ಟ್ರೆಂಡಿಂಗ್ ಆಯ್ತು #BharatRatnaForRatanTata… ಈ ಅಭಿಯಾನ ನಿಲ್ಲಿಸಿ; ಅಭಿಮಾನ ಇರಲಿ ಎಂದ ರತನ್ ಟಾಟಾ

Feb 6, 2021

#BharatRatnaForRatanTata ಪ್ರಶಸ್ತಿಯ ವಿಷಯದಲ್ಲಿ ಸಾಮಾಜಿಕ ಮಾಧ್ಯಮದ ಒಂದು ಭಾಗವು ವ್ಯಕ್ತಪಡಿಸಿದ ಭಾವನೆಗಳನ್ನು ನಾನು ಪ್ರಶಂಸಿಸುತ್ತಿದ್ದರೂ, ಅಂತಹ ಅಭಿಯಾನಗಳನ್ನು ನಿಲ್ಲಿಸಬೇಕೆಂದು ವಿನಂತಿಸುತ್ತೇನೆ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ರತನ್ ಟಾಟಾ ಬರೆದುಕೊಂಡಿದ್ದಾರೆ.

ಬೆಂಗಳೂರು: ಅಪ್ಪಟ ಉದ್ಯಮಿ ರತನ್ ಟಾಟಾ ಅವರು ಭಾರತೀಯರ ಮನೆ-ಮನಗಳಲ್ಲಿ ಕಾಯಂ ಸ್ಥಾನ ಪಡೆದು ಯಾವುದೋ ಕಾಲವಾಗಿದೆ. ಅವರ ಹೆಸರಿನಲ್ಲಿಯೇ ಇದೆ ರತನ; ಅದಕ್ಕೆ ಭಾರತ ರತ್ನ ಮನ್ನಣೆ ಬೇಕಾಗಿದೆ, ನಮ್ಮೀ ಜನಪ್ರಿಯ ಉದ್ಯಮಿ ರತನ್ ಟಾಟಾಗೆ ಭಾರತ ರತ್ನ Bharat Ratna ಪ್ರಶಸ್ತಿ ನೀಡಬೇಕು ಎಂಬ ಕೂಗು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಕೇಳಿ ಬರುತ್ತಿರುತ್ತದೆ.

#BharatRatnaForRatanTata ಎಂಬ ಹ್ಯಾಶ್ ಟ್ಯಾಗ್ ಬಳಸಿ ಟ್ವಿಟರ್​ನಲ್ಲಿ ಕೆಲವರು ಭಾರತ ರತ್ನ ಪ್ರಶಸ್ತಿ ನೀಡಿ ಎಂದು ಒತ್ತಾಯಿಸಿದ್ದಾರೆ. ಟ್ವಿಟರ್​ನಲ್ಲಿ ಶುರುವಾದ ಈ ಅಭಿಯಾನ ಬಾರಿ ಟ್ರೆಂಡಿಂಗ್ ಆಗಿದೆ. ಸದ್ಯ ಈ ಬಗ್ಗೆ ಇಂದು ಸ್ವತಃ ರತನ್ ಟಾಟಾ Ratan Tata ಪ್ರತಿಕ್ರಿಯಿಸಿದ್ದಾರೆ. ಈ ಅಭಿಯಾನವನ್ನು ನಿಲ್ಲಿಸುವಂತೆ ವಿನಂತಿಸಿಕೊಂಡಿದ್ದಾರೆ.

ಭಾರತೀಯನಾಗಲು ನಾನು ಅದೃಷ್ಟಶಾಲಿ
ಪ್ರಶಸ್ತಿಯ ವಿಷಯದಲ್ಲಿ ಸಾಮಾಜಿಕ ಮಾಧ್ಯಮದ ಒಂದು ವಲಯವು ವ್ಯಕ್ತಪಡಿಸಿದ ಭಾವನೆಗಳನ್ನು ನಾನು ಪ್ರಶಂಸಿಸುತ್ತಿದ್ದರೂ, ಅಂತಹ ಅಭಿಯಾನಗಳನ್ನು ನಿಲ್ಲಿಸಬೇಕೆಂದು ವಿನಂತಿಸುತ್ತೇನೆ. ಬದಲಾಗಿ, ನಾನು ಭಾರತೀಯನಾಗಲು ಅದೃಷ್ಟಶಾಲಿ ಎಂದು ಭಾವಿಸುತ್ತೇನೆ ಮತ್ತು ಭಾರತದ ಬೆಳವಣಿಗೆ ಮತ್ತು ಸಮೃದ್ಧಿಗೆ ಕೊಡುಗೆ ನೀಡಲು ಪ್ರಯತ್ನಿಸುವೆ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ರತನ್ ಟಾಟಾ ಬರೆದುಕೊಂಡಿದ್ದಾರೆ.

ಸುಸ್ಥಿರ ಅಭಿವೃದ್ಧಿ ಮತ್ತು ಶಾಂತಿ ಸಾಧಿಸುವ ನೆಲೆಯಲ್ಲಿ ಹೊಸ ಆವಿಷ್ಕಾರಗಳನ್ನು ಬೆಂಬಲಿಸಿದ ಉದ್ಯಮಿ ರತನ್ ಟಾಟಾಗೆ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ನೀಡುವ ಅಭಿಯಾನದ ಬಗ್ಗೆ ಮೋಟಿವೇಷನಲ್ ಸ್ಪೀಕರ್ ಡಾ. ವಿವೇಕ್ ಭಿಂದ್ರಾ ಟ್ವೀಟ್ ಮಾಡಿದ ನಂತರದಿಂದ #BharatRatnaForRatanTata ಎಂಬ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದೆ.  

ಕೆಲವು ಟ್ವಿಟರ್ ಬಳಕೆದಾರರು 12/11ರಲ್ಲಾದ ಭಯೋತ್ಪಾದಕ ದಾಳಿಯ ಸಮಯದಲ್ಲಿ ರತನ್ ಟಾಟಾ ಪ್ರದರ್ಶಿಸಿದ ನಿಜವಾದ ನಾಯಕನ ಗುಣಲಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ.

Source:TV9 Kannada