ಬೆಂಗಳೂರಿನಲ್ಲಿ ಭಾರೀ ಸಂಖ್ಯೆಯಲ್ಲಿ ಮರಗಳು ಉರುಳಿ ಬಿದ್ದಿದ್ದಕ್ಕೆ ಕಾರಣ ಸಿಕ್ತು

May 23, 2023

 
 

ಬೆಂಗಳೂರು: ಬೆಂಗಳೂರಿನಲ್ಲಿ (Bengaluru) ಕಳೆದ ಮೂರು ದಿನಗಳಿಂದ ಮಹಾಮಳೆ ಸುರಿಯುತ್ತಿದೆ. ಮಳೆಯ (Rain) ಜೊತೆ ಗಂಟೆಗೆ ಸುಮಾರು 40-50 ಕಿ.ಮೀ ವೇಗದಲ್ಲಿ ನೆಲಗಾಳಿ ಬೀಸಿದ್ದರ ಪರಿಣಾಮ ಸಿಲಿಕಾನ್ ಸಿಟಿಯಲ್ಲೇ 500ಕ್ಕೂ ಹೆಚ್ಚು ಗಿಡಮರಗಳು ನೆಲಕ್ಕುರುಳಿವೆ.

ತಕ್ಷಣ ಈ ಪ್ರಮಾಣದಲ್ಲಿ ಮಳೆ ಹೆಚ್ಚಾಗಲು ಕಾರಣವನ್ನು ಹವಾಮಾನ ಇಲಾಖೆ (Meteorological Department) ತೆರೆದಿಟ್ಟಿದೆ. ಮೂರು ದಿನಗಳಲ್ಲಿ ಆಗಿದ್ದು ಬಿರುಗಾಳಿ ಸಹಿತ ಮಳೆ ಅಲ್ಲ, ಅದು ನೆಲಗಾಳಿ ಸಹಿತ ಮಳೆ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಈ ಹಿಂದಿನ ಮಳೆ ವೇಳೆ ಸಾಮಾನ್ಯವಾಗಿ ಮೇಲ್ಮಟ್ಟದಲ್ಲಿ ಬಿರುಗಾಳಿ ಇರುತ್ತಿತ್ತು. ಇದರ ಪರಿಣಾಮ ಮಳೆ ಹೆಚ್ಚಾದರೂ ಗಾಳಿ ಕಡಿಮೆ ಇರುತ್ತಿತ್ತು. ಗಿಡಮರಗಳಿಗೆ ಹೆಚ್ಚಿನ ಅನಾಹುತ ಸಂಭವಿಸುತ್ತಿರಲಿಲ್ಲ. ಆದರೆ ಈ ಬಾರಿ ಮಳೆ ಕಡಿಮೆ, ನೆಲಗಾಳಿ ಹೆಚ್ಚಾದ ಪರಿಣಾಮ ಈ ಪ್ರಮಾಣದ ಅವಾಂತರಗಳು ಸೃಷ್ಟಿಯಾಗಿದೆ ಎಂದು ಹೇಳಿದೆ.

 

ಅದರಲ್ಲೂ ನಗರದ ಪ್ರಮುಖ ರಸ್ತೆಗಳಲ್ಲಿ ಮುನ್ನೂರಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಕಬ್ಬನ್ ಪಾರ್ಕ್‍ನಲ್ಲೂ ಹಲವಾರು ಮರಗಳು ಮುರಿದು ಬಿದ್ದಿವೆ. ಅಲ್ಲದೆ ಹಲವು ಕಡೆಗಳಲ್ಲಿ ವಿದ್ಯುತ್ ಕಂಬಗಳಿಗೆ ಹಾನಿ ಉಂಟಾಗಿದೆ. ಕರ್ನಾಟಕ (Karnataka) ಮಾತ್ರವಲ್ಲದೆ ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲೂ (Andhra Pradesh) ಈ ಗಾಳಿ ಪರಿಣಾಮ ಬೀರಿದೆ.

ಮುಂದಿನ ಮೂರ್ನಾಲ್ಕು ದಿನಗಳ ಕಾಲ ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ನೆಲಗಾಳಿಯ ಎಚ್ಚರಿಕೆಯನ್ನು ಇಲಾಖೆ ನೀಡಿದೆ. ಅದೇ ವೇಗದಲ್ಲಿ ಬೀಸಲಿರುವ ಗಾಳಿ ಮತ್ತಷ್ಟು ಹಾನಿ ಉಂಟುಮಾಡುವ ಸಾಧ್ಯತೆಗಳಿದ್ದು ಎಚ್ಚರಿಕೆಯಿಂದ ಇರುವಂತೆ ಇಲಾಖೆ ಮುನ್ಸೂಚನೆ ನೀಡಿದೆ.

ಅರಬ್ಬಿ ಸಮುದ್ರದ ಮೇಲೆ ಕೇವಲ 900 ಮೀಟರ್‌ನಲ್ಲಿ ಸುಳಿಗಾಳಿ ಕಾಣಿಸಿಕೊಂಡಿದ್ದರಿಂದ ಮಳೆಯಾಗುತ್ತಿದೆ ಎಂದು ಇಲಾಖೆ ತಿಳಿಸಿದೆ

Source: PublicTv Kannada