ಶುಲ್ಕ ಸಮರಕ್ಕೆ ಎಸ್​ಎಸ್​ಎಲ್​ಸಿ ಪರೀಕ್ಷೆಯಿಂದ ವಂಚಿತಳಾದ ಪ್ರತಿಭಾನ್ವಿತ ವಿದ್ಯಾರ್ಥಿನಿ; ಶಿಕ್ಷಣ ಸಚಿವ ಸುರೇಶ್ ಕುಮಾರ್​ ನಿರ್ಲಕ್ಷ್ಯ

Jul 16, 2021

ಕೊರಟಗೆರೆಯ ಹನುಮಂತಪುರ ನಿವಾಸಿ ಗ್ರೀಷ್ಮ ನಾಯಕ್.ಎನ್ ಮೂಡಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ 2020-21 ನೇ ಸಾಲಿನ 10 ನೇ ತರಗತಿ ಅಭ್ಯಾಸ ಮಾಡುತ್ತಿದ್ದಳು. ಕಳೆದ ವರ್ಷದ ಶಾಲಾ ಶುಲ್ಕ ಮತ್ತು ವಸತಿ ಮತ್ತು ಊಟದ ಶುಲ್ಕ ಬಾಕಿಯಿರುವುದಕ್ಕೆ, ಶಾಲಾ ಸಂಸ್ಥೆ ಎಸ್ಎಸ್ಎಲ್​ಸಿ ಪರೀಕ್ಷೆಗೆ ನೋಂದಾಯಿಸಿಲ್ಲ.

ಬೆಂಗಳೂರು: ಶಾಲೆ ಶುಲ್ಕ ಪಾವತಿಸುವ ಸಮರಕ್ಕೆ ಪ್ರತಿಭಾನ್ವಿತ ವಿದ್ಯಾರ್ಥಿನಿ ಪರೀಕ್ಷೆಯಿಂದ ವಂಚಿತಳಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಎಸ್ಎಸ್ಎಲ್​ಸಿ ವಿದ್ಯಾರ್ಥಿನಿ ಗ್ರೀಷ್ಮ ನಾಯಕ್.ಎನ್ ಫೀಸ್ ಕಟ್ಟಿಲ್ಲ ಎಂದು ಖಾಸಗಿ ಶಿಕ್ಷಣ ಸಂಸ್ಥೆ ಪರೀಕ್ಷೆಗೆ ನಿರ್ಬಂಧ ಹೇರಿದೆ. ಹೀಗಾಗಿ ನೊಂದ ವಿದ್ಯಾರ್ಥಿನಿ ಡಿಸೆಂಬರ್ ನಲ್ಲಿಯೇ ಶಿಕ್ಷಣ ಸಚಿವ ಸುರೇಶ್ ಕುಮಾರ್​ ಅವರ ಬಳಿ ತನ್ನ ಸಮಸ್ಯೆಯನ್ನು ಹೇಳಿದ್ದಳು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಪರೀಕ್ಷೆ ಬರೆಯಲೇ ಬೇಕು ಎಂದು ನಿರ್ಧರಿಸಿದ ವಿದ್ಯಾರ್ಥಿನಿ ಸದ್ಯ ನ್ಯಾಯಕ್ಕಾಗಿ ಮಕ್ಕಳ ಹಕ್ಕುಗಳ ಆಯೋಗದ ಮೊರೆ ಹೋಗಿದ್ದಾಳೆ

ಕೊರಟಗೆರೆಯ ಹನುಮಂತಪುರ ನಿವಾಸಿ ಗ್ರೀಷ್ಮ ನಾಯಕ್.ಎನ್ ಮೂಡಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ 2020-21 ನೇ ಸಾಲಿನ 10 ನೇ ತರಗತಿ ಅಭ್ಯಾಸ ಮಾಡುತ್ತಿದ್ದಳು. ಕಳೆದ ವರ್ಷದ ಶಾಲಾ ಶುಲ್ಕ ಮತ್ತು ವಸತಿ ಮತ್ತು ಊಟದ ಶುಲ್ಕ ಬಾಕಿಯಿರುವುದಕ್ಕೆ, ಶಾಲಾ ಸಂಸ್ಥೆ ಎಸ್ಎಸ್ಎಲ್​ಸಿ ಪರೀಕ್ಷೆಗೆ ನೋಂದಾಯಿಸಿಲ್ಲ. 9ನೇ ತರಗತಿಯಲ್ಲಿ 96% ಅಂಕ ಗಳಿಸಿದ್ದೇನೆ, ಹೀಗಾಗಿ 10 ನೇ ತರಗತಿ ಪರೀಕ್ಷೆ ಬರೆಯಲು ಅವಕಾಶ ಕೊಡಿಸಿ ಎಂದು ವಿದ್ಯಾರ್ಥಿನಿ ಗ್ರೀಷ್ಮಾ ಮನವಿ ಮಾಡಿದ್ದಾಳೆ.

ಇನ್ನು ಈ ಸಮಸ್ಯೆ ಗಮನಕ್ಕೆ ತಂದ ಮೇಲೆ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ವಿದ್ಯಾರ್ಥಿನಿಗೆ ಬರುವ ಆಗಸ್ಟ್​ನಲ್ಲಿ ಪರೀಕ್ಷೆ ತೆಗೆದುಕೊಳ್ಳಲು ತಿಳಿಸಿದ್ದಾರೆ. ಹೀಗಾಗಿ ನೊಂದ ವಿದ್ಯಾರ್ಥಿನಿ ಪ್ರಸಕ್ತ ಸಾಲಿನಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಮನವಿ ಮಾಡಿದ್ದಾಳೆ. ಅಲ್ಲದೆ ಕೊರೊನಾ ಸೋಂಕಿತ ಮಕ್ಕಳಿಗೂ ಎಕ್ಸಾಂ ಬರೆಯಲು ಅವಕಾಶ ನೀಡಿದ್ದೀರಾ, ಅವರಿಗೆ ಪ್ರತ್ಯೇಕ ಕೊಠಡಿ ಅಥವಾ ಕೊವಿಡ್ ಕೇರ್ ಸೆಂಟರ್​ನಲ್ಲಿ ಪರೀಕ್ಷೆ ವ್ಯವಸ್ಥೆ ಮಾಡಿದ್ದೀರಾ. ಪರೀಕ್ಷೆ ಬರೆಯುವ ಉತ್ಸಾಹ ಇರುವ ನನಗೆ ಮಾತ್ರ ಯಾಕಿಲ್ಲ ಅವಕಾಶ ಎಂದು ಗ್ರೀಷ್ಮಾ ತನ್ನ ಅಳಲನ್ನು ತೋಡಿಕೊಂಡಿದ್ದಾಳೆ.

ನೀವು ನಿಗದಿಪಡಿಸಿದ ಎಕ್ಸಾಂ ಸೆಂಟರ್​ಗೆ ಬಂದು ಪರೀಕ್ಷೆ ಎದುರಿಸಲು ಗ್ರೀಷ್ಮಾ ಸಿದ್ಧವಾಗಿದ್ದಾಳೆ ಎಂದು ಗ್ರೀಷ್ಮಾ ಪೋಷಕರು ತಿಳಿಸಿದ್ದು, ಇದೇ 19 ಮತ್ತು 22 ರಂದು ಪರೀಕ್ಷೆಗೆ ಅವಕಾಶ ನೀಡಿ ಎಂದು ಮನವಿ ಮಾಡಿದ್ದಾರೆ. ಆದರೆ ಶಿಕ್ಷಣ ಇಲಾಖೆಯಿಂದ ನ್ಯಾಯ ಸಿಗದ ಕಾರಣ ಮಕ್ಕಳ ಹಕ್ಕುಗಳ ಮೊರೆ ಹೋದ ವಿದ್ಯಾರ್ಥಿನಿ ಮತ್ತು ಆಕೆಯ ಪೋಷಕರು ಇಂದು ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.

Source: TV9 Kannada