ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಿಯಂತ್ರಣ ತಪ್ಪಿದ ಕೊರೊನಾ; ಸಮುದಾಯಕ್ಕೆ ಹರಡಿದ ಶಂಕೆ

Apr 17, 2021

ಈ ಮೊದಲು ಪ್ರವಾಸಿಗರಿಂದ ಮೈಸೂರಿಗೆ ಕೊರೊನಾ ಹಬ್ಬುವ ಭಯ ಎಂದು ವಿಶ್ಲೇಷಿಸಲಾಗುತ್ತಿತ್ತಾದರೂ ಇದೀಗ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾದ ನಂತರವೂ ದಿನಕ್ಕೆ 300ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿರುವುದು ತಲೆಬೇನೆ ಸೃಷ್ಟಿಸಿದೆ.

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದ್ದು, ಪ್ರವಾಸಿಗರ ಸಂಖ್ಯೆ ಕಡಿಮೆ ಇದ್ದರೂ ಸೋಂಕು ಹೆಚ್ಚಳವಾಗುತ್ತಿರುವುದು ಅಧಿಕಾರಿಗಳನ್ನು ಹೊಸ ಚಿಂತೆಗೆ ನೂಕಿದೆ. ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರು ಹೆಚ್ಚಾಗುತ್ತಲೇ ಇದ್ದು, ಪ್ರತಿದಿನವೂ ಸರಿಸುಮಾರು 300ಕ್ಕೂ ಅಧಿಕ ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ. ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಮೈಸೂರಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಸಿಗುತ್ತಿಲ್ಲವಾ ಎಂಬ ಅನುಮಾನ ಮೂಡಿದ್ದು, ಸೋಂಕಿತರ ಪ್ರಮಾಣ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಈ ಮೊದಲು ಪ್ರವಾಸಿಗರಿಂದ ಮೈಸೂರಿಗೆ ಕೊರೊನಾ ಹಬ್ಬುವ ಭಯ ಎಂದು ವಿಶ್ಲೇಷಿಸಲಾಗುತ್ತಿತ್ತಾದರೂ ಇದೀಗ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾದ ನಂತರವೂ ದಿನಕ್ಕೆ 300ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿರುವುದು ತಲೆಬೇನೆ ಸೃಷ್ಟಿಸಿದೆ. ಪ್ರಸ್ತುತ ಸನ್ನಿವೇಶವನ್ನು ಗಮನಿಸಿದರೆ ಜನರ ನಿರ್ಲಕ್ಷ್ಯದಿಂದಲೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಪ್ರಾಥಮಿಕ ಸಂಪರ್ಕ ಇದ್ದರು ಕೊರೊನಾ‌ ಪರೀಕ್ಷೆ ಮಾಡಿಸಿಕೊಳ್ಳಲು ಜನರು ಮುಂದಾಗದ ಕಾರಣ ಬಹುತೇಕ ಪ್ರಕರಣಗಳು ಸಂಪರ್ಕದಿಂದಲೇ ಬರುತ್ತಿದೆ ಎಂಬ ಅಭಿಪ್ರಾಯ ಬಲವಾಗಿದೆ. ಅಲ್ಲದೇ ಸದ್ಯ ಕೊರೊನಾ ವೈರಾಣು ಸಮುದಾಯಕ್ಕೆ ಹರಡಿರುವ ಆತಂಕವೂ ಮೂಡಿದ್ದು ಪರಿಸ್ಥಿತಿ ಬಿಗಾಡಿಯಿಸುವ ಮುನ್ನ ಜನರು ಎಚ್ಚೆತ್ತುಕೊಳ್ಳಬೇಕಿದೆ.

ಮತ್ತೆ ಕೊರೊನಾ ಹಾಟ್‌ಸ್ಪಾಟ್ ಆಗುತ್ತಾ ಮೈಸೂರು?
ನಗರದಲ್ಲಿ ಕಳೆದೊಂದು ವಾರದಲ್ಲಿ 2,442 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 7 ದಿನಗಳಲ್ಲಿ 28 ಸೋಂಕಿತರು ಸಾವಿಗೀಡಾಗಿದ್ದಾರೆ. ಕಳೆದ ಬಾರಿ ಮೈಸೂರಿನಲ್ಲಿ ಜುಬಿಲೆಂಟ್ ಹಾಗೂ ಜೆ.ಕೆ.ಟಯರ್ಸ್​ ಕಾರ್ಖಾನೆಗಳಿಂದ ಹೆಚ್ಚಾಗಿದ್ದ ಕೊರೊನಾ ಜನರನ್ನು ಹೈರಾಣಾಗಿಸಿತ್ತು. ಕೊರೊನಾ ನಿಯಂತ್ರಿಸಲು ಸ್ಥಳೀಯ ಆಡಳಿತ ವ್ಯವಸ್ಥೆ ಇನ್ನಿಲ್ಲದಂತೆ ಹೆಣಗಾಡಿತ್ತು. ಸದ್ಯ ಅಂತಹದ್ದೇ ಪರಿಸ್ಥಿತಿ ಮತ್ತೆ ಎದುರಾಗುವ ಲಕ್ಷಣಗಳು ಗೋಚರಿಸುತ್ತಿದೆಯಾದರೂ ಜನರು ಎಚ್ಚೆತ್ತುಕೊಳ್ಳದ ಕಾರಣ ಮುಂದಿನ ದಿನಗಳಲ್ಲಿ ಅತ್ಯಧಿಕ ಕೊರೊನಾ ಸೋಂಕಿತರು ಕಾಣಿಸಿಕೊಳ್ಳುವ ಸಂಭವವಿದೆ.

ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖ
ಮೈಸೂರು ನಗರದಲ್ಲಿ ನೈಟ್ ಕರ್ಫ್ಯೂ ಜಾರಿಯಲ್ಲಿರುವುದರಿಂದ ಪ್ರವಾಸಿ ತಾಣಗಳಿಗೆ ಜನರೇ ಇಲ್ಲದಂತಾಗಿದೆ. ನಗರದ ಪ್ರವಾಸಿ ತಾಣಗಳೆಲ್ಲಾ ಬಹುತೇಕ ಖಾಲಿ ಖಾಲಿಯಾಗಿದೆ. ಯಾವಾಗಲೂ ಭಕ್ತರೇ ತುಂಬಿಕೊಳ್ಳುತ್ತಿದ್ದ ಚಾಮುಂಡಿ ಬೆಟ್ಟಕ್ಕೆ ಜನರೇ ಇಲ್ಲದಂತಾಗಿದೆ. ಮೈಸೂರಿನ ಮೃಗಾಲಯ, ಅರಮನೆಗೆ ಆಗಮಿಸುವವರ ಸಂಖ್ಯೆ ಕಡಿಮೆಯಾಗಿದೆ. ಮೊದಲೆಲ್ಲಾ ವೀಕೆಂಡ್ ಬಂತೆಂದರೆ ಸಾವಿರಾರು ಜನರು ಅರಮನೆ ನೋಡಲು ಬರುತ್ತಿದ್ದರು. ಆದರೆ ಈಗ ನೈಟ್​ ಕರ್ಫ್ಯೂ ಜಾರಿಯಲ್ಲಿರುವುದರಿಂದ ಪ್ರವಾಸಕ್ಕೆ ಆಗಮಿಸುವವರ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದೆ.

Source:TV9Kannada