ಯುಪಿಎಸ್​ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಧಾನಿ ಅಭಿನಂದನೆ; ಫೇಲ್​ ಆದವರಲ್ಲೂ ಧೈರ್ಯ ತುಂಬಿದ ಮೋದಿ

Sep 25, 2021

ದೆಹಲಿ: ಕೇಂದ್ರ ಲೋಕಸೇವಾ ಆಯೋಗ (UPSC)ದ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅಭಿನಂದನೆ ಸಲ್ಲಿಸಿದ್ದಾರೆ. ಇದೀಗ ಉತ್ತೀರ್ಣರಾದವರು ಮುಂದೆ ಪ್ರಮುಖ ಆಡಳಿತಾತ್ಮಕ ಹುದ್ದೆಗಳಿಗೆ ಏರಿ, ತೃಪ್ತಿದಾಯಕವಾಗಿ ಸಾರ್ವಜನಿಕ ಸೇವೆ ಸಲ್ಲಿಸಲಿದ್ದಾರೆ ಎಂಬ ಭರವಸೆ ವ್ಯಕ್ತಪಡಿಸಿದರು. ಟ್ವೀಟ್​ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಯುಪಿಎಸ್​ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ (UPSC Civil Services Examination )ಉತ್ತೀರ್ಣರಾದ ಎಲ್ಲರಿಗೂ ಅಭಿನಂದನೆಗಳು. ಸಾರ್ವಜನಿಕ ಸೇವಾ ಕ್ಷೇತ್ರದಲ್ಲಿ ಅವರಿಗಾಗಿ ಅತ್ಯಂತ ಆಕರ್ಷಕವಾದ ಮತ್ತು ತೃಪ್ತಿದಾಯಕವಾದ ವೃತ್ತಿ ಕಾಯುತ್ತಿದೆ. ನಮ್ಮ ರಾಷ್ಟ್ರದ ಅಭಿವೃದ್ಧಿಯೆಡೆಗಿನ ಪ್ರಯಾಣದ ಅವಧಿಯಲ್ಲಿ ಇವರೆಲ್ಲ ಅತ್ಯಂತ ಪ್ರಮುಖವಾದ ಆಡಳಿತಾತ್ಮಕ ಪಾತ್ರ ನಿರ್ವಹಿಸಲಿದ್ದಾರೆ ಎಂದು ಹೇಳಿದ್ದಾರೆ.

ಯುಪಿಎಸ್​ಸಿ ಪರೀಕ್ಷೆಯಲ್ಲಿ ಪಾಸ್ ಆದವರಿಗೆ ಅಭಿನಂದನೆ ಸಲ್ಲಿಸಿದ್ದಲ್ಲದೆ, ಅನುತ್ತೀರ್ಣರಾದವರಿಗೂ ಧೈರ್ಯ ತುಂಬಿ ಟ್ವೀಟ್​ ಮಾಡಿದ್ದಾರೆ. ಪ್ರೋತ್ಸಾಹ ತುಂಬಿ ಟ್ವೀಟ್​ ಮಾಡಿದ್ದಾರೆ. ಯುಪಿಎಸ್​ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗದ ನನ್ನ ಎಲ್ಲ ಸ್ನೇಹಿತರಿಗೂ ನಾನೊಂದು ಮಾತು ಹೇಳುತ್ತೇನೆ. ನೀವೆಲ್ಲರೂ ತುಂಬ ಬುದ್ಧಿವಂತರೇ ಆಗಿದ್ದೀರಿ. ಆದರೆ ಇನ್ನೂ ಸ್ವಲ್ಪ ಹೆಚ್ಚಿನ ಪ್ರಯತ್ನ ಬೇಕಾಗಿದೆ. ಅಂದಹಾಗೆ, ಭಾರತದಲ್ಲಿ ವೈವಿಧ್ಯಮಯ ಅವಕಾಶ ಇದೆ.. ನಿಮ್ಮ ಅನ್ವೇಷಣೆಗೆ ಮಾನ್ಯತೆ ಇದೆ. ಹೀಗಾಗಿ ಮುಂದೆ ಏನನ್ನೇ ಆಯ್ಕೆ ಮಾಡಿಕೊಳ್ಳುವುದಿದ್ದರೂ ಶುಭವಾಗಲಿ ಎಂದು ಪ್ರಧಾನಿ ಟ್ವೀಟ್​ ಮಾಡಿದ್ದಾರೆ.

ಯುಪಿಎಸ್​ಸಿ ನಾಗರಿಕ ಸೇವಾ ಪರೀಕ್ಷೆ ಫಲಿತಾಂಶ ನಿನ್ನೆ ಪ್ರಕಟವಾಗಿದ್ದು, ಅದರಲ್ಲಿ 545 ಪುರುಷರು ಮತ್ತು 216 ಮಹಿಳೆಯರು ಸೇರಿ ಒಟ್ಟು 761 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿವಿಧ ಅಧಿಕಾರಿಗಳ ವರ್ಗ, ರಾಜತಾಂತ್ರಿಕರು ಮತ್ತು ಪೊಲೀಸ್​ ಅಧಿಕಾರಿಗಳ ಹುದ್ದೆ ತುಂಬಲು ಯುಪಿಎಸ್​ಸಿ ವಾರ್ಷಿಕವಾಗಿ ಈ ಪರೀಕ್ಷೆಯನ್ನು ನಡೆಸುತ್ತದೆ.

Source:tv9kannada