ವಾಹನ, ಟಿವಿ, ಮೊಬೈಲ್ ಫೋನ್​ ಖರೀದಿಸ್ತೀರಾ? ತುಸು ತಾಳಿ, ಕಡಿಮೆಯಾಗಲಿದೆ ದರ

Feb 3, 2023

ಟಿವಿ ಪ್ಯಾನೆಲ್​ ಓಪನ್ ಸೆಲ್ ಉತ್ಪಾದನೆಗೆ ಬಳಸುವ ನಿರ್ದಿಷ್ಟ ಭಾಗಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ 5ರಿಂದ ಶೇ 2.5ಕ್ಕೆ ಇಳಿಕೆ ಮಾಡಲಾಗಿದೆ. ಅದೇ ರೀತಿ ಎಲೆಕ್ಟ್ರಿಕ್ ವಾಹನಗಳ ಮೇಲಿನ ಸುಂಕದಲ್ಲಿಯೂ ಇಳಿಕೆ ಮಾಡಲಾಗಿದೆ.

ನವದೆಹಲಿ: ಟಿವಿ, ಮೊಬೈಲ್ ಫೋನ್ ಅಥವಾ ಎಲೆಕ್ಟ್ರಿಕ್ ವಾಹನ ಖರೀದಿಸಲು ಯೋಚಿಸುತ್ತಿದ್ದೀರಾ? ಹಾಗಿದ್ದರೆ ತುಸು ಕಾಯವುದು ಒಳ್ಳೆಯದು. ಈ ವಸ್ತುಗಳ ಮೇಲಿನ ಕಸ್ಟಮ್ಸ್ ಸುಂಕವನ್ನು (Customs Duty) ಕೇಂದ್ರ ಬಜೆಟ್​​ನಲ್ಲಿ ಕಡಿತ ಮಾಡಲಾಗಿದೆ. ಪರಿಣಾಮವಾಗಿ ಮುಂದಿನ ಹಣಕಾಸು ವರ್ಷದಲ್ಲಿ ಇವುಗಳ ಬೆಲೆ ತುಸು ಕಡಿಮೆಯಾಗಲಿದೆ. ಆದರೆ ಚಿನ್ನ, ಬೆಳ್ಳಿ ಹಾಗೂ ಆಮದು ಮಾಡಲಾದ ಕಾರಿನ ಮೇಲಿನ ಕಸ್ಟಮ್ಸ್ ಸುಂಕವನ್ನು ಹೆಚ್ಚಿಸಲಾಗಿದೆ. ಹೀಗಾಗಿ ಇವುಗಳ ಬೆಲೆಯಲ್ಲಿ ಹೆಚ್ಚಳವಾಗಲಿದೆ. ದೇಶದಲ್ಲಿ ಮೊಬೈಲ್ ಫೋನ್ ಉತ್ಪಾದನೆಯನ್ನು ಇನ್ನಷ್ಟು ಹೆಚ್ಚಿಸುವ ಸಲುವಾಗಿ ಮೊಬೈಲ್ ಫೋನ್​ ಬಿಡಿಭಾಗಗಳ ಆಮದಿಗೆ ಕಸ್ಟಮ್ಸ್ ಸುಂಕದಿಂದ ವಿನಾಯಿತಿ ನೀಡಲಾಗುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಬಜೆಟ್​​ನಲ್ಲಿ ಘೋಷಣೆ ಮಾಡಿದ್ದಾರೆ.

ಮೊಬೈಲ್​ ಫೋನ್ ಉತ್ಪಾದನೆಯಲ್ಲಿ ಬಳಸುವ ಕ್ಯಾಮೆರಾ ಲೆನ್ಸ್ ಹಾಗೂ ಇತರ ಕೆಲವು ಬಿಡಿಭಾಗಗಳ ಆಮದಿನ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ 2.5ರಿಂದ ಶೂನ್ಯಕ್ಕೆ ಇಳಿಕೆ ಮಾಡಲಾಗಿದೆ. ಲಿಥಿಯಮ್ ಐಯೋನ್ಸ್ ಸೆಲ್ಸ್​ ಬ್ಯಾಟರಿ ಮೇಲಿನ ತೆರಿಗೆ ವಿನಾಯಿತಿಯನ್ನು ಇನ್ನೂ ಒಂದು ವರ್ಷ ಮುಂದುವರಿಸಲಾಗುವುದು ಎಂದು ಬಜೆಟ್​ನಲ್ಲಿ ತಿಳಿಸಲಾಗಿದೆ. 2014-15ರಲ್ಲಿ ದೇಶದಲ್ಲಿ 5.8 ಕೋಟಿಯಷ್ಟು ಮೊಬೈಲ್ ಫೋನ್ ಉತ್ಪಾದನೆಯಾಗುತ್ತಿದ್ದರೆ ಈ ಹಣಕಾಸು ವರ್ಷದಲ್ಲಿ 31 ಕೋಟಿ ಉತ್ಪಾದನೆ ಮಾಡಲಾಗಿದೆ. ಸರ್ಕಾರ ಕೈಗೊಂಡ ಅನೇಕ ಉಪಕ್ರಮಗಳಿಂದಾಗಿ ಇದು ಸಾಧ್ಯವಾಗಿದೆ. ಮೊಬೈಲ್ ಉತ್ಪಾದನೆ ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಬಿಡಿಭಾಗಗಳ ಆಮದಿಗೆ ಕಸ್ಟಮ್ಸ್ ಸುಂಕದಲ್ಲಿ ವಿನಾಯಿತಿ ನೀಡಲಾಗುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಮತ್ತೊಂದೆಡೆ ಟಿವಿ ಪ್ಯಾನೆಲ್​ ಓಪನ್ ಸೆಲ್ ಉತ್ಪಾದನೆಗೆ ಬಳಸುವ ನಿರ್ದಿಷ್ಟ ಭಾಗಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ 5ರಿಂದ ಶೇ 2.5ಕ್ಕೆ ಇಳಿಕೆ ಮಾಡಲಾಗಿದೆ. ಅದೇ ರೀತಿ ಎಲೆಕ್ಟ್ರಿಕ್ ವಾಹನಗಳ ಮೇಲಿನ ಸುಂಕದಲ್ಲಿಯೂ ಇಳಿಕೆ ಮಾಡಲಾಗಿದೆ.

ದುಬಾರಿಯಾಗಲಿದೆ ಚಿನ್ನ, ಬೆಳ್ಳಿ
ಚಿನ್ನ ಹಾಗೂ ಬೆಳ್ಳಿ ಮೇಲಿನ ಆಮದು ಸುಂಕವನ್ನು ಹೆಚ್ಚಿಸಿರುವುದರಿಂದ ಮುಂದಿನ ಹಣಕಾಸು ವರ್ಷದಲ್ಲಿ ಉಭಯ ಲೋಹಗಳ ದರದಲ್ಲಿ ತುಸು ಹೆಚ್ಚಳವಾಗುವ ಸಾಧ್ಯತೆ ಇದೆ. ಇದರಿಂದ, ಈಗಾಗಲೇ ದರ ಏರಿಕೆಯಿಂದ ಕಂಗೆಟ್ಟಿರುವ ಆಭರಣ ಪ್ರಿಯರಿಗೆ ಮತ್ತೆ ಬೆಲೆ ಹೆಚ್ಚಳದ ಬರೆ ತಟ್ಟಲಿದೆ. ಉಳಿದಂತೆ ಸೀಲಿಂಗ್ ಫ್ಯಾನ್, ತಂಬಾಕು ಉತ್ಪನ್ನಗಳು, ವೈದ್ಯಕೀಯ ಉಪಕರಣಗಳು, ಚಪ್ಪಲಿ, ಲೆದರ್ ಶೂ, ಎಲೆಕ್ಟ್ರಿಕಲ್ ಆಟಿಕೆಗಳು, ಲೌಡ್​ಸ್ಪೀಕರ್​ಗಳು, ಹೆಡ್​ಫೋನ್ ಹಾಗೂ ಇಯರ್​ಫೋನ್​ಗಳು, ಎಕ್ಸ್​ರೇ ಯಂತ್ರಗಳು ದುಬಾರಿಯಾಗಲಿವೆ.

Source: TV9Kannada