ಕರ್ನಾಟಕದಲ್ಲಿ ಲಸಿಕೆ ಪಡೆದ ಮೇಲೂ ಸೋಂಕಿಗೆ ತುತ್ತಾದವರ ಸಂಖ್ಯೆ 13,768; ಕೊವಿಶೀಲ್ಡ್​ ಲಸಿಕೆ ಪಡೆದ 11,150 ಮಂದಿಗೆ ಪಾಸಿಟಿವ್

Aug 21, 2021

ಬೆಂಗಳೂರು: ಕೊರೊನಾ ಸೋಂಕಿನ (Corona Virus) ವಿರುದ್ಧ ಸಶಕ್ತವಾಗಿ ಹೋರಾಡುವುದಕ್ಕೆ ಕೊರೊನಾ ಲಸಿಕೆ (Corona Vaccine) ಪರಿಣಾಮಕಾರಿ ಅಸ್ತ್ರವೇ ಹೊರತು ಸೋಂಕು ದೇಹವನ್ನು ಪ್ರವೇಶಿಸದಂತೆ ತಡೆಯೊಡ್ಡಲಾರದು ಎಂದು ಆರಂಭದಿಂದಲೂ ತಜ್ಞರು ಹೇಳುತ್ತಿದ್ದಾರೆ. ಲಸಿಕೆ ಪಡೆದವರ ದೇಹದಲ್ಲಿ ಸೋಂಕಿನ ವಿರುದ್ಧ ಸೆಣೆಸಾಡುವ ಪ್ರತಿಕಾಯಗಳ ಪ್ರಮಾಣ ವೃದ್ಧಿಯಾಗುವುದರಿಂದ ಅದು ಅಪಾಯದಿಂದ ನಮ್ಮನ್ನು ಪಾರು ಮಾಡಲು ಸಹಕರಿಸುತ್ತದೆ, ಈ ಕಾರಣಕ್ಕಾಗಿ ಎಲ್ಲರೂ ಲಸಿಕೆ ತೆಗೆದುಕೊಳ್ಳಬೇಕು ಆದರೆ, ಲಸಿಕೆ ಪಡೆದ ನಂತರ ಕೊರೊನಾ ನಿಯಮಾವಳಿಗಳನ್ನು ಪಾಲಿಸುವುದರಲ್ಲಿ ನಿರ್ಲಕ್ಷ್ಯತೆ ತೋರಬಾರದು ಎಂದು ವೈದ್ಯರು, ಅಧಿಕಾರಿಗಳು ಮೇಲಿಂದ ಮೇಲೆ ಎಚ್ಚರಿಸಿದ್ದಾರೆ. ಇದೀಗ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ ಅಂಕಿ ಅಂಶವೊಂದು ಹೊರಬಿದ್ದಿದ್ದು ಅದರಲ್ಲಿ ಕೊರೊನಾ ಲಸಿಕೆ ಪಡೆದ ಎಷ್ಟು ಮಂದಿಗೆ ಸೋಂಕು (Covid 19) ದೃಡಪಟ್ಟಿದೆ ಎನ್ನುವ ವಿಚಾರ ಬಹಿರಂಗವಾಗಿದೆ.

ಕರ್ನಾಟಕ ರಾಜ್ಯದಲ್ಲಿ ಕೊವಿಡ್ ಲಸಿಕೆ ಪಡೆದ ಒಟ್ಟು 13,768 ಜನರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ ಎಂದು ಅಂಕಿ ಅಂಶಗಳು ತಿಳಿಸಿವೆ. ಈ ಪೈಕಿ ಕೊವಿಶೀಲ್ಡ್​ ಲಸಿಕೆ ಪಡೆದ 11,150 ಜನರು ಹಾಗೂ ಕೊವ್ಯಾಕ್ಸಿನ್ ಲಸಿಕೆ​ ಪಡೆದ 2,618 ಜನರು ಸೋಂಕಿಗೆ ತುತ್ತಾಗಿದ್ದಾರೆ. 1 ಡೋಸ್ ಕೊವಿಶೀಲ್ಡ್ ಲಸಿಕೆ ಪಡೆದವರಲ್ಲಿ 9,030 ಜನರಿಗೆ ಕೊರೊನಾ ಸೋಂಕು ತಗುಲಿದ್ದರೆ, 2 ಡೋಸ್ ಕೊವಿಶೀಲ್ಡ್​​ ಲಸಿಕೆ ಪಡೆದ 2,120 ಜನರಿಗೆ ಕೊವಿಡ್ ದೃಢಪಟ್ಟಿದೆ. ಅಂತೆಯೇ, 1 ಡೋಸ್ ಕೊವ್ಯಾಕ್ಸಿನ್ ಲಸಿಕೆ ಪಡೆದಿರುವ 2,216 ಜನರು ಸೋಂಕಿತರಾಗಿದ್ದು, 2 ಡೋಸ್ ಕೊವ್ಯಾಕ್ಸಿನ್ ಪಡೆದ 402 ಜನರಿಗೆ ಸೋಂಕು ತಗುಲಿದೆ ಎನ್ನುವುದು ಈ ಅಂಕಿ ಅಂಶಗಳಿಂದ ತಿಳಿದುಬಂದಿದೆ.

ಒಟ್ಟು 1 ಡೋಸ್ ಕೊವಿಡ್ ಲಸಿಕೆ ಪಡೆದ 11,246 ಜನರು ಹಾಗೂ 2 ಡೋಸ್ ಲಸಿಕೆ ಪಡೆದ 2,522 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಲಸಿಕೆ‌ ಪಡೆದ ಮೇಲೂ ಸೋಂಕು ಪತ್ತೆಯಾದ ಜಿಲ್ಲೆಗಳಲ್ಲಿ ಮಂಡ್ಯ ನಂಬರ್ 1 ಸ್ಥಾನದಲ್ಲಿದೆ. ಮಂಡ್ಯ ಜಿಲ್ಲೆಯಲ್ಲಿ ಲಸಿಕೆ ಪಡೆದ ಮೇಲೂ ಒಟ್ಟು 1,262 ಜನರಿಗೆ ಸೋಂಕು ತಗುಲಿದೆ. ಗದಗ ಜಿಲ್ಲೆಯಲ್ಲಿ ಲಸಿಕೆ ಪಡೆದ 1,198 ಜನರು ಸೋಂಕಿತರಾಗಿದ್ದು ಅದು ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ ಶಿವಮೊಗ್ಗ (1192 ಜನ), ನಾಲ್ಕನೇ ಸ್ಥಾನದಲ್ಲಿ ಉಡುಪಿ (1075 ಜನ), ಐದನೇ ಸ್ಥಾನದಲ್ಲಿ ಬೆಳಗಾವಿ (1074 ಜನ) ಜಿಲ್ಲೆಗಳಿವೆ.

ಲಸಿಕೆ ಪಡೆದ ಮೇಲೂ ಸೋಂಕು ಕಾಣಿಸಿಕೊಂಡವರ ಬಗ್ಗೆ ಆರೋಗ್ಯ ಇಲಾಖೆಯಿಂದ ಮಾಹಿತಿ ಕಲೆ ಹಾಕುವ ಪ್ರಕ್ರಿಯೆ ನಡೆಯುತ್ತಿದ್ದು, ಈ ವೇಳೆ ಮತ್ತೂ ಕೆಲವರು ಪತ್ತೆಯಾಗುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಮತ್ತಷ್ಟು ಜನರಿಗೆ ಲಸಿಕೆ ಪಡೆದ ಮೇಲೂ ಸೋಂಕು ಧೃಡಪಟ್ಟಿರುವ ಮಾಹಿತಿ ಲಭ್ಯವಾಗುತ್ತಿದ್ದು, 60 ವರ್ಷ ಮೇಲ್ಪಟ್ಟ ಕೆಲವರು ಲಸಿಕೆ ಪಡೆದ ಮೇಲೂ ಸೋಂಕಿತರಾಗಿ ಸಾವನ್ನಪ್ಪಿರುವುದು ತಿಳಿದುಬಂದಿದೆ. ಎರಡು ಡೋಸ್​ ಲಸಿಕೆ ಪಡೆದ ಮೇಲೂ ಸಾವಿಗೀಡಾದವರು ಅನ್ಯ ರೋಗಗಳಿಂದಲೂ ಬಳಲುತ್ತಿದ್ದರು ಎಂದು ಇದೇ ವೇಳೆ ಗೊತ್ತಾಗಿದೆ.

Source: tv9 Kannada