ಮತಾಂತರ ಮಾಡುವವರು ದೇಶದ್ರೋಹಿಗಳು; ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಬೇಕು: ಆರ್ ಅಶೋಕ್

Sep 29, 2021

ಬೆಂಗಳೂರು: ಮತಾಂತರದ ಬಗ್ಗೆ ಈಗಾಗಲೇ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಮತಾಂತರ ಮಾಡುವವರು ದೇಶದ್ರೋಹಿಗಳು. ಅವರು ನೆಲ ಸಂಸ್ಕೃತಿ ಹಾಳುಮಾಡಲು ಮತಾಂತರ ಮಾಡುತ್ತಿದ್ದಾರೆ. ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಬೇಕು ಎಂದು ಕಂದಾಯ ಸಚಿವ ಆರ್. ಅಶೋಕ್​ ಹೇಳಿದ್ದಾರೆ. ಯಾವುದೋ ದೇಶದ ದುಡ್ಡನ್ನು ತಂದು ಹೀಗೆ ಮಾಡ್ತಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಜತೆ ಚರ್ಚಿಸಿ ಒಂದು ಸೂಕ್ತ ಕಾನೂನು ತರಬೇಕು. ನಮ್ಮ ಸರ್ಕಾರ ಇರುವುದಕ್ಕೆ ಇದೆಲ್ಲವೂ ಹೊರಗೆ ಬರುತ್ತಿದೆ ಎಂದು ಅಶೋಕ್ ತಿಳಿಸಿದ್ದಾರೆ.

ಕೊವಿಡ್​ನಿಂದ ಸತ್ತವರ ಸಂಖ್ಯೆ ಗೊಂದಲವಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆ ಬಗ್ಗೆ ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ. ಅದು ಆರೋಪವಷ್ಟೇ. ಕೊರೊನಾಗೆ ಬಲಿಯಾದವರ ಬಗ್ಗೆ ಕುಟುಂಬಸ್ಥರಲ್ಲಿ ದಾಖಲೆ ಇದೆ. ವೈದ್ಯರು ನೀಡಿರುವ ಸರ್ಟಿಫಿಕೆಟ್​ ಕುಟುಂಬಸ್ಥರ ಬಳಿಯಿದೆ. ತಹಶೀಲ್ದಾರ್​, ಆರ್​ಐ ಕಡೆಯಿಂದ ಸತ್ತವರ ಬಗ್ಗೆ ರಿಪೋರ್ಟ್​ ಇದೆ. ಮೃತಪಟ್ಟವರಿಗೆ ಆಸ್ಪತ್ರೆಯಿಂದ ಪೇಷಂಟ್​ ನಂಬರ್​ ಇರುತ್ತೆ. ಪರಿಹಾರ ವಿತರಣೆಯಲ್ಲಿ ಬೋಗಸ್ ಆಗಲು ಅವಕಾಶವಿರಲ್ಲ ಎಂದು ಬೆಂಗಳೂರಿನಲ್ಲಿ ಕಂದಾಯ ಸಚಿವ ಆರ್. ಅಶೋಕ್​ ಸ್ಪಷ್ಟನೆ ನೀಡಿದ್ದಾರೆ.

ಕೊವಿಡ್​ನಿಂದ ಮೃತಪಟ್ಟವರ ಕುಟುಂಬಕ್ಕೆ 1 ಲಕ್ಷ ರೂಪಾಯಿ ಪರಿಹಾರ ಸಿಗಲಿದೆ. ಬಿಪಿಎಲ್ ಕಾರ್ಡ್​ದಾರರಿಗೆ ಒಂದು ಲಕ್ಷ ರೂ. ಪರಿಹಾರ ಲಭಿಸಲಿದೆ. ಕೇಂದ್ರ ಸರ್ಕಾರ 50 ಸಾವಿರ ರೂ. ಪರಿಹಾರ ನೀಡುತ್ತೆ. ನಿನ್ನೆ ಸರ್ಕಾರದಿಂದ ಪರಿಶೀಲನಾ ಆದೇಶ ಹೊರಡಿಸಿದ್ದೀವಿ. ಕೊವಿಡ್ ಪಾಸಿಟಿವ್ ವರದಿ, ರೋಗಿಯ ಪಿ ನಂಬರ್, ಮರಣ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಬಿಪಿಎಲ್ ಕಾರ್ಡ್, ಅರ್ಜಿದಾರರ ಬ್ಯಾಂಕ್ ಅಕೌಂಟ್ ನಂಬರ್ ಕೊಡಬೇಕು. ಇಷ್ಟು ದಾಖಲಾತಿ ನೀಡಿ ಡಿಸಿಗೆ ಅರ್ಜಿ ಸಲ್ಲಿಸಬಹುದು ಎಂದು ಹೇಳಿದ್ದಾರೆ. ದಾಖಲಾತಿ ಪರಿಶೀಲಿಸಿ ಅರ್ಜಿ ಸಲ್ಲಿಸಿದರೆ ಹಣ ನೀಡ್ತೇವೆ ಎಂದು ಬೆಂಗಳೂರಿನಲ್ಲಿ ಕಂದಾಯ ಸಚಿವ ಆರ್‌.ಅಶೋಕ್ ಹೇಳಿಕೆ ನೀಡಿದ್ದಾರೆ.

Source:tv9kannada