ಅಮೇಜಾನ್ 9,000 ಲೇ ಆಫ್; ಭಾರತದಲ್ಲಿ ಕೆಲಸ ಕಳೆದುಕೊಂಡ 500 ಮಂದಿ

May 16, 2023

500 Employees of Amazon India Lose Job: ಜಾಗತಿಕ ಇ-ಕಾಮರ್ಸ್ ದಿಗ್ಗಜ ಅಮೇಜಾನ್ 9,000 ಉದ್ಯೋಗಿಗಳನ್ನು ಲೇ ಆಫ್ ಮಾಡುತ್ತಿದ್ದು, ಅದರ ಭಾಗವಾಗಿ ಭಾರತದಲ್ಲಿ 500 ಮಂದಿ ಕೆಲಸ ಕಳೆದುಕೊಂಡಿರುವುದು ಗೊತ್ತಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ…

ನವದೆಹಲಿ: ಅಮೇಜಾನ್ ಲೇ ಆಫ್ ಭರಾಟೆಗೆ (Amazon Layoffs) ಭಾರತದಲ್ಲಿ ಅದರ ಸುಮಾರು 500 ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ವಿಶ್ವದ ಇ–ಕಾಮರ್ಸ್ ದಿಗ್ಗಜ ಅಮೇಜಾನ್ ಸಂಸ್ಥೆ 9,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವುದಾಗಿ ಮಾರ್ಚ್ ತಿಂಗಳಲ್ಲಿ ಘೋಷಿಸಿತ್ತು. ಅದರ ಭಾಗವಾಗಿ ವಿವಿಧ ದೇಶಗಳಲ್ಲಿರುವ ಅದರ ಉದ್ಯೋಗಿಗಳನ್ನು ಲೇ ಆಫ್ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಭಾರತದಲ್ಲಿ ಅಮೇಜಾನ್​ನ ವಿವಿಧ ವಿಭಾಗಗಳಿಂದ 500 ಮಂದಿಯನ್ನು ಈಗ ಕೆಲಸದಿಂದ ತೆಗೆದಿರುವುದು ತಿಳಿದುಬಂದಿದೆ.

ವರದಿಗಳ ಪ್ರಕಾರ, ಅಮೇಜಾನ್​ನ ವೆಬ್ ಸರ್ವಿಸ್, ಮಾನವ ಸಂಪನ್ಮೂಲ ವಿಭಾಗ ಮತ್ತು ಕಸ್ಟಮರ್ ಸಪೋರ್ಟ್ ವಿಭಾಗಗಳಿಂದ ಹೆಚ್ಚಿನ ಉದ್ಯೋಗಿಗಳನ್ನು ತೆಗೆಯಲಾಗಿದೆ. ಭಾರತದಲ್ಲಿ ಅಮೇಜಾನ್​ನ ಲೇ ಆಫ್ ಇಷ್ಟಕ್ಕೆ ನಿಲ್ಲುತ್ತದೆ ಎನ್ನುವುದು ಖಾತ್ರಿ ಇಲ್ಲ. ಜಾಗತಿಕವಾಗಿ 9,000 ಜಾಬ್ ಕಟ್ ಮಾಡುತ್ತಿರುವ ಅಮೇಜಾನ್ ಸಂಸ್ಥೆ ಭಾರತದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಕಡಿತ ಮಾಡುವ ಸಾಧ್ಯತೆ ಇಲ್ಲದಿಲ್ಲ.

Source: Tv9 Kannada