ಜಮಖಂಡಿ: ಮುಷ್ಕರದ ಮಧ್ಯೆ ಬಸ್‌ ಚಾಲನೆ, ಕಲ್ಲೇಟಿಗೆ ಚಾಲಕ ಬಲಿ

Apr 17, 2021

ಜಮಖಂಡಿ(ಏ.17): ಬಾಗಲಕೋಟೆಯಲ್ಲಿ ಸಾರಿಗೆ ನೌಕರರ ಮುಷ್ಕರ ಹತ್ತನೇ ದಿನಕ್ಕೆ ಕಾಲಿಟ್ಟಿದ್ದು, ಶುಕ್ರವಾರ ಜಮಖಂಡಿ ತಾಲೂಕಿನ ಕವಟಗಿ ಪುನರ್ವಸತಿ ಕೇಂದ್ರದ ಬಳಿ ಸಂಚಾರ ಆರಂಭಿಸಿದ್ದ ಕೆಎಸ್‌ಆರ್‌ಟಿಸಿ ಬಸ್‌ನ ಮೇಲೆ ಕಲ್ಲು ತೂರಾಟ ನಡೆದಿದ್ದು, ಈ ವೇಳೆ ಬಸ್‌ ಚಾಲಕನ ಗಂಟಲಿಗೆ ಕಲ್ಲೇಟು ಬಿದ್ದಿದ್ದರಿಂದ ಚಾಲಕ ಸಾವನ್ನಪ್ಪಿದ್ದಾನೆ. ಮೃತನು ಜಮಖಂಡಿ ಡಿಪೋದ ಚಾಲಕ.

ನಬಿರಸೂಲ ಧಾದರಸಾಬ ಅವಟಿ(59) ಮೃತ ಚಾಲಕ. ಕಳೆದ ನಾಲ್ಕು ದಿನಗಳಿಂದ ಜಮಖಂಡಿ ಡಿಪೋದ ಕೆಲವೇ ಕೆಲವು ಮಾರ್ಗಗಳ ಬಸ್‌ಗಳುನ್ನು ಸಾರಿಗೆ ಅಧಿಕಾರಿಗಳು ಓಡಿಸುತ್ತಿದ್ದು, ಶುಕ್ರವಾರ ಬೆಳಗ್ಗೆ ಜಮಖಂಡಿಯಿಂದ ವಿಜಯಪುರಕ್ಕೆ ಬಸ್‌ನ್ನು ಓಡಿಸಲಾಗಿದೆ. ಆ ಬಸ್‌ ಮರಳಿ ವಿಜಯಪುರದಿಂದ ವಾಪಸ್ಸು ಜಮಖಂಡಿ ಬರುವ ವೇಳೆ ಸೋಲ್ಲಾಪುರ-ಧಾರವಾಡ ರಾಜ್ಯ ಹೆದ್ದಾರಿಯಲ್ಲಿನ ಕವಟಗಿ ಪುರ್ನವಸತಿ ಕೇಂದ್ರದಲ್ಲಿ ಕೆಲವು ಕಿಡಿಗೇಡಿಗಳು ಬಸ್‌ಗೆ ಕಲ್ಲು ಎಸೆದಿದ್ದರಿಂದ ಬಸ್‌ನ ಮುಂದಿನ ದೊಡ್ಡ ಗ್ಲಾಸ್‌ ಪುಡಿ-ಪುಡಿಯಾಗಿ ಚಾಲಕನ ಗಂಟಲಿಗೆ ನೇರವಾಗಿ ಕಲ್ಲು ಬಂದು ಬಡೆದಿದೆ. ಈ ವೇಳೆ ಚಾಲಕನನ್ನು ನೇರವಾಗಿ ಜಮಖಂಡಿಯ ಉಪವಿಭಾಗದ ಸರ್ಕಾರಿ ಆಸ್ಪತ್ರೆ ದಾಖಲಿಸಲಾಗಿತ್ತು.

ಆದರೆ, ಚಿಕಿತ್ಸೆ ಫಲಿಸದೇ ಚಾಲಕ ಸಾವನಪ್ಪಿದ್ದಾನೆ. ಈ ಚಾಲಕನಿಗೆ ಹೆಂಡತಿ, ನಾಲ್ವರು ಪುತ್ರರು ಇದ್ದಾರೆ. ಬಸ್‌ನಲ್ಲಿ ಇದ್ದ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗಿಲ್ಲ. ಆದರೆ, ಯಾವ ಕಾರಣಕ್ಕೆ ಕಲ್ಲು ತೂರಾಟ ನಡೆದಿದೆ ಎಂಬುವುದು ತಿಳಿದು ಬಂದಿಲ್ಲ.ಬೈಕ್‌ ಮೇಲೆ ಬಂದು ಕಲ್ಲು ತೂರಿದ ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ಕಿಡಗೇಡಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.

ಮೃತ ಚಾಲಕ ನಬಿರಸೂಲ ಇನ್ನೂ ಕೇವಲ 14 ತಿಂಗಳು ಸೇವೆ ಬಾಕಿ ಉಳಿದಿತ್ತು.ಈತನು ಗುರುವಾರ ಮಾತ್ರವೇ ಕೆಲಸಕ್ಕೆ ಹಾಜರಾಗಿದ್ದು, ಅಂದು ಜಮಖಂಡಿ-ಮಹಾಲಿಂಗಪುರ ಟ್ರಿಪ್‌ ಡ್ಯೂಟಿ ಮಾಡಿ, ಶುಕ್ರವಾರ ಬೆಳಗ್ಗೆ ವಿಜಯಪುರಕ್ಕೆ ಹೋಗಿ ಬರುತ್ತಿದ್ದನು. ಶುಕ್ರವಾರ ಈ ಘಟನೆಯಿಂದ ಮಧ್ಯಾಹ್ನ ಜಮಖಂಡಿ ಬಸ್‌ ಡಿಪೋದಿಂದ ಓಡುವ ಎಲ್ಲ ಮಾರ್ಗಗಳ ಬಸ್‌ಗಳನ್ನು ಸ್ಥಗಿತಗೊಳಿಸಲಾಯಿತೆಂದು ನಿಲ್ದಾಣಾಧಿಕಾರಿ ತಿಳಿಸಿದರು.

ಸಾರಿಗೆ ಸಂಸ್ಥೆ ನೌಕರರು ಮುಷ್ಕರದಲ್ಲಿ ತೊಡಗಿದ್ದರಿಂದ ಲಕ್ಷಾಂತರ ಪ್ರಯಾಣಿಕರು ತೊಂದರೆ ಅನುಭವಿಸುತ್ತಿರುವುದನ್ನು ನೋಡದೇ ಕೆಲವು ಸಿಬ್ಬಂದಿ ಸ್ವಪ್ರೇರಣೆಯಿಂದ ಸೇವೆಗೆ ಹಾಜರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ, ಈ ಘಟನೆಯಿಂದ ಸಾರಿಗೆ ನೌಕರರು ಮತ್ತಷ್ಟು ಭೀತಿಗೆ ಒಳಗಾಗಿದ್ದಾರೆ. ಜಿಲ್ಲಾಧಿಕಾರಿ ಡಾ. ಕ್ಯಾಪ್ಟನ್‌ ರಾಜೇಂದ್ರ, ಎಸ್ಪಿ ಲೋಕೇಶ ಜಗಳಾಸರ್‌, ಡಿವೈಎಸ್ಪಿ ಪಾಂಡುರಂಗಯ್ಯ ಇನ್ನಿತರ ಹಿರಿಯ ಅಧಿಕಾರಿಗಳು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದರು.

ವಿದ್ಯಾರ್ಥಿಗಳ ಪರದಾಟ:

10 ದಿನಗಳ ಮುಷ್ಕರದ ಪರಿಣಾಮ ಬಾಗಲಕೋಟೆಗೆ ಬರುವ ಕಾಲೇಜು ವಿದ್ಯಾರ್ಥಿಗಳು ಬಸ್‌ಗಳಿಲ್ಲದೆ ತೀವ್ರ ತೊಂದರೆಗೆ ಒಳಗಾಗಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್‌ಪಾಸ್‌ ಇದ್ದರೂ ಪ್ರಯೋಜನಕ್ಕೆ ಬರುತ್ತಿಲ್ಲ. ಖಾಸಗಿ ವಾಹನಗಳನ್ನು ಅವಲಂಬಿಸಿ ಪ್ರತಿದಿನ 100 ಕೊಟ್ಟು ಕಾಲೇಜಿಗೆ ಬರುವ ಅನಿವಾರ್ಯತೆ ಇದೆ ಎಂದು ನೊಂದು ಹೇಳುವ ವಿದ್ಯಾರ್ಥಿಗಳು ಪ್ರತಿದಿನ ನೂರಾರು ರು. ಖರ್ಚು ಮಾಡಿ ಕಾಲೇಜಿಗೆ ಹೋಗುವುದು ಬೇಡ ಎಂದು ಪಾಲಕರು ಹೇಳುತ್ತಿದ್ದಾರೆ ಎಂದು ಅಸಹಾಯಕತೆಯನ್ನು ವಿದ್ಯಾರ್ಥಿಗಳು ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರ ಹಾಗೂ ಸಾರಿಗೆ ಸಚಿವರು ಬೇಗನೆ ಸಮಸ್ಯೆ ಬಗೆಹರಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಅಂದಾಜು 6 ಕೋಟಿ ನಷ್ಟ:

ಕಳೆದ 10 ದಿನಗಳಿಂದ ನಡೆದಿರುವ ನೌಕರರ ಮುಷ್ಕರದ ಪರಿಣಾಮ ಬಾಗಲಕೋಟೆಯ ವಿಭಾಗೀಯ ಸಾರಿಗೆಗೆ ಅಂದಾಜು 6 ಕೋಟಿಗೂ ಹೆಚ್ಚು ನಷ್ಟಸಂಭವಿಸಿದೆ. 2300 ಸಿಬ್ಬಂದಿಯನ್ನು ಹೊಂದಿರುವ ಬಾಗಲಕೋಟೆ ಸಾರಿಗೆ ಸಂಸ್ಥೆಯು ಪ್ರತಿನಿತ್ಯ 638 ಶೆಡ್ಯೂಲ್‌ಗಳನ್ನು ಕಾರ್ಯಾರಂಭ ಮಾಡುತ್ತಿತ್ತು. ಆದರೆ 10 ದಿನಗಳಿಂದ ಬೆರಳಿಣಿಕೆಯಷ್ಟು ಬಸ್‌ಗಳು ಮಾತ್ರ ಓಡಾಟ ಆಗಿದ್ದರಿಂದ ಈ ಪ್ರಮಾಣದ ಹಾನಿ ಸಂಸ್ಥೆಗೆ ಆಗಿದೆ ಎಂದು ಅ​ಧಿಕಾರಿಗಳು ತಿಳಿಸಿದ್ದಾರೆ.

ಕಲ್ಲೆಸೆತಕ್ಕೆ ಬಲಿಯಾದ ಚಾಲಕನ ಕುಟುಂಬಕ್ಕೆ 30 ಲಕ್ಷ

ಕರ್ತವ್ಯದ ವೇಳೆ ನಡೆದ ಕಲ್ಲೆಸೆತದಲ್ಲಿ ಮೃತಪಟ್ಟಬಾಗಲಕೋಟೆ ವಿಭಾಗದ ಜಮಖಂಡಿ ಘಟಕದ ಚಾಲಕ ನಬೀದ ರಸೂಲ್‌ ಕೆ. ಅವಟಿ(59) ಅವರ ಕುಟುಂಬಕ್ಕೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯೂ 30 ಲಕ್ಷ ಪರಿಹಾರ ಘೋಷಿಸಿದೆ.

ವಿಜಯಪುರದಿಂದ ಜಮಖಂಡಿ ಮಾರ್ಗದ ಬಸ್‌ನಲ್ಲಿ ಇವರು ಕರ್ತವ್ಯ ನಿರ್ವಹಿಸುತ್ತಿದ್ದರು. ಸಾರಿಗೆ ಮುಷ್ಕರದ ಹಿನ್ನೆಲೆ ಕರ್ತವ್ಯಕ್ಕೆ ಹಾಜರಾಗಿದ್ದಾಗ ಕೆಲ ಕಿಡಿಗೇಡಿಗಳು ಶುಕ್ರವಾರ ಬಸ್‌ಗೆ ಕಲ್ಲು ತೂರಿದ್ದರು. ಕಲ್ಲೆಸೆತದಿಂದ ಬಸ್‌ನ ಮುಂಭಾಗದ ಗ್ಲಾಸು ಒಡೆದು ಚಾಲಕನ ಕುತ್ತಿಗೆಗೆ ಬಿದ್ದಿತ್ತು. ಇದರಿಂದ ತೀವ್ರ ರಕ್ತಸ್ರಾವವಾಗಿತ್ತು. ಜಮಖಂಡಿ ಸರ್ಕಾರಿ ತಾಲೂಕಾಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.

ಕರ್ತವ್ಯದ ವೇಳೆ ಮೃತಪಟ್ಟ ರಬೀದ ರಸುಲ್‌ ಅವಟಿ ಅವರ ಕುಟುಂಬಕ್ಕೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ ಸಾಂತ್ವನ ಹೇಳಿದರು. ಅಲ್ಲದೆ, ಸಂಸ್ಥೆಯ ವತಿಯಿಂದ 30 ಲಕ್ಷ ಪರಿಹಾರದ ಚೆಕ್‌ ವಿತರಿಸಿದರು.

Source: Suvarna News