ಬೆಂಗಳೂರಿನಲ್ಲಿ ಹೆಚ್ಚಾಯ್ತು ಕೊರೊನಾ ಸೋಂಕಿತರ ಮರಣ ಪ್ರಮಾಣ; ಅಂತ್ಯಸಂಸ್ಕಾರಕ್ಕೆ 13 ಚಿತಾಗಾರಗಳಿಗೆ ಅನುಮತಿ ನೀಡಿದ ಸರ್ಕಾರ

Apr 21, 2021

ಈ ಮೊದಲು ಬೆಂಗಳೂರು ನಗರದ 7 ಚಿತಾಗಾರಗಳಲ್ಲಿ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡಲಾಗಿತ್ತು. ಆದರೆ ದಿನ ಕಳೆದಂತೆ ಕೊರೊನಾ ಸೋಂಕಿತರು ಅಧಿಕ ಸಂಖ್ಯೆಯಲ್ಲಿ ಮೃತಪಡುತ್ತಿರುವ ಹಿನ್ನೆಲೆ, ಬೆಂಗಳೂರಿನ 13 ಚಿತಾಗಾರಗಳಲ್ಲೂ ಅಂತ್ಯಸಂಸ್ಕಾರಕ್ಕೆ ಅನುಮತಿ ನೀಡಲಾಗಿದೆ.

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆ ಗಂಭೀರ ಸ್ವರೂಪಕ್ಕೆ ತಿರುಗಿದ್ದು ಸೋಂಕಿತರ ಸಂಖ್ಯೆ ವೇಗವಾಗಿ ಏರುತ್ತಿದೆ. ಒಂದೆಡೆ ಆಸ್ಪತ್ರೆಗಳಲ್ಲಿ ಸೋಂಕಿತರ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆಯೇ ಇಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಇನ್ನೊಂದೆಡೆ ಮೃತ ಸೋಂಕಿತರ ಅಂತ್ಯಸಂಸ್ಕಾರಕ್ಕೆ ಚಿತಾಗಾರಗಳಲ್ಲೂ ಒದ್ದಾಡಬೇಕಾದ ದುಸ್ಥಿತಿ ಉದ್ಭವಿಸಿದೆ. ಕಳೆದೆರೆಡು ದಿನಗಳಿಂದಲೂ ಬೆಂಗಳೂರಿನ ಚಿತಾಗಾರಗಳಲ್ಲಿ ಬಿಡುವಿಲ್ಲದೇ ಶವ ಸಂಸ್ಕಾರ ನಡೆಸಲಾಗುತ್ತಿದ್ದು, ಕೆಲ ಸ್ಮಶಾನಗಳಲ್ಲಿ ಕಾದು ಕಾದು ಸುಸ್ತಾದ ಮೃತರ ಸಂಬಂಧಿಕರು ಬೇರೆಡೆಗೆ ಶವ ಸಾಗಿಸಿದ ದಾರುಣ ಘಟನೆಗಳು ಸಹ ವರದಿಯಾಗಿವೆ. ಈ ಸಂಬಂಧ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಇದೀಗ ಬೆಂಗಳೂರಿನ 13 ಚಿತಾಗಾರಗಳಲ್ಲಿ ಮೃತ ಸೋಂಕಿತರ ಅಂತ್ಯಸಂಸ್ಕಾರಕ್ಕೆ ಅವಕಾಶ ಕಲ್ಪಿಸಿದ್ದು, ಉಪಮುಖ್ಯಮಂತ್ರಿ ಡಾ.ಅಶ್ವತ್ಥ್ ನಾರಾಯಣ ಸದರಿ ವಿಚಾರದ ಕುರಿತಾಗಿ ಪ್ರತಿಕ್ರಿಯಿಸಿದ್ದಾರೆ.

ಈ ಮೊದಲು ಬೆಂಗಳೂರು ನಗರದ 7 ಚಿತಾಗಾರಗಳಲ್ಲಿ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡಲಾಗಿತ್ತು. ಆದರೆ ದಿನ ಕಳೆದಂತೆ ಕೊರೊನಾ ಸೋಂಕಿತರು ಅಧಿಕ ಸಂಖ್ಯೆಯಲ್ಲಿ ಮೃತಪಡುತ್ತಿರುವ ಹಿನ್ನೆಲೆ, ಬೆಂಗಳೂರಿನ 13 ಚಿತಾಗಾರಗಳಲ್ಲೂ ಅಂತ್ಯಸಂಸ್ಕಾರಕ್ಕೆ ಅನುಮತಿ ನೀಡಲಾಗಿದೆ. ಪ್ರತಿ ದಿನ 90 ಕ್ಕೂ ಹೆಚ್ಚು ಸೋಂಕಿತರು ಬೆಂಗಳೂರಿನಲ್ಲೇ ಮೃತಪಡುತ್ತಿದ್ದಾರೆ. ಒಂದು ಮೃತದೇಹದ ಅಂತ್ಯಸಂಸ್ಕಾರಕ್ಕೆ ಕನಿಷ್ಠ ಒಂದೂವರೆ ಗಂಟೆ ಕಾಲಾವಕಾಶ ಬೇಕಾಗುತ್ತದೆ. ಹೀಗಾಗಿ ಹೆಚ್ಚಿನ ಚಿತಾಗಾರಗಳಲ್ಲಿ ಅಂತ್ಯಕ್ರಿಯೆ ನಡೆಸಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಈ ಹಿಂದೆ ಬೆಂಗಳೂರಿನಲ್ಲಿ ಕೇವಲ 7 ಚಿತಾಗಾರದಲ್ಲಿ ಮಾತ್ರ ಅಂತ್ಯಸಂಸ್ಕಾರಕ್ಕೆ ಅನುಮತಿ ಕೊಟ್ಟಿದ್ದೆವು. ಆ ಸಂಖ್ಯೆಯನ್ನು ಈಗ 13ಕ್ಕೆ ಏರಿಸುವಂತೆ ಬಿಬಿಎಂಪಿ ಕಮಿಷನರ್​ಗೆ ತಿಳಿಸಿದ್ದೇವೆ. ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು ಸಾವಿನ ಪ್ರಮಾಣವೂ ಜಾಸ್ತಿ ಆಗಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಉಪಮುಖ್ಯಮಂತ್ರಿ ಸ್ಪಷ್ಟನೆ ನೀಡಿದ್ದಾರೆ.

Source:TV9Kannada