ದೇಶದಲ್ಲಿ ಶೀಘ್ರದಲ್ಲೇ ನಿರ್ಮಾಣವಾಗಲಿದೆ ಮೊದಲ ಎಲೆಕ್ಟ್ರಿಕ್​ ಹೆದ್ದಾರಿ; ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

Sep 18, 2021

ದೇಶದಲ್ಲಿ ಸುಸ್ಥಿರ ರಸ್ತೆ, ಹೆದ್ದಾರಿ ನಿರ್ಮಾಣ, ಅಪಘಾತ ತಡೆ ಸಂಬಂಧ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹಲವು ವಿಶಿಷ್ಟ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಹಾಗೇ, ಇತ್ತೀಚೆಗೆ ವಾಹನಗಳ ಕರ್ಕಶ ಹಾರ್ನ್​​ ತಪ್ಪಿಸುವ ದೃಷ್ಟಿಯಿಂದ ಇನ್ನು ಮುಂದೆ ವಾಹನಗಳ ಹಾರ್ನ್​ಗಳಿಗೆ ಹಿಂದೂಸ್ತಾನಿ ಸಂಗೀತ ವಾದ್ಯಗಳ ದನಿಯನ್ನು ಅಳವಡಿಸುವ ಬಗ್ಗೆ ಗಂಭೀರವಾಗಿ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಹೆದ್ದಾರಿ ಮತ್ತು ರಸ್ತೆ ಸಾರಿಗೆ ಇಲಾಖೆ ಸಚಿವ ನಿತಿನ್​ ಗಡ್ಕರಿ ಹೇಳಿದ್ದರು. ಹಾಗೇ, ಈಗೊಂದು ಹೊಸ ವಿಷಯವನ್ನು ತಿಳಿಸಿದ್ದಾರೆ. ಅತಿ ಶೀಘ್ರದಲ್ಲೇ ದೆಹಲಿ ಮತ್ತು ರಾಜಸ್ಥಾನದ ಜೈಪುರದ ಮಧ್ಯೆ ಎಲೆಕ್ಟ್ರಿಕ್​ ಹೆದ್ದಾರಿ (Electric Highway) ನಿರ್ಮಾಣವಾಗಲಿದೆ ಎಂದು ತಿಳಿಸಿದ್ದಾರೆ.

ಎಲೆಕ್ಟ್ರಿಕ್​ ಹೆದ್ದಾರಿ ನಿರ್ಮಾಣ ಕೇಂದ್ರ ಸರ್ಕಾರದ ಕನಸಿನ ಯೋಜನೆಯಾಗಿದೆ. ಈ ಬಗ್ಗೆ ವಿದೇಶೀ ಕಂಪನಿಗಳೊಟ್ಟಿಗೆ ಮಾತುಕತೆ ನಡೆಸಲಾಗುತ್ತಿದೆ. ಅದು ಅಂತಿಮವಾಗುತ್ತಿದ್ದಂತೆ ಎಲೆಕ್ಟ್ರಿಕ್​ ಹೆದ್ದಾರಿ ನಿರ್ಮಾಣ ಕೆಲಸ ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ. ಹಾಗೊಮ್ಮೆ ಎಲ್ಲ ಸರಿಯಾಗಿ ದೆಹಲಿ ಮತ್ತು ಜೈಪುರ ನಡುವೆ ಎಲೆಕ್ಟ್ರಿಕ್​ ಹೆದ್ದಾರಿ ನಿರ್ಮಾಣಗೊಂಡರೆ ಅದು ದೇಶದ ಮೊದಲ ಎಲೆಕ್ಟ್ರಿಕ್​ ಹೈವೇ ಎನ್ನಿಸಿಕೊಳ್ಳಲಿದೆ. ಇನ್ನು ಇದರೊಟ್ಟಿಗೆ ದೆಹಲಿ ಮತ್ತು ಮುಂಬೈ ಮಧ್ಯೆಯೂ ಕೂಡ ಎಲೆಕ್ಟ್ರಿಕ್​ ಹೆದ್ದಾರಿ ನಿರ್ಮಾಣ ಸಂಬಂಧ ಸ್ವೀಡಿಶ್​ ಸಂಸ್ಥೆಯೊಟ್ಟಿಗೆ ಮಾತುಕತೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

Source:tv9kannada