ದೆಹಲಿಯ ಏಮ್ಸ್‌ನಲ್ಲಿ ಕೊರೊನಾ ಲಸಿಕೆ ಪಡೆದ ಪ್ರಧಾನಿ ನರೇಂದ್ರ ಮೋದಿ

Mar 1, 2021

ಇಂದಿನಿಂದ ದೇಶಾದ್ಯಂತ ಎರಡನೇ‌ ಹಂತದ ಕೊರೊನಾ ಲಸಿಕಾ ಅಭಿಯಾನ ಶುರುವಾಗಿದೆ. ಎರಡನೇ ಹಂತದಲ್ಲಿ ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಏಮ್ಸ್‌ನಲ್ಲಿ ಕೊವಿಡ್ ಲಸಿಕೆ ಪಡೆದಿದ್ದಾರೆ.

ದೆಹಲಿ: ಇಂದಿನಿಂದ ದೇಶಾದ್ಯಂತ ಎರಡನೇ‌ ಹಂತದ ಕೊರೊನಾ ಲಸಿಕಾ ಅಭಿಯಾನ ಶುರುವಾಗಿದೆ. ಎರಡನೇ ಹಂತದಲ್ಲಿ ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಏಮ್ಸ್‌ನಲ್ಲಿ ಕೊವಿಡ್ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ. COVID-19 ವಿರುದ್ಧದ ಜಾಗತಿಕ ಹೋರಾಟವನ್ನು ಬಲಪಡಿಸಲು ನಮ್ಮ ವೈದ್ಯರು ಮತ್ತು ವಿಜ್ಞಾನಿಗಳು ತ್ವರಿತ ಸಮಯದಲ್ಲಿ ಹೇಗೆ ಕೆಲಸ ಮಾಡಿದ್ದಾರೆ ಎಂಬುದು ಗಮನಾರ್ಹವಾಗಿದೆ. ಲಸಿಕೆ ತೆಗೆದುಕೊಳ್ಳಲು ಅರ್ಹರಾದ ಎಲ್ಲರಿಗೂ ನಾನು ಮನವಿ ಮಾಡುತ್ತೇನೆ. ಒಟ್ಟಿನಲ್ಲಿ, ನಾವು ಭಾರತವನ್ನು COVID-19 ನಿಂದ ಮುಕ್ತಗೊಳಿಸೋಣ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಂಡಿದ್ದು ಕೊರೊನಾ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ವ್ಯಾಕ್ಸಿನ್ ಡ್ರೈವ್ 2.O
ಮೊದಲ ಹಂತದಲ್ಲಿ 1 ಕೋಟಿ 30 ಲಕ್ಷ ಜನರಿಗೆ ಲಸಿಕೆ ನೀಡಲಾಗಿದ್ದು, ಇಂದಿನಿಂದ 2ನೇ ಹಂತದ ಲಸಿಕೆ ಅಭಿಯಾನ ಶುರುವಾಗಲಿದೆ. ಇದರಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಸಿಬ್ಬಂದಿ ರೆಡಿಯಾಗಿದ್ದಾರೆ. 45 ವರ್ಷ ಮೇಲ್ಪಟ್ಟವರೂ ಸಹ ಇತರ ರೋಗಗಳಿಂದ ಬಳಲುತ್ತಿದ್ರೆ ಲಸಿಕೆ ಪಡೆಯಬಹುದು. ದೇಶದ 10 ಸಾವಿರ ಸರ್ಕಾರಿ ಕೇಂದ್ರಗಳಲ್ಲಿ ಉಚಿತ ಲಸಿಕೆ ನೀಡಲು ನಿರ್ಧರಿಸಿದ್ದು, 20 ಸಾವಿರ ಖಾಸಗಿ ಕೇಂದ್ರಗಳ ಮೂಲಕವೂ ಲಸಿಕೆ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದ್ರೆ, ಖಾಸಗಿ ಕೇಂದ್ರಗಳಲ್ಲಿ ಲಸಿಕೆಗೆ 250 ರೂಪಾಯಿ ಫಿಕ್ಸ್ ಮಾಡಿದ್ದಾರೆ.

ಖಾಸಗಿ ಆಸ್ಪತ್ರೆಯಲ್ಲೂ ಸಿಗಲಿದೆ ಕೊರೊನಾ ವ್ಯಾಕ್ಸಿನ್
ಇನ್ನೂ ಕೊರೊನಾ ಲಸಿಕೆ ಖಾಸಗಿ ಆಸ್ಪತ್ರೆಗಳಲ್ಲೂ ಲಭ್ಯವಾಗಲಿದೆ. ಆದ್ರೆ, ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ಸಿಕ್ತಿದೆ ಅಂದಾಕ್ಷಣ ಎಲ್ಲರು ಲಸಿಕೆ ಪಡೆಯಲು ಆಗಲ್ಲ. ಎರಡನೇ ಹಂತದ ಲಸಿಕೆ ಅಭಿಯಾನದ ನಿರ್ಧಾರದಂತೆ 60 ವರ್ಷ ಮೇಲ್ಪಟ್ಟವರಿಗೆ ಮತ್ತು 45 ವರ್ಷ ಮೇಲ್ಪಟ್ಟವರು ಇತರ ರೋಗಗಳಿಂದ ಬಳಲಿತ್ತಿದ್ರೆ, ಗುರುತಿನ ದಾಖಲೆ ನೀಡಿ ಲಸಿಕೆ ಪಡೆಯಬಹುದು.

ಲಸಿಕೆ ಪಡೆಯುವವರು ಸರ್ಕಾರದ ಕೋವಿನ್ ಪೋರ್ಟಲ್ ಅಥವಾ ಆರೋಗ್ಯ ಸೇತು ಆ್ಯಪ್‌ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಅಲ್ಲದೇ ನೇರವಾಗಿ ವ್ಯಾಕ್ಸಿನೇಷನ್ ಕೇಂದ್ರಗಳಿಗೆ ಹೋಗಿ ಲಸಿಕೆ ಪಡೆಯಬಹುದಾಗಿದೆ. ಲಸಿಕೆ ಪಡೆದ ವ್ಯಕ್ತಿಗಳಿಗೆ QR Code ಹೊಂದಿರುವ ಡಿಜಿಟಲ್ ಪ್ರಮಾಣ ಪತ್ರವನ್ನು ನೀಡಲಾಗುತ್ತೆ.

Source: TV9Kannada