ಪುನೀತ್ ರಾಜ್​ಕುಮಾರ್​​-ಪವನ್​ ಕುಮಾರ್​ ಚಿತ್ರಕ್ಕೆ ‘ದ್ವಿತ್ವ’ ಶೀರ್ಷಿಕೆ; ಬಿಗ್​ ನ್ಯೂಸ್​ ನೀಡಿದ ಹೊಂಬಾಳೆ

Jul 2, 2021

ಪವನ್​ ಕುಮಾರ್​ ಮತ್ತು ಪುನೀತ್​ ರಾಜ್​ಕುಮಾರ್​ ಕಾಂಬಿನೇಷನ್​ ಮೇಲೆ ದೊಡ್ಡ ನಿರೀಕ್ಷೆ ಇದೆ. ಹೊಂಬಾಳೆ ಫಿಲ್ಸ್ಮ್​ ಸಂಸ್ಥೆ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಇಂದು (ಜು.1) ‘ದ್ವಿತ್ವ’ ಎಂದು ಟೈಟಲ್ ಘೋಷಣೆ ಮಾಡಲಾಗಿದೆ.​

ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಮತ್ತು ನಿರ್ದೇಶಕ ಪವನ್​ ಕುಮಾರ್​ ಜೊತೆಯಾಗಿ ಮಾಡಲಿರುವ ಹೊಸ ಚಿತ್ರಕ್ಕೆ ‘ದ್ವಿತ್ವ’ ಎಂದು ಶೀರ್ಷಿಕೆ ಇಡಲಾಗಿದೆ. ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಸ್ಮ್​ ಬ್ಯಾನರ್​ನಲ್ಲಿ ಈ ಸಿನಿಮಾ ಮೂಡಿಬರಲಿದ್ದು, ಗುರುವಾರ (ಜು.1) ಬೆಳಗ್ಗೆ ಟೈಟಲ್​ ಅನೌನ್ಸ್​ ಮಾಡಲಾಗಿದೆ. ಈ ಸುದ್ದಿ ಕೇಳಿ ಅಪ್ಪು ಫ್ಯಾನ್ಸ್​ ಥ್ರಿಲ್​ ಆಗಿದ್ದಾರೆ. ‘ಕೆಜಿಎಫ್: ಚಾಪ್ಟರ್​ 2​’, ‘ಸಲಾರ್’ ಮುಂತಾದ ದೈತ್ಯ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿರುವ ಹೊಂಬಾಳೆ ಫಿಲ್ಸ್ಮ್​ ಸಂಸ್ಥೆಯಿಂದ ತಯಾರಾಗಲಿರುವ 9ನೇ ಸಿನಿಮಾ ಇದಾಗಿದೆ.

ಸೈಕಲಾಜಿಕಲ್​ ಕಥಾಹಂದರ ಹೊಂದಿದ್ದ ‘ಲೂಸಿಯಾ’ ಚಿತ್ರಕ್ಕೆ ನಿರ್ದೇಶನ ಮಾಡುವ ಮೂಲಕ ಪವನ್​ ಕುಮಾರ್​ ಭಾರಿ ಜನಪ್ರಿಯತೆ ಪಡೆದುಕೊಂಡಿದ್ದರು. ಈಗ ಅವರು ‘ದ್ವಿತ್ವ’ ಸಿನಿಮಾದಲ್ಲಿ ಮತ್ತೆ ಸೈಕಲಾಜಿಕಲ್​ ಕಥೆಯನ್ನೇ ಆಯ್ಕೆ ಮಾಡಿಕೊಂಡಿರುವುದು ವಿಶೇಷ. ಶೀರ್ಷಿಕೆ ಜೊತೆಗೆ ಡಿಫರೆಂಟ್​ ಆದಂತಹ ಪೋಸ್ಟರ್​ ಕೂಡ ಬಿಡುಗಡೆ ಮಾಡಲಾಗಿದೆ.

2018ರಲ್ಲಿ ಬಂದ ‘ಯೂ ಟರ್ನ್​’ ಚಿತ್ರದ ಬಳಿಕ ಕನ್ನಡದಲ್ಲಿ ಬೇರೆ ಯಾವುದೇ ಸಿನಿಮಾವನ್ನು ಪವನ್​ ಕುಮಾರ್​ ನಿರ್ದೇಶನ ಮಾಡಿಲ್ಲ. ದೊಡ್ಡ ಗ್ಯಾಪ್​ ಬಳಿಕ ಅವರು ಕನ್ನಡ ಪ್ರಾಜೆಕ್ಟ್​ ಕೈಗೆತ್ತಿಕೊಂಡಿರುವುದರಿಂದ ನಿರೀಕ್ಷೆ ಜೋರಾಗಿದೆ. ಲೂಸಿಯಾ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿ ಜನಪ್ರಿಯರಾಗಿದ್ದ ಪೂರ್ಣಚಂದ್ರ ತೇಜಸ್ವಿ ಅವರೇ ‘ದ್ವಿತ್ವ’ ಚಿತ್ರಕ್ಕೂ ಸಂಗೀತ ಸಂಯೋಜನೆ ಮಾಡಲಿದ್ದಾರೆ.

 

Source: TV9 Kannada