ನೀರಜ್ ಚೋಪ್ರಾಗೆ ಕೊಟ್ಟ ಗೋಲ್ಡನ್ ಪಾಸ್ ನೀರಲ್ಲಿ ಹೋಮ ಮಾಡಿದಂತೆ; ಕೆಎಸ್ಆರ್ಟಿಸಿಗೆ ತಿರುಗೇಟು ನೀಡಿದ ನೆಟ್ಟಿಗರು
ಟೋಕಿಯೋ ಒಲಿಂಪಿಕ್ಸ್ನ (Tokyo Olympics) ಜಾವೆಲಿನ್ ತ್ರೋ ಸ್ಪರ್ಧೆಯಲ್ಲಿ ಬಂಗಾರದ ಪದಕ ಗೆದ್ದು ಶತಮಾನದ ಸಾಧನೆ ಮಾಡಿರುವ ನೀರಜ್ ಚೋಪ್ರಾ (Neeraj Chopra) ಅವರಿಗೆ ಇಡೀ ದೇಶವೇ ಅಭಿನಂದನೆ ಸಲ್ಲಿಸಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಕೂಡಾ ಚಿನ್ನದ ಹುಡುಗನಿಗೆ (Gold Medalist) ಅಭಿನಂದನೆ ಸಲ್ಲಿಸಿ ವಿಶೇಷ ಸವಲತ್ತನ್ನು ಕಲ್ಪಿಸಿಕೊಟ್ಟಿದೆ. ನೀರಜ್ ಚೋಪ್ರಾಗೆ ಗೋಲ್ಡನ್ ಪಾಸ್ (Golden Pass) ನೀಡಲಾಗಿದ್ದು, ಜೀವನಪರ್ಯಂತ ಕೆಎಸ್ಆರ್ಟಿಸಿ ಬಸ್ನಲ್ಲಿ ಉಚಿತವಾಗಿ ಪಯಣಿಸಬಹುದು ಎಂದು ತಿಳಿಸಿದೆ. ಆದರೆ, ಕೆಎಸ್ಆರ್ಟಿಸಿ ನೀರಜ್ ಚೋಪ್ರಾಗೆ ಗೌರವ ಸೂಚಕವಾಗಿ ನೀಡಿರುವ ಈ ಸವಲತ್ತಿನ ಬಗ್ಗೆ ಅನೇಕ ತಕರಾರುಗಳು ಕೇಳಿಬರುತ್ತಿದ್ದು, ನೆಟ್ಟಿಗರು ಇದೊಂದು ಉಪಯೋಗಕ್ಕೆ ಬಾರದ ಉಡುಗೊರೆ ಎಂದು ಹೀಯಾಳಿಸಿದ್ದಾರೆ. ಅಷ್ಟಕ್ಕೂ ಈ ಬಹುಮಾನದ ಬಗ್ಗೆ ಜನರು ಏನೆಲ್ಲಾ ಅಸಮಾಧಾನ ಹೊರಹಾಕಿದ್ದಾರೆ. ಅವರ ವಾದಗಳೇನು ಎನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ.
ಒಲಿಂಪಿಕ್ಸ್ ಕ್ರಿಡಾಕೂಟದ ಅಥ್ಲೆಟಿಕ್ಸ್ ವಿಭಾಗದಲ್ಲಿ ಚಿನ್ನ ಗೆದ್ದು ಕೊಟ್ಟಿರುವ ನೀರಜ್ಗೆ ಬಿಸಿಸಿಐ, ಹರಿಯಾಣ ರಾಜ್ಯ ಸರ್ಕಾರ, ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಸೇರಿದಂತೆ ಹಲವರು ಬಹುಮಾನ ಘೋಷಿಸಿದ್ದಾರೆ. ಏತನ್ಮಧ್ಯೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ಕೂಡಾ ಚಿನ್ನದ ಹುಡುಗನಿಗೆ ಅಭಿನಂದನೆ ಸಲ್ಲಿಸಿ ಗೋಲ್ಡನ್ ಪಾಸ್ ಎಂಬ ವಿಶೇಷ ಸವಲತ್ತನ್ನು ಕಲ್ಪಿಸಿಕೊಟ್ಟಿದೆ. ಅದರ ಪ್ರಕಾರ ನೀರಜ್ ಚೋಪ್ರಾ ಜೀವಮಾನಪರ್ಯಂತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಎಲ್ಲಿಂದ ಎಲ್ಲಿಗೆ ಬೇಕಿದ್ದರೂ ಉಚಿತವಾಗಿ ಪ್ರಯಾಣಿಸಬಹುದು.
ಈ ಸವಲತ್ತಿನ ಬಗ್ಗೆ ತರ್ಕಬದ್ಧವಾಗಿ ಪ್ರಶ್ನೆ ಕೇಳಿರುವ ಜನರು, ಕೆಎಸ್ಆರ್ಟಿಸಿ ಸವಲತ್ತನ್ನು ನೀಡಿರುವುದು ನೀರಜ್ ಚೋಪ್ರಾಗೆ ಗೌರವ ಸಲ್ಲಿಸುವುದಕ್ಕೆ ಇರಬಹುದು ಆದರೆ, ಅದು ಯಾವತ್ತಾದರೂ ಉಪಯೋಗಕ್ಕೆ ಬರುವುದು ಸಾಧ್ಯವೇ? ನೀರಜ್ ಚೋಪ್ರಾ ಕರ್ನಾಟಕದವರೇ ಅಲ್ಲ. ಹಾಗೊಂದು ವೇಳೆ ಕರ್ನಾಟಕಕ್ಕೆ ಬಂದರೂ ಅವರು ಇಲ್ಲಿ ಕೆಎಸ್ಆರ್ಟಿಸಿಯಲ್ಲಿ ಓಡಾಡಬೇಕಾದ ಪ್ರಮೇಯ ಎದುರಾಗುವುದಿಲ್ಲ. ಹೀಗಿರುವಾಗ ಈ ವಿಶೇಷ ಸವಲತ್ತಿನಿಂದ ಏನು ಪ್ರಯೋಜನ? ಎಂದು ಕೇಳಿದ್ದಾರೆ
ಅಲ್ಲದೇ, ಬೇರೆ ರಾಜ್ಯದವರನ್ನು ಹೀಗೆ ಉಪಯೋಗಕ್ಕೆ ಬಾರದ ರೀತಿಯಲ್ಲಿ ಅಭಿನಂದಿಸುವ ಬದಲು ನಮ್ಮ ರಾಜ್ಯದ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಲು ಕೆಎಸ್ಆರ್ಟಿಸಿ ಮುಂದಾಗಬೇಕು. ಕರ್ನಾಟಕದ ಆಟಗಾರರಿಗೆ ತಿಂಗಳ ಲೆಕ್ಕದಲ್ಲಾದರೂ ಪಾಸ್ ನೀಡಿ ಸಹಾಯ ಮಾಡಬಹುದು. ಎಷ್ಟೋ ಜನ ಇಲ್ಲಿ ಕಷ್ಟದಲ್ಲಿದ್ದಾರೆ. ಅಭ್ಯಾಸ ನಡೆಸುವುದಕ್ಕಾಗಿ ಎಲ್ಲಿಂದೆಲ್ಲಿಗೋ ಓಡಾಡುತ್ತಾರೆ. ಅಂತಹ ಅರ್ಹರಿಗೆ ಸಹಾಯ ಮಾಡುವುದು ಅಭಿನಂದನಾರ್ಹ ನಿಲುವಾಗುತ್ತದೆ. ಈಗ ನೀರಜ್ ಚೋಪ್ರಾಗೆ ಮಾಡಿರುವ ಸಹಾಯ ನೀರಲ್ಲಿ ಮಾಡಿದ ಹೋಮದಂತೆ ಎಂದಿದ್ದಾರೆ.
Source: tv9 kannada