ದರ್ಶನ್​-ಸುದೀಪ್​ ಒಂದಾಗಿಸಲು ಪಣ ತೊಟ್ಟ ಫ್ಯಾನ್ಸ್​! ಈ ಮನವಿಗೆ ಒಪ್ಪಿಕೊಳ್ತಾರಾ ಕಿಚ್ಚ-ದಚ್ಚು?

Mar 24, 2021

ಕಿಚ್ಚ ಸುದೀಪ್​ ಮತ್ತು ‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್​ ಅವರನ್ನು ಒಂದಾಗಿಸಲು ಇಬ್ಬರ ಅಭಿಮಾನಿಗಳು ಪಟ ತೊಟ್ಟಿದ್ದಾರೆ. ತಾವು ಅಂದುಕೊಂಡಿದ್ದನ್ನು ನಿಜವಾಗಿಸಲು ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ.

ಕನ್ನಡ ಚಿತ್ರರಂಗ ಟಾಪ್​ ನಟರಾದ ದರ್ಶನ್​ ಮತ್ತು ಸುದೀಪ್​ ನಡುವಿನ ಸ್ನೇಹ ಮುರಿದು ಬಿದ್ದು ನಾಲ್ಕು ವರ್ಷ ಕಳೆದಿದೆ. ಸೋಶಿಯಲ್​ ಮೀಡಿಯಾದಲ್ಲಿ ಅವರ ಅಭಿಮಾನಿಗಳು ಆಗಾಗ ಕಿತ್ತಾಡುತ್ತಲೇ ಇರುತ್ತಾರೆ. ಹಾಗಂತ ಎಲ್ಲ ಅಭಿಮಾನಿಗಳೂ ಇದೇ ರೀತಿ ಇರುತ್ತಾರೆ ಅಂತೇನಿಲ್ಲ. ದರ್ಶನ್​ ಮತ್ತು ಸುದೀಪ್​ ಒಂದಾಗಲಿ ಎಂದು ಬಯಸುವ ಲಕ್ಷಾಂತರ ಫ್ಯಾನ್ಸ್​ ಇದ್ದಾರೆ. ಅವರೆಲ್ಲರೂ ಈಗ ಟ್ವಿಟರ್​ನಲ್ಲಿ ಹೊಸ ಅಭಿಯಾನ ಶುರು ಮಾಡಿದ್ದಾರೆ.

ಈ ಸ್ಟಾರ್​ ನಟರಿಬ್ಬರು ಒಂದಾದರೆ ಅದರಿಂದ ಕನ್ನಡ ಚಿತ್ರಕ್ಕೆ ಒಳ್ಳೆಯದಾಗಲಿದೆ ಎಂದು ಅನೇಕರು ಅಭಿಪ್ರಾಯ ಪಡುತ್ತಿದ್ದಾರೆ. ಇಬ್ಬರೂ ಜೊತೆಯಾಗಿ ಇರುವ ಫೋಟೋಗಳನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಳ್ಳಲಾಗುತ್ತಿದೆ. ಅದರ ಜೊತೆಗೆ #DbossKicchaComeTogether ಎಂಬ ಹ್ಯಾಶ್​ ಟ್ಯಾಗ್​ ಬಳಸಲಾಗುತ್ತಿದೆ. 10 ಸಾವಿರಕ್ಕೂ ಅಧಿಕ ಬಾರಿ ಈ ಹ್ಯಾಶ್​ ಟ್ಯಾಗ್​ ಬಳಕೆ ಆಗಿದ್ದು, ಸದ್ಯ ಟ್ವಿಟರ್​ನಲ್ಲಿ ಟ್ರೆಂಡ್​ ಸೃಷ್ಟಿ ಆಗುತ್ತಿದೆ.

ಅಭಿಮಾನಿಗಳು ಮಾತ್ರವಲ್ಲದೆ, ಕನ್ನಡ ಚಿತ್ರರಂಗದ ಅನೇಕರು ಇದನ್ನೇ ಬಯಸುತ್ತಿದ್ದಾರೆ. ಸ್ಯಾಂಡಲ್​ವುಡ್​ನ ಒಗ್ಗಟ್ಟಿಗಾಗಿ ಪ್ರಾರ್ಥಿಸಲಾಗುತ್ತಿದೆ. #DbossKicchaComeTogether ಅಭಿಯಾನಕ್ಕೆ ಇನ್ನಷ್ಟು ಬಲ ಬರುವ ನಿರೀಕ್ಷೆ ಇದೆ. ಇಬ್ಬರು ಸ್ಟಾರ್​ ನಟರ ಅಭಿಮಾನಿಗಳು ಜೊತೆಯಾಗಿ ಈ ರೀತಿ ಬೇಡಿಕೆ ಇಟ್ಟಿರುವುದನ್ನು ದರ್ಶನ್​ ಮತ್ತು ಸುದೀಪ್​ ಖಂಡಿತ ಗಮನಿಸಿರುತ್ತಾರೆ. ಅದಕ್ಕೆ ಅವರು ಯಾವ ರೀತಿ ಪ್ರತಿಕ್ರಿಯಿಸಬಹುದು ಎಂಬುದನ್ನು ತಿಳಿದುಕೊಳ್ಳುವ ಕೌತುಕ ಈಗ ನಿರ್ಮಾಣ ಆಗಿದೆ.

ದರ್ಶನ್​ ಹಾಗೂ ಸುದೀಪ್​ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಇಬ್ಬರಿಗೂ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಕೆಲವೊಮ್ಮೆ ಸೋಶಿಯಲ್​ ಮೀಡಿಯಾದಲ್ಲಿ ಕಿಚ್ಚ-ದಚ್ಚು ಫ್ಯಾನ್ಸ್​ ನಡುವೆ ವಾಗ್ವಾದಗಳು ನಡೆಯುವುದು ಸಹಜ. ಅದರ ನಡುವೆಗೂ ಅಭಿಮಾನಿಗಳೆಲ್ಲ ಸೇರಿ ಇಂಥ ಒಳ್ಳೆಯ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಸ್ನೇಹದಲ್ಲಿ ಒಂದು ಮಾತು ಬರುತ್ತೆ ಹೋಗುತ್ತೆ. ಆದರೆ ಅದಕ್ಕೆ ಸ್ನೇಹವನ್ನೇ ಬಲಿ ಕೊಡಬಾರದು ಎಂದು ಅನೇಕರು ಟ್ವೀಟ್​ ಮಾಡುತ್ತಿದ್ದಾರೆ.

ಇಬ್ಬರ ಮುನಿಸಿಗೆ ಕಾರಣ ಏನು?
ದರ್ಶನ್​ಗೆ 2002ರಲ್ಲಿ ಮೆಜೆಸ್ಟಿಕ್​ ಸಿನಿಮಾ ದೊಡ್ಡಮಟ್ಟದ ಬ್ರೇಕ್​ ನೀಡಿತು. ಅಷ್ಟರಲ್ಲಾಗಲೇ ಸುದೀಪ್​ ‘ಸ್ಪರ್ಶ’, ’ಹುಚ್ಚ’ ಸಿನಿಮಾಗಳಿಂದಾಗಿ ಕರುನಾಡಿನಲ್ಲಿ ಮನೆ ಮಾತಾಗಿದ್ದರು. ‘ಮೆಜೆಸ್ಟಿಕ್’​ ಚಿತ್ರಕ್ಕೆ ದರ್ಶನ್​ ಹೆಸರನ್ನು ತಾವೇ ಸೂಚಿಸಿದ್ದು ಎಂದು ಸುದೀಪ್​ ಅವರು 2017ರಲ್ಲಿ ನೀಡಿದ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದರು. ಈ ಸಂದರ್ಶನದ ತುಣುಕು ದರ್ಶನ್​ ಕಣ್ಣಿಗೆ ಬೀಳುತ್ತಿದ್ದಂತೆಯೇ ಅವರಿಗೆ ಸಖತ್​ ಬೇಸರವಾಗಿತ್ತು.

ಸುದೀಪ್​ ಹೇಳಿಕೆ ತಮ್ಮ ಗಮನಕ್ಕೆ ಬರುತ್ತಿದ್ದಂತೆಯೇ ದರ್ಶನ್​ ಅವರು ಟ್ವಿಟ್ಟರ್​ ಮೂಲಕ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೇ ಒಂದು ಖಡಕ್​ ನಿರ್ಧಾರ ತೆಗೆದುಕೊಂಡರು. ಸುದೀಪ್​ ಜೊತೆಗಿನ ಸ್ನೇಹಕ್ಕೆ ಅಂತ್ಯ ಹಾಡಲು ಅವರು ಮುಂದಾದರು. ಇದು ಅಭಿಮಾನಿಗಳಿಗೆ ಮಾತ್ರವಲ್ಲದೆ, ಇಡೀ ಚಿತ್ರರಂಗಕ್ಕೆ ಶಾಕ್​ ನೀಡಿದ ಘಟನೆ ಆಗಿತ್ತು.

Source:TV9Kannada