ಟೆಸ್ಟ್ ಚಾಂಪಿಯನ್‌ಶಿಪ್‌ ಗೆಲುವು ನನಗೆ ವಿಶ್ವಕಪ್‌ ಗೆದ್ದಂತೆ: ಇಶಾಂತ್ ಶರ್ಮಾ

Feb 23, 2021

ಅಹಮದಾಬಾದ್‌(ಫೆ.23): ಭಾರತ-ಇಂಗ್ಲೆಂಡ್‌ ನಡುವೆ ಅಹಮದಾಬಾದ್‌ನ ಮೊಟೇರಾ ಕ್ರೀಡಾಂಗಣದಲ್ಲಿ ನಡೆಯಲಿರುವ ಮೂರನೇ ಟೆಸ್ಟ್‌ ಪಂದ್ಯವು ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾ ಪಾಲಿಗೆ ಅತ್ಯಂತ ಮಹತ್ವದ ಪಂದ್ಯ ಎನಿಸಿಕೊಂಡಿದೆ. ಇಶಾಂತ್‌ ಶರ್ಮಾ ಬಿಳಿ ಜೆರ್ಸಿ ತೊಟ್ಟು ತಮ್ಮ 100ನೇ ಟೆಸ್ಟ್‌ ಪಂದ್ಯವನ್ನಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಮೊದಲು ಭಾರತ ಪರ ನೂರಕ್ಕೂ ಹೆಚ್ಚು ಟೆಸ್ಟ್ ಪಂದ್ಯವನ್ನಾಡಿದ ಏಕೈಕ ವೇಗದ ಬೌಲರ್ ಎನ್ನುವ ಕೀರ್ತಿಗೆ ಕಪಿಲ್ ದೇವ್ ಭಾಜನರಾಗಿದ್ದರು. ಇದೀಗ ಕಪಿಲ್ ದೇವ್‌ ಬಳಿಕ ಭಾರತ 100 ಟೆಸ್ಟ್‌ ಪಂದ್ಯವನ್ನಾಡಿದ ಎರಡನೇ ಬೌಲರ್‌ ಎನ್ನುವ ಗೌರವಕ್ಕೆ ಡೆಲ್ಲಿ ವೇಗಿ ಇಶಾಂತ್ ಶರ್ಮಾ ಭಾಜನರಾಗಲಿದ್ದಾರೆ.

ತಮ್ಮ ಮೈಲಿಗಲ್ಲಿನ ಪಂದ್ಯದ ಬಗ್ಗೆ ಮಾತನಾಡಿದ 32 ವರ್ಷದ ಇಶಾಂತ್ ಶರ್ಮಾ, ಇಂಗ್ಲೆಂಡ್ ವಿರುದ್ದದ ಮೂರನೇ ಟೆಸ್ಟ್‌ ಪಂದ್ಯವನ್ನು ಗೆಲ್ಲುವುದರ ಮೂಲಕ ಭಾರತ ತಂಡವನ್ನು ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೇರಿಸಲು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ. ತಾವೀಗ ಒಂದು ಮಾದರಿಯ ಕ್ರಿಕೆಟ್ ಆಡುತ್ತಿದ್ದು, ವಿಶ್ವಟೆಸ್ಟ್ ಚಾಚಾಂಪಿಯನ್‌ಶಿಪ್‌ ಫೈನಲ್‌ ತಮಗೆ ವಿಶ್ವಕಪ್‌ ಆಡಿದಂತೆ ಎಂದು ಹೇಳಿದ್ದಾರೆ.

ಸದ್ಯ ನನ್ನ ಮನಸಿನಲ್ಲೀಗ ಇಂಗ್ಲೆಂಡ್‌ ವಿರುದ್ದ ಟೆಸ್ಟ್‌ ಸರಣಿ ಜಯಿಸಿ ಭಾರತ ತಂಡವನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ ಅರ್ಹತೆ ಪಡೆಯುವ ಬಗ್ಗೆ ಆಲೋಚನೆಗಳಾಗುತ್ತಿವೆ. ನಾನೀಗ ಭಾರತ ಪರ ಕೇವಲ ಒಂದು ಮಾದರಿಯ ಕ್ರಿಕೆಟ್‌ ಮಾತ್ರ ಆಡುತ್ತಿದ್ದೇನೆ. ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ನನಗೆ ವಿಶ್ವಕಪ್ ಇದ್ದಂತೆ. ಟೀಂ ಇಂಡಿಯಾ ವಿಶ್ವಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ತಲುಪಿ ಟ್ರೋಫಿ ಜಯಿಸಿದರೆ ನನಗದು ಐಸಿಸಿ ವಿಶ್ವಕಪ್‌ ಅಥವಾ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ ಜಯಿಸಿದಂತೆ ಎಂದು ಹೇಳಿದ್ದಾರೆ.

ನ್ಯೂಜಿಲೆಂಡ್ ತಂಡ ಈಗಾಗಲೇ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ ಅರ್ಹತೆಗಿಟ್ಟಿಸಿಕೊಂಡಿದೆ. ಸದ್ಯ ಭಾರತ ಹಾಗೂ ಇಂಗ್ಲೆಂಡ್‌ ತಂಡಕ್ಕೆ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ಪ್ರವೇಶಿಸಲು ಸಮಾನ ಅವಕಾಶವಿದ್ದು, ಇಂಗ್ಲೆಂಡ್‌ ಇನ್ನುಳಿದ ಎರಡು ಟೆಸ್ಟ್ ಪಂದ್ಯಗಳನ್ನು ಜಯಿಸಿದರೆ ಫೈನಲ್‌ ಪ್ರವೇಶಿಸಲಿದೆ. ಇನ್ನು ಭಾರತ ತಂಡ ಒಂದು ಪಂದ್ಯ ಗೆದ್ದು ಮತ್ತೊಂದು ಪಂದ್ಯ ಡ್ರಾ ಮಾಡಿಕೊಂಡರು ಸಾಕು ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳಲಿದೆ. ಒಂದು ವೇಳೆ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಡ್ರಾ ಆದರೆ ಅಥವಾ ಇಂಗ್ಲೆಂಡ್‌ 2-1 ಅಂತರದಲ್ಲಿ ಟೆಸ್ಟ್ ಸರಣಿ ಜಯಿಸಿದರೆ ಆಸ್ಟ್ರೇಲಿಯಾ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೇರಲಿದೆ.

ಭಾರತ ಹಾಗೂ ಇಂಗ್ಲೆಂಡ್ ನಡುವಿನ 4 ಪಂದ್ಯಗಳ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯ ಜಯಿಸಿದ್ದು, ಫೆಬ್ರವರಿ 24ರಂದು 3ನೇ ಟೆಸ್ಟ್ ಪಂದ್ಯ ಅಹಮದಾಬಾದ್‌ನ ಮೊಟೇರಾ ಸ್ಟೇಡಿಯಂನಲ್ಲಿ ಆರಂಭವಾಗಲಿದೆ.

Source: Suvarna News