ವಿಮಾನದ ಮೇಲೆ ಸೋನು ಸೂದ್ಗೆ ವಿಶೇಷ ಗೌರವ! ತಂದೆ-ತಾಯಿಯೇ ಇಲ್ಲ ಎಂದು ಮರುಗಿದ ನಟ
ಲಾಕ್ಡೌನ್ ವೇಳೆ ವಿದೇಶದಲ್ಲಿ ಸಿಲುಕುಕೊಂಡಿದ್ದ ಸಾವಿರಾರು ಭಾರತೀಯರನ್ನು ಕರೆತರು ಸೋನು ಸೂದ್ ಮುಂದಾಗಿದ್ದರು. ಅವರ ಸಾಹಸಕ್ಕೆ ಸ್ಪೈಸ್ ಜೆಟ್ ಸಂಸ್ಥೆ ಕೈ ಜೋಡಿಸಿತ್ತು. ಅದನ್ನು ಈ ಸಂಸ್ಥೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದೆ.
ಬಹುಭಾಷಾ ನಟ ಸೋನು ಸೂದ್ ಅವರು ಅನೇಕರ ಪಾಲಿಗೆ ರಿಯಲ್ ಹೀರೋ. ಲಾಕ್ಡೌನ್ ಸಂದರ್ಭದಲ್ಲಿ ಅವರು ಬಡವರಿಗೆ ಮಾಡಿದ ಸಹಾಯ ಒಂದೆರಡಲ್ಲ. ಸಾರಿಗೆ ವ್ಯವಸ್ಥೆ ಇಲ್ಲದೇ ಇದ್ದಾಗ ಲಕ್ಷಾಂತರ ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ಕಳುಹಿಸಿಕೊಡುವ ಜವಾಬ್ದಾರಿಯನ್ನು ಸೋನು ಹೊತ್ತುಕೊಂಡಿದ್ದರು. ಅಲ್ಲದೆ, ಲಾಕ್ಡೌನ್ ಬಳಿಕವೂ ಅವರು ಬಡವರಿಗೆ ಸಹಾಯ ಮಾಡುವುದನ್ನು ನಿಲ್ಲಿಸಲಿಲ್ಲ. ಅದಕ್ಕಾಗಿ ಅವರಿಗೆ ಈಗಲೂ ಎಲ್ಲರಿಂದ ಗೌರವ ಸಂದಾಯ ಆಗುತ್ತಲೇ ಇದೆ.
ಹೋದಲ್ಲೆಲ್ಲ ಸೋನುಗೆ ಸನ್ಮಾನ ಮಾಡಲಾಗುತ್ತಿದೆ. ಈಗ ಮತ್ತೊಂದು ವಿಶೇಷ ಗೌರವ ಅವರಿಗೆ ಸಿಕ್ಕಿದೆ. ಸ್ಪೈಸ್ ಜೆಟ್ ವಿಮಾನದ ಮೇಲೆ ಸೋನು ಫೋಟೋವನ್ನು ದೊಡ್ಡದಾಗಿ ಹಾಕಲಾಗಿದೆ. ದೇಶಾದ್ಯಂತ ಈ ವಿಮಾನಗಳು ಹಾರಾಡುತ್ತಿವೆ. ಆ ಮೂಲಕ ಬಡವರ ಪಾಲಿನ ರಿಯಲ್ ಹೀರೋಗೆ ಗೌರವ ಸಲ್ಲಿಕೆ ಆಗುತ್ತಿದೆ. ಅದನ್ನು ಕಂಡು ಸೋನು ಫ್ಯಾನ್ಸ್ ಖುಷಿ ಆಗಿದ್ದಾರೆ.
ಸ್ವತಃ ಸೋನು ಕೂಡ ಈ ಬಗ್ಗೆ ಸಂತಸದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಲಾಕ್ಡೌನ್ ವೇಳೆ ವಿದೇಶದಲ್ಲಿ ಸಿಲುಕುಕೊಂಡಿದ್ದ ಸಾವಿರಾರು ಭಾರತೀಯರನ್ನು ಕರೆತರಲು ಸೋನು ಸೂದ್ ಮುಂದಾಗಿದ್ದರು. ಅವರ ಸಾಹಸಕ್ಕೆ ಸ್ಪೈಸ್ ಜೆಟ್ ಸಂಸ್ಥೆ ಕೈ ಜೋಡಿಸಿತ್ತು. ಅದನ್ನು ಈ ಸಂಸ್ಥೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದೆ. ತಮ್ಮ ಜೊತೆ ಒಳ್ಳೆಯ ಕಾರ್ಯದಲ್ಲಿ ಭಾಗಿ ಆದ ಸೋನುಗೆ ಈಗ ಇಂಥ ವಿಶೇಷ ರೀತಿಯಲ್ಲಿ ಗೌರವ ಸೂಚಿಸಿದೆ.
‘ಈ ಫೋಟೋಗಳನ್ನು ನೋಡಿದಾಗ ನನಗೆ ನಿಜಕ್ಕೂ ಹೆಮ್ಮೆ ಎನಿಸುತ್ತದೆ. ದೇಶದ ಹಲವಾರು ಏರ್ಪೋರ್ಟ್ಗಳಲ್ಲಿ ಈ ವಿಮಾನಗಳಿವೆ. ಲೇಹ್, ಪಂಜಾಬ್, ಹೈದರಾಬಾದ್, ದೆಹಲಿ ಮುಂತಾದ ಕಡೆಗಳಿಂದ ಜನರು ಅದರ ಫೋಟೋ ತೆಗೆದು ನನಗೆ ಕಳಿಸುತ್ತಿದ್ದಾರೆ. ನಾನು ಧನ್ಯ. ಆದರೆ ಈ ಸಂದರ್ಭದಲ್ಲಿ ಇದನ್ನೆಲ್ಲ ನನ್ನ ತಂದೆ-ತಾಯಿ ನೋಡಲು ಸಾಧ್ಯವಾಗಲಿಲ್ಲ’ ಎಂದು ಸೋನು ಎಮೋಷನಲ್ ಆಗಿದ್ದಾರೆ.
ಮೊದಲೆಲ್ಲ ವಿಲನ್ ಆಗಿ ಸಿನಿಮಾಗಳಲ್ಲಿ ನಟಿಸುತ್ತಿದ್ದ ಸೋನುಗೆ ಈಗ ಹೀರೋ ಪಾತ್ರಗಳು ಅರಸಿ ಬರುತ್ತಿವೆ. ಅಷ್ಟರಮಟ್ಟಿಗೆ ಅವರ ರಿಯಲ್ ಲೈಫ್ ಇಮೇಜ್ ಬದಲಾಗಿದೆ.
Source:TV9Kannada