ರಷ್ಯಾ-ಉಕ್ರೇನ್ ನಡುವೆ ಯುದ್ಧಾತಂಕ; ನ್ಯಾಟೋ ಬಲವರ್ಧನೆಗೆ 3000 ಯೋಧರನ್ನು ಪೂರ್ವ ಯುರೋಪ್ಗೆ ಕಳಿಸಿದ ಯುಎಸ್
ದೆಹಲಿ: ರಷ್ಯಾ ಮತ್ತು ಉಕ್ರೇನ್ ಮಧ್ಯೆ ಯುದ್ಧ ಸನ್ನಿವೇಶ ಉಂಟಾಗಿದೆ. ಯಾವುದೇ ಕ್ಷಣದಲ್ಲೂ ಆಕ್ರಮಣ ತೀವ್ರಗೊಳ್ಳಬಹುದು ಎಂಬ ಆತಂಕದ ಮಧ್ಯೆಯೇ ರಷ್ಯಾ ಇದೀಗ ತನ್ನ ಸಾವಿರಾರು ಸೈನಿಕರನ್ನು, ಫಿರಂಗಿಗಳನ್ನು, ಯೋಧರಿಗಾಗಿ ರಕ್ಷಾಕವಚಗಳನ್ನು ಉಕ್ರೇನ್ ಗಡಿಗೆ ಕಳಿಸುತ್ತಿರುವುದು ಸೆಟಲೈಟ್ ಫೋಟೋದಲ್ಲಿ ಕಂಡುಬಂದಿದೆ. ಒಂದೆಡೆ ರಷ್ಯಾ ತನ್ನ ಸೈನ್ಯ ಬಲ ಏರಿಸುತ್ತಿದ್ದರೆ, ಇನ್ನೊಂದೆಡೆ ಅಮೆರಿಕ ಮತ್ತು ಮಿತ್ರಪಕ್ಷಗಳು ತಮ್ಮ ಸೇನಾ ಒಕ್ಕೂಟವಾದ ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ (North Atlantic Treaty Organization- NATO )ಯ ಪಡೆಯನ್ನು ಉಕ್ರೇನ್ಗೆ ಕಳಿಸಿ, ಸಹಕಾರ ನೀಡುತ್ತಿವೆ.
ಯುಎಸ್ ಬುಧವಾರ ಸುಮಾರು ಮೂರು ಸಾವಿರ ಸೈನಿಕರನ್ನು ಪೂರ್ವ ಯುರೋಪ್ಗೆ ಕಳಿಸುವ ಮೂಲಕ ನ್ಯಾಟೋ ಪಡೆಯನ್ನು ಬಲಗೊಳಿಸಿದೆ. ಉಕ್ರೇನ್ ಬಾರ್ಡರ್ನಲ್ಲಿ ಲಕ್ಷಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಿರುವ ರಷ್ಯಾ ಅವರನ್ನು ಹಿಂಪಡೆಯಲು ಹಿಂದೇಟು ಹಾಕುತ್ತಿದೆ. ಯುಎಸ್ ಮತ್ತು ಮಿತ್ರ ರಾಷ್ಟ್ರಗಳು ಈಗಾಗಲೇ ಉಕ್ರೇನ್ ಸಹಾಯಕ್ಕೆ ನಿಂತಿದ್ದು, ಯಾವುದೇ ಕ್ಷಣಕ್ಕೆ ಸಿದ್ಧವಾಗುವಂತೆ ಅಮೆರಿಕ ತನ್ನ ಸುಮಾರು 8500 ಯೋಧರಿಗೆ ಹೇಳಿದೆ. ಬುಧವಾರ ಜರ್ಮನಿಯಲ್ಲಿದ್ದ ಯುಎಸ್ನ 1000 ಯೋಧರನ್ನು ರೋಮಾನಿಯಾಕ್ಕೆ ಕಳಿಸಲಾಗಿದ್ದು ಮತ್ತು ಯುಸ್ನಲ್ಲಿದ್ದ 2000 ಸೈನಿಕರನ್ನು ಜರ್ಮನಿ ಮತ್ತು ಪೋಲ್ಯಾಂಡ್ಗೆ ಕಳಿಸಲಾಗಿದೆ. ಒಟ್ಟಾರೆ ನ್ಯಾಟೋ ಪಡೆಗಳು ಉಕ್ರೇನ್ಗೆ ರಕ್ಷಾ ಕವಚದಂತೆ ನಿಂತಿವೆ.
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರು ತುಂಬ ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದಾರೆ. ಅವರು ಹಾಗೆ ನಡೆದುಕೊಳ್ಳುವವರೆಗೂ ನಾವು ನ್ಯಾಟೋ ಮಿತ್ರರಾಷ್ಟ್ರಗಳು ಉಕ್ರೇನ್ಗೆ ಎಲ್ಲ ರೀತಿಯ ಬೆಂಬಲವನ್ನೂ ನೀಡುತ್ತಲೇ ಇರುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಆದರೆ ಯುಎಸ್ ಹೆಚ್ಚುವರಿ ಸೈನಿಕರನ್ನು ಜಮಾವಣೆ ಮಾಡಿದ್ದಕ್ಕೆ ರಷ್ಯಾ ಕಿಡಿಕಾರಿದೆ. ಯುಎಸ್ ವಿನಾಶಕಾರಿ ಹೆಜ್ಜೆಯನ್ನಟ್ಟಿದೆ ಎಂದು ರಷ್ಯಾ ವಿದೇಶಾಂಗ ವ್ಯವಹಾರಗಳ ಕಿರಿಯ ಸಚಿವ ಅಲೆಕ್ಸಾಂಡರ್ ಗ್ರುಷ್ಕೋ ಆರೋಪಿಸಿದ್ದಾರೆ.
Source: tv9kannada