ಬಿಬಿಎಂಪಿ ಅಧಿಕಾರಿಗಳು, ನೌಕರರಿಂದ ಅನಿರ್ದಿಷ್ಟಾವಧಿ ಮುಷ್ಕರ; ಪಾಲಿಕೆ ಸೇವೆಗಳಲ್ಲಿ ವ್ಯತ್ಯಯ ಸಾಧ್ಯತೆ
ಬೆಂಗಳೂರು: ಬಿಬಿಎಂಪಿ ಅಧಿಕಾರಿ ಹಾಗೂ ನೌಕರರಿಂದ ಇಂದಿನಿಂದ ಅನಿರ್ದಿಷ್ಟವಧಿ ಮುಷ್ಕರ ಆರಂಭವಾಗಿದ್ದು, ವೃಂದ ಮತ್ತು ನೇಮಕಾತಿ ಹಾಗೂ ಹಲವು ಬೇಡಿಕೆ ಆಧರಿಸಿ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಧರಣಿ ನಡೆಸಲಾಗುತ್ತಿದೆ. ಧರಣಿ ಪರಿಣಾಮ ಇಂದು ಪಾಲಿಕೆಯ ಸೇವೆಗಳಲ್ಲಿ ವ್ಯತ್ಯಯ ಆಗುವ ಸಾಧ್ಯತೆ ಇದೆ.
ವೃಂದ ಮತ್ತು ನೇಮಕಾತಿ ನಿಯಾಮಾಳಿಗಳನ್ವಯ 5219 ಹುದ್ದೆಗಳಿಗೆ ಮಂಜೂರು ವಿಚಾರವಾಗಿ ಕರ್ತವ್ಯ ಬಹಿಷ್ಕರಿಸಿ ಮುಷ್ಕರ ಮಾಡಲು ಪಾಲಿಕೆ ನೌಕರರು ನಿರ್ಧಾರ ಮಾಡಿದ್ದಾರೆ. ಕೇಂದ್ರ ಕಚೇರಿ ಸೇರಿ 198 ವಾರ್ಡ್ ನೌಕರರು ಮುಷ್ಕರಕ್ಕೆ ಬೆಂಬಲ ನೀಡಿದ್ದು, ಮೂವರ ಕೆಲಸ ಒಬ್ಬ ನೌಕರನ ಮೇಲೆ ಬಿದ್ದಿದೆ.
ನೇಮಕಾತಿ ಸಂಬಂಧ ಹಲವು ಬಾರಿ ಪ್ರಸ್ತಾವನೆ ಹೋಗಿದ್ದರೂ ಸರ್ಕಾರ ಕ್ರಮ ಕೈಗೊಂಡಿಲ್ಲ. ಹೀಗಾಗಿ 5219 ಹುದ್ದೆಗಳಿಗೆ ಮಂಜೂರು ನೀಡುವುದು, ಕೊವಿಡ್ನಿಂದ ಮೃತ ಪಟ್ಟ ಕುಟುಂಬಕ್ಕೆ ಪರಿಹಾರ, ನಗರ ಯೊಜನೆ ವಿಭಾಗದಲ್ಲಿ 39 ಹುದ್ದೆ ಸೃಷ್ಟಿ ವಿರೋಧಿಸಿ ಮುಷ್ಕರ ನಡೆಸಲಾಗುತ್ತಿದೆ ಎಂದು ಮುಷ್ಕರಲ್ಲಿ ಭಾಗಿಯಾದ ನೌಕರರು ತಿಳಿಸಿದ್ದಾರೆ.
ಕೆಲಸ ಕಾಯಂಗೆ ಆಗ್ರಹಿಸಿ 16 ಸಾವಿರ ಪೌರಕಾರ್ಮಿಕರಿಂದ ಪ್ರತಿಭಟನೆ
16 ಸಾವಿರ ಪೌರಕಾರ್ಮಿಕರನ್ನು ಖಾಯಂ ನೇಮಕಾತಿ ಮಾಡಿಕೊಳ್ಳಬೇಕೆಂದು ಒತ್ತಾಯಿಸಿ ಬೆಂಗಳೂರಿನಲ್ಲಿ ಪೌರಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ನಿನ್ನೆ ಸ್ವಚ್ಛತಾ ಕಾರ್ಯ ಸ್ಥಗಿತಗೊಳಿಸಿದ ಪೌರಕಾರ್ಮಿಕರು, ಕೆಲಸಕ್ಕೆ ಹಾಜರಾಗದೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ನಿನ್ನೆ ಪೌರಕಾರ್ಮಿಕರ ಪ್ರತಿಭಟನೆ ಹಿನ್ನಲೆ ಬೆಂಗಳೂರಿನ ಮನೆ ಮನೆಯಿಂದ ಕಸ ಸಂಗ್ರಹಣೆ, ಕಸ ಗುಡಿಸುವ ಕೆಲಸ ಬಂದ್ ಆಗಿದೆ. ಅಲ್ಲದೆ ಪೌರಕಾರ್ಮಿಕರು ಬಿಬಿಎಂಪಿ ಆವರಣವನ್ನು ಸ್ವಚ್ಛಗೊಳಿಸದೆ ಧರಣಿ ನಡೆಸಿದ್ದಾರೆ. ಇತ್ತ ಶಾಸಕರು, ಸಚಿವರ ಮನೆಯಿಂದ ಕೂಡ ಕಸ ಸಂಗ್ರಹ ಮಾಡದೆ, 16 ಸಾವಿರ ಜನ ಪೌರಕಾರ್ಮಿಕರು, 10 ಸಾವಿರ ಕಸದ ಆಟೋ-ಟಿಪ್ಪರ್ ಚಾಲಕರು ಪ್ರತಿಭಟನೆ ನಡೆಸಿದ್ದಾರೆ.
ಮೌರ್ಯ ಸರ್ಕಲ್‌ನಲ್ಲಿ ಪೌರಕಾರ್ಮಿಕರಿಂದ ಪ್ರತಿಭಟನೆ
ರಾಜ್ಯದಲ್ಲಿರುವ ಎಲ್ಲಾ ಪೌರಕಾರ್ಮಿಕರನ್ನು ಖಾಯಂ ಮಾಡುವಂತೆ ಒತ್ತಾಯಿಸಿ ಮೌರ್ಯ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಖಾಯಂ ಮಾಡದಿದ್ದರೆ ಮುಂದಿನ ತಿಂಗಳು ಅನಿರ್ದಿಷ್ಟಾವಧಿ ಧರಣಿ ಮಾಡುತ್ತೇವೆ ಎಂದು ಪೌರಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ನಾರಾಯಣ ಹೇಳಿಕೆ ನೀಡಿದ್ದಾರೆ
Source:tv9kannada