ಮೀರಾಬಾಯಿ ಕೊಪ್ಪಿಕರ್ ಹಾಗೂ ಸಿದ್ದಗಂಗಾ ಶಿಕ್ಷಣ ಸಂಸ್ಥೆಗೆ ಎರಡು ಸಾಲಿನ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಪ್ರಕಟ

Sep 29, 2021

ಬೆಂಗಳೂರು: ಮೀರಾಬಾಯಿ ಕೊಪ್ಪಿಕರ್‌ ಹಾಗೂ ಸಿದ್ದಗಂಗಾ ಶಿಕ್ಷಣ ಸಂಸ್ಥೆ, ಮಠಕ್ಕೆ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಘೋಷಣೆಯಾಗಿದೆ. 2020 ನೇ ಸಾಲಿಗೆ ಮೀರಾಬಾಯಿ ಕೊಪ್ಪಿಕರ್‌ಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಸ್ವಾತಂತ್ರ್ಯ ಹೋರಾಟಗಾರರಾದ ಮೀರಾಬಾಯಿ ಕೊಪ್ಪಿಕರ್​ಗೆ 2020ನೇ ಸಾಲಿನ ಪ್ರಶಸ್ತಿ ಲಭಿಸಲಿದೆ. ಹಾಗೂ 2021ನೇ ಸಾಲಿಗೆ ಸಿದ್ದಗಂಗಾ ಶಿಕ್ಷಣ ಸಂಸ್ಥೆ, ಮಠಕ್ಕೆ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಘೋಷಣೆ ಆಗಿದೆ. ಕೊರೊನಾ ಹಿನ್ನೆಲೆ ಕಳೆದ ವರ್ಷ ಪ್ರಶಸ್ತಿಯನ್ನು ನೀಡಿರಲಿಲ್ಲ. ಹೀಗಾಗಿ ಈ ಬಾರಿ ಎರಡು ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗಿದೆ.

ಅಕ್ಟೋಬರ್ 2ರಂದು ಗಾಂಧಿ ಜಯಂತಿ ದಿನ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. ಬೆಂಗಳೂರಿನ ಗಾಂಧಿ ಭವನದಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದೆ. ಪ್ರಶಸ್ತಿ ಪುರಸ್ಕೃತರಿಗೆ ತಲಾ 5 ಲಕ್ಷ ರೂಪಾಯಿ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುತ್ತದೆ.

ಕರ್ನಾಟಕ ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಅಶೋಕ್ ಬಂಗಾರಪ್ಪ ಹಿಂಚಿಗೇರಿ ಇವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯನ್ನು ರಚಿಸಲಾಗಿತ್ತು. ಆಯ್ಕೆ ಸಮಿತಿಯು 2020ರ ಸಾಲಿಗೆ ಬಾಗಲಕೋಟೆ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರಾದ ಮೀರಾಬಾಯಿ ಕೊಪ್ಪಿಕರ್ ಹಾಗೂ 2021 ನೇ ಸಾಲಿಗೆ ಶ್ರೀ ಸಿದ್ಧಗಂಗಾ ಶಿಕ್ಷಣ ಸಂಸ್ಥೆ ಹಾಗೂ ಶ್ರೀ ಸಿದ್ಧಗಂಗಾ ಮಠವನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.

Source:tv9kannada