ಯುವರತ್ನನಿಗೆ ರಿಲೀಫ್: ಏಪ್ರಿಲ್ 7ರವರೆಗೂ ಥಿಯೇಟರ್ ಹೌಸ್ ಫುಲ್ಗೆ ಅವಕಾಶ
ಫಿಲ್ಮ್ ಚೇಂಬರ್ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ, ಏಪ್ರಿಲ್ 7ರವರೆಗೂ ಶೇ.100ರಷ್ಟು ಸೀಟು ಭರ್ತಿಗೆ ಅವಕಾಶ ನೀಡಿದೆ. ಏಪ್ರಿಲ್ 7ರ ನಂತರ ಶೇ.50ರಷ್ಟು ಭರ್ತಿಗೆ ಮಾತ್ರ ಅವಕಾಶ ನೀಡುವುದಾಗಿ ತಿಳಿಸಿದೆ.
ಬೆಂಗಳೂರು: ಕೊರೊನಾ ನಿಯಮಾವಳಿಗಳು ಹೆಚ್ಚಾದ ಕಾರಣ ರಾಜ್ಯ ಸರ್ಕಾರ ಕಠಿಣ ಮಾರ್ಗದರ್ಶಿ ಬಿಡುಗಡೆಗೊಳಿಸಿತ್ತು. ಥಿಯೇಟರ್ನಲ್ಲಿ ಕೇವಲ ಶೇ. 50ರಷ್ಟು ಸೀಟು ಭರ್ತಿಗೆ ಅವಕಾಶ ನೀಡಿತ್ತು. ಸರ್ಕಾರದ ಈ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಸಿನಿಮಾ ರಂಗಕ್ಕೆ ಕೊನೆಗೂ ಜಯ ಸಿಕ್ಕಿದೆ. ಸರ್ಕಾರ ಕೈಗೊಂಡ ಕಠಿಣ ನಿರ್ಧಾರವನ್ನು ಏಪ್ರಿಲ್ 7ರ ವರೆಗೆ ಸಡಿಲಿಸುವುದಾಗಿ ತಿಳಿಸಿದೆ.
ಫಿಲ್ಮ್ ಚೇಂಬರ್ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ, ಏಪ್ರಿಲ್ 7ರವರೆಗೂ ಶೇ.100ರಷ್ಟು ಸೀಟು ಭರ್ತಿಗೆ ಅವಕಾಶ ನೀಡಿದೆ. ಏಪ್ರಿಲ್ 7ರ ನಂತರ ಶೇ.50ರಷ್ಟು ಭರ್ತಿಗೆ ಮಾತ್ರ ಅವಕಾಶ ನೀಡುವುದಾಗಿ ತಿಳಿಸಿದೆ. ಈ ಮೂಲಕ ಸದ್ಯದ ನಿರ್ಧಾರ ಕೆಲವು ದಿನಗಳವರೆಗೆ ಸಡಿಲಿಕೆಯಾದಂತಾಗಿದೆ.
ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ಕಠಿಣ ನಿಯಮಾವಳಿಗಳನ್ನು ಹೇರಿ ರಾಜ್ಯ ಸರ್ಕಾರ ನಿನ್ನೆ (ಏಪ್ರಿಲ್ 3) ಆದೇಶ ಹೊರಡಿಸಿತ್ತು. ಅದರಂತೆ, ನಿಗದಿತ 8 ಜಿಲ್ಲೆಗಳಲ್ಲಿ ಸಿನಿಮಾ ಹಾಲ್ಗಳಲ್ಲಿ ಕೇವಲ ಶೇ. 50ರಷ್ಟು ಪ್ರೇಕ್ಷಕರಿಗೆ ಮಾತ್ರ ಅನುಮತಿ ನೀಡಬೇಕು ಎಂದು ಸೂಚನೆ ನೀಡಿತ್ತು. ಸರ್ಕಾರದ ಈ ನಿರ್ಧಾರಕ್ಕೆ ಚಂದನವನದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ಪುನೀತ್ ರಾಜ್ಕುಮಾರ್ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದರು
ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಭರ್ತಿಗಷ್ಟೇ ಅವಕಾಶ ಹಿನ್ನೆಲೆಯಲ್ಲಿ, ನಟ ಪುನೀತ್ ರಾಜ್ಕುಮಾರ್ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೇಟಿಯಾಗಿದ್ದರು. ಶೇ.100ರಷ್ಟು ಸೀಟು ಭರ್ತಿಗೆ ಅವಕಾಶ ನೀಡುವಂತೆ ಸಿಎಂ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದ್ದರು. ತಜ್ಞರ ಜೊತೆ ಚರ್ಚಿಸಿ ಪರಿಶೀಲಿಸುವುದಾಗಿ ಸಿಎಂ ಭರವಸೆ ನೀಡಿದ್ದರು. ಆ ಬಳಿಕ, ಮೂರು ದಿನಗಳ ಕಾಲ ಶೇ. 100ರಷ್ಟು ಸೀಟು ಭರ್ತಿಗೆ ಅವಕಾಶ ನೀಡಲಾಗಿದೆ.
ಪುನೀತ್ ಭೇಟಿ ವೇಳೆ ಗೃಹಸಚಿವ ಬಸವರಾಜ ಬೊಮ್ಮಾಯಿ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವ ಕೆ.ಸಿ.ನಾರಾಯಣಗೌಡ, ‘ಯುವರತ್ನ’ ನಿರ್ದೇಶಕ ಸಂತೋಷ ಆನಂದ್ ರಾಮ್, ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಉಪಸ್ಥಿತರಿದ್ದರು.
Source:TV9Kannada