ಬಿದ್ದಿದ್ದಾರೆ ಎನ್ನುವ ಸುದ್ದಿ ರಾಜ್ಯ ರಾಜಕಾರಣದಲ್ಲಿ ಭಾರೀ ಸುದ್ದು ಮಾಡುತ್ತಿದೆ. ಬಿಜೆಪಿಗೆ ಮಾತ್ರವಲ್ಲ, ಜೆಡಿಎಸ್​​ಗೂ ಮರ್ಮಾಘಾತ ನೀಡಲು ಕಾಂಗ್ರೆಸ್ ಯೋಜನೆ ಹಾಕಿಕೊಡಿದ್ದು, ಜೆಡಿಎಸ್​ ಶಾಸಕರನ್ನು ಸೆಳೆಯುವ ಪ್ರಯತ್ನ ಮುಂದುವರೆದಿದೆ. ಇದಕ್ಕೆ ಪುಷ್ಟಿ ನೀಡುವಂತೆಕಾಂಗ್ರೆಸ್​ ಆಪರೇಷನ್ ಹಸ್ತದ (Congress Operation Hasta) ಬಗ್ಗೆ ಜೆಡಿಎಸ್(JDS)​ ಶಾಸಕ ಹೊಸ ಬಾಂಬ್ ಸಿಡಿಸಿದ್ದಾರೆ. ದಲಿತ ಸಮಾಜದ ಶಾಸಕರನ್ನ ಕಾಂಗ್ರೆಸ್ ಗೆ ಸೆಳೆಯಲು ಪ್ಲಾನ್ ನಡೆದಿದೆ. ನನಗೆ ದೆಹಲಿಗೆ ಬರುವಂತೆ‌ ನನಗೂ ಒತ್ತಡ ಹಾಕಿದ್ರು, ನಾನು ಹೋಗಿಲ್ಲ ಎಂದು ಮುಳಬಾಗಿಲು ಜೆಡಿಎಸ್ ಶಾಸಕ ಸಮೃದ್ದಿ ಮಂಜುನಾಥ್ ಅವರು ಕಾಂಗ್ರೆಸ್​ ಆಪರೇಷನ್ ಹಸ್ತ ಸೀಕ್ರೆಟ್​ ಬಿಚ್ಚಿಟ್ಟಿದ್ದಾರೆ.

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ಕೋಲಾರದ ಮುಳಬಾಗಿಲು ಜೆಡಿಎಸ್ ಶಾಸಕ ಸಮೃದ್ದಿ ಮಂಜುನಾಥ್, ಆಪರೇಷನ್ ಕಾಂಗ್ರೆಸ್ ಮೂಲಕ ಜೆಡಿಎಸ್ ಶಾಸಕರನ್ನ ಸೆಳೆಯುವ ಯತ್ನ ನಡೆದಿದೆ. ದೆಹಲಿಗೆ ಬರುವಂತೆ‌ ನನಗೂ ಒತ್ತಡ ಹಾಕಿದ್ರು. ಬಂಗಾರಪೇಟೆ ಶಾಸಕ ಎಸ್.ಎನ್‌.ನಾರಾಯಣಸ್ವಾಮಿ ಮೂಲಕ ಪಕ್ಷಕ್ಕೆ‌ ಸೆಳೆಯುವ ಯತ್ನಿಸಿದ್ರು. ಆದ್ರೆ, ನಾನು ಹೋಗಿಲ್ಲ. ಇನ್ನು ಜೆಡಿಎಸ್ ಶಾಸಕರು ಸೌಜನ್ಯಕ್ಕೂ ಅನುದಾನ ಕೇಳಲು ಸಿಎಂ ಬಳಿ ಹೋಗಿಲ್ಲ. ಎಲ್ಲಿ ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಅವರನ್ನು ಬೇಟಿ ಮಾಡಿದರೆ ಪಕ್ಷ ಬಿಡುತ್ತಾರೆ ಅಂತ ಕಥೆ ಕಟ್ಟುತ್ತಾರೋ ಎನ್ನುವ ಭಯಕ್ಕೆ ಹೋಗಿಲ್ಲ ಎಂದು ಹೇಳಿದರು.

ನಾನೆಂದು ಜೆಡಿಎಸ್ ಪಕ್ಷ ಬಿಡುವ ಮಾತಿಲ್ಲ, ನಾನು ಜೆಡಿಎಸ್ ಪಕ್ಷದ ಶಿಸ್ತಿನ ಸಿಪಾಯಿ. ಜೆಡಿಎಸ್ ಪಕ್ಷದ 19 ಶಾಸಕರು,‌‌ ಮಾಜಿ ಶಾಸಕರುಗಳು ಒಂದೇ ವೇದಿಕೆಯಲ್ಲಿ ಸೇರಲಿದ್ದೇವೆ. ಜೆಡಿಎಸ್ ಬಿಟ್ಟು ಯಾರು ಹೋಗಲ್ಲ. ಒಗಟ್ಟು ಪ್ರದರ್ಶನ ಮಾಡಲಿದ್ದೇವೆ. ಕಾಂಗ್ರೆಸ್ ಆಪರೇಷನ್ ವರ್ಕೌಟ್ ಆಗಲ್ಲ. ಕಾಂಗ್ರೆಸ್ ಹೈಕಮಾಂಡ್ 20 ಲೋಕಸಭಾ ಸ್ಥಾನ ಗೆಲ್ಲಲೇ‌ಬೇಕೆಂಬ ಟಾರ್ಗೆಟ್ ಕೊಟ್ಟಿರುವ ಹಿನ್ನಲೆಯಲ್ಲಿ ಆಪರೇಷನ್ ಕಾಂಗ್ರೆಸ್ ಅಂತ ಕಥೆ ಕಟ್ಟಿ ದಿಕ್ಕು ತಪ್ಪಿಸುತ್ತಿದ್ದಾರೆ. ಅದು ಕೆಲವೇ ದಿನಗಳಲ್ಲಿ ತಿಳಿಯಲಿದೆ ಎಂದರು.

ಅಲ್ಲಿ ರಿವರ್ಸ್ ಆಪರೇಷನ್ ನಡೆಯುತ್ತಿದೆ. ರಾಜಕಾರಣ ಎನ್ನುವುದು ಐಪಿಎಲ್ ಮ್ಯಾಚ್ ಇದ್ದಂಗೆ. ಯಾರು ಯಾವ ಟೀಂ ಟೀಶರ್ಟ್ ಹಾಕೊಂಡು ಫೀಲ್ಡಿಗೆ ಬರುತ್ತಾರೆ ಅನ್ನೋದು ಎಂಪಿ ಎಲೆಕ್ಷನ್ ಆದ‌ ಮೇಲೆ‌ ಗೊತ್ತಾಗುತ್ತದೆ. ಕಾಂಗ್ರೆಸ್ ಪಕ್ಷ ಅಭಿವೃದ್ಧಿ ಪರ ಇಲ್ಲ, ವರ್ಗಾವಣೆ ದಂಧೆ ಹಿಂದೆ ಬಿದ್ದಿದೆ. ಸದ್ಯದಲ್ಲೇ ಎಲ್ಲಾ ಗೊತ್ತಾಗುತ್ತದೆ. ಯಾರನ್ನು ಕೇಳಿದ್ರು ಈ ಸರ್ಕಾರ ಇರೋದು ಡೌಟ್ ಅಂತಾನೆ ಹೇಳುತ್ತಾರೆ. ಕಾದು ನೋಡಿ ಎಲ್ಲರಿಗು ಗೊತ್ತಾಗುತ್ತೆ ಎಂದು ಹೊಸ ಬಾಂಬ್ ಸಿಡಿಸಿದರು.

Source: TV9 KANNADA