ಪ್ರಚಾರಕ್ಕಾಗಿ ಜನರ ಗುಂಪು ಸೇರಿಸುತ್ತಿರುವ ಸ್ಟಾರ್​ಗಳಿಗೆ ಕೋವಿಡ್​-19 ನಿಯಮಾವಳಿ ನೆನಪಿಸಿದ ಸುಧಾಕರ್​!

Mar 24, 2021

ಕೊರೊನಾ ವೈರಸ್​ ಎರಡನೇ ಅಲೆ ಜೋರಾಗುತ್ತಿದೆ. ಈ ನಡುವೆ ಕನ್ನಡ ಸಿನಿಮಾ ಕಲಾವಿದರು ತಮ್ಮ ಅಭಿಮಾನಿಗಳನ್ನು ಗುಂಪು ಸೇರಿಸುತ್ತಿರುವ ಬಗ್ಗೆ ಹಲವರಿಂದ ಆಕ್ಷೇಪ ವ್ಯಕ್ತವಾಗುತ್ತಿದೆ.

ಒಂದೆಡೆ ಕೊರೊನಾ ವೈರಸ್​ ಭಯ ಇದೆ. ಇನ್ನೊಂದೆಡೆ ಜೀವನ ನಡೆಯಲೇ ಬೇಕಾದ ಅನಿವಾರ್ಯತೆ ಇದೆ. ಸದ್ಯ ಸ್ಯಾಂಡಲ್​ವುಡ್​ನ ಪರಿಸ್ಥಿತಿ ಹಾಗೆಯೇ ಆಗಿದೆ. ಕೋವಿಡ್​-19ಗೆ ಹೆದರಿಕೊಂಡು ಸುಮ್ಮನೆ ಮನೆಯಲ್ಲಿ ಕುಳಿತರೆ ಚಿತ್ರರಂಗ ಸಂಕಷ್ಟಕ್ಕೆ ಸಿಲುಕುತ್ತದೆ. ಚಿತ್ರರಂಗವನ್ನೇ ನಂಬಿಕೊಂಡವರ ಬದುಕು ಕಷ್ಟ ಆಗುತ್ತದೆ. ಹಾಗಾಗಿ ಪ್ರಚಾರ ಮಾಡಿ ಸಿನಿಮಾಗಳನ್ನು ಗೆಲ್ಲಿಸಬೇಕಾಗಿರುವುದು ಸದ್ಯದ ಅನಿವಾರ್ಯತೆ. ಆದರೆ ಈ ಸಂದರ್ಭದಲ್ಲಿ ಕೋವಿಡ್​-19 ನಿಯಮಾವಳಿಯನ್ನೂ ಮರೆಯುವಂತಿಲ್ಲ.

ಈ ವಿಚಾರದ ಬಗ್ಗೆ ಆರೋಗ್ಯ ಸಚಿವ ಡಾ. ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ. ‘ರಾಜ್ಯದಲ್ಲಿ ದಿನೇದಿನೆ ಕೊವಿಡ್ ಪ್ರಕರಣಗಳು ಹೆಚ್ಚಳ ಆಗುತ್ತಿವೆ. ಆದರೂ ಕೆಲವು ಸೆಲೆಬ್ರಿಟಿಗಳು ಸಾವಿರಾರು ಸಂಖ್ಯೆಗಳಲ್ಲಿ ಅಭಿಮಾನಿಗಳನ್ನು ಗುಂಪು ಸೇರಿಸುತ್ತಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಚಲನಚಿತ್ರ ತಾರೆಯರಿಗೆ ನಾನು ಮನವಿ ಮಾಡುತ್ತೇನೆ’ ಎಂದು ಸುಧಾಕರ್​ ಹೇಳಿದ್ದಾರೆ.

’ಸಾವಿರಾರು ಜನರನ್ನು ಸೇರಿಸದಿರಿ. ನೀವೂ ಮಾಸ್ಕ್ ಧರಿಸಿ, ನಿಮ್ಮ ಅಭಿಮಾನಿಗಳಿಗೂ ಮಾಸ್ಕ್​ ಧರಿಸುವಂತೆ ಹೇಳಬೇಕು. ಎಲ್ಲರೂ ಕೋವಿಡ್​-19 ನಿಯಮಗಳನ್ನು ಪಾಲಿಸಬೇಕು. ಚಲನಚಿತ್ರ ತಾರೆಯರಿಗೆ ಇದು ನನ್ನ ಕಳಕಳಿಯ ಮನವಿ’ ಎಂದು ಹೇಳಿರುವ ಸುಧಾಕರ್, ಯಾವುದೇ ಸ್ಟಾರ್​ ನಟರ ಹೆಸರನ್ನೂ ಪ್ರಸ್ತಾಪಿಸಿಲ್ಲ.

ಪುನೀತ್​ ರಾಜ್​ಕುಮಾರ್​ ನಟನೆಯ ‘ಯುವರತ್ನ’ ಸಿನಿಮಾ ಏ.1ರಂದು ಬಿಡುಗಡೆ ಆಗಲು ಸಜ್ಜಾಗಿದೆ. ಆ ಪ್ರಯುಕ್ತ ಅವರು ರಾಜ್ಯಾದ್ಯಂತ ಸಂಚರಿಸಿ ಪ್ರಚಾರ ಮಾಡುತ್ತಿದ್ದಾರೆ. ಸತತ ಮೂರು ದಿನಗಳಿಂದ ಬಳ್ಳಾರಿ, ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ, ಶಿರಾ, ಕಲಬುರಗಿ, ಬೆಳಗಾವಿ, ಹುಬ್ಬಳ್ಳಿ ಮುಂತಾದ ಕಡೆಗಳಿಗೆ ಅಪ್ಪು ತೆರಳಿದ್ದಾರೆ. ಅವರು ಹೋದಲ್ಲೆಕ್ಕ ಸಾವಿರಾರು ಅಭಿಮಾನಿಗಳು ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಮುಗಿಬಿದ್ದಿದ್ದಾರೆ. ಇದಕ್ಕೆ ಅನೇಕರಿಂದ ವಿರೋಧ ವ್ಯಕ್ತವಾಗಿದೆ.

ಇನ್ನು, ರಾಬರ್ಟ್​ ಸಿನಿಮಾ ಗೆಲುವಿನ ಬಳಿಕ ದರ್ಶನ್​ ಕೂಡ ವಿಜಯ ಯಾತ್ರೆ ನಡೆಸಲು ತೀರ್ಮಾನಿದ್ದಾರೆ. ಮಾ.29ರಿಂದ ಏ.1ರವರೆಗೆ ಅವರು ಮೊದಲ ಹಂತವಾಗಿ ಅಭಿಮಾನಿಗಳನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ. ಹಲವು ಜಿಲ್ಲೆಗಳಿಗೆ ರಾಬರ್ಟ್​ ತಂಡದ ಜೊತೆ ದರ್ಶನ್​ ಪ್ರವಾಸ ಮಾಡಲಿದ್ದಾರೆ. ವಿಜಯ ಯಾತ್ರೆ ವೇಳೆ ಲಕ್ಷಾಂತರ ಅಭಿಮಾನಿಗಳು ಸೇರುವುದು ಗ್ಯಾರಂಟಿ. ಈ ಸಂದರ್ಭದಲ್ಲಿ ಚಿತ್ರತಂಡದವರು ಮತ್ತು ಅಭಿಮಾನಿಗಳು ಕೂಡ ಕೋವಿಡ್​-19 ನಿಯಮಾವಳಿಗಳನ್ನು ಪಾಲಿಸಬೇಕಿದೆ.

Source:TV9Kannada