ಚಿತ್ರೀಕರಣ ವೇಳೆ ನಿಯಮಗಳನ್ನು ಪಾಲಿಸುತ್ತಿಲ್ಲ, ಕಠಿಣ ನಿಯಮಗಳನ್ನು ಜಾರಿ ಮಾಡಿ ಶೀಘ್ರದಲ್ಲೇ ಆದೇಶ; ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು: ನಟ ಅಜಯ್ ರಾವ್ (Ajay Rao) ಮತ್ತ ನಟಿ ರಚಿತಾ ರಮ್ (Rachita Ram) ಅಭಿನಯಿಸುತ್ತಿದ್ದ ಲವ್ ಯೂ ರಚ್ಚು ಸಿನಿಮಾ ಚಿತ್ರೀಕರಣದ ವೇಳೆ ಫೈಟರ್ ವಿವೇಕ್ ಸಾವನ್ನಪ್ಪಿದ್ದಾರೆ. ಹೈ ವೋಲ್ಟೇಜ್ ತಂತಿ ತಗುಲಿ ನಿನ್ನೆ (ಆಗಸ್ಟ್ 9) ಫೈಟರ್ ವಿವೇಕ್ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇಂತಹ ಹಲವು ಘಟನೆಗಳು ಬೆಳಕಿಗೆ ಬರುತ್ತಿವೆ. ಚಿತ್ರೀಕರಣ ವೇಳೆ ಕೆಲವರು ನಿಯಮಗಳನ್ನು ಪಾಲಿಸುತ್ತಿಲ್ಲ. ಹೀಗಾಗಿ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿ ಮಾಡುತ್ತೇವೆ. ನಾಳೆ ಅಥವಾ ನಾಡಿದ್ದು ಆದೇಶವನ್ನು ಹೊರಡಿಸುತ್ತೇವೆ ಎಂದು ತಿಳಿಸಿದ್ದಾರೆ.
ಈ ಹಿಂದೆಯೂ ಇಂತಹ ಹಲವು ಘಟನೆಗಳು ನಡೆದಿವೆ. ಪ್ರಕರಣದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. ಇಂತಹ ಘಟನೆ ಮರುಕಳಿಸದಂತೆ ಎಚ್ಚರವಹಿಸಲು ಸೂಚಿಸುತ್ತೇನೆ ಅಂತ ಗೃಹ ಸಚಿವ ಆರಗ ಜ್ಞಾನೇಂದ್ರ ಟಿವಿ9ಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಅಮಾಯಕರು ಮೃತಪಟ್ಟಾಗ ಮನಸ್ಸಿಗೆ ಬೇಸರವಾಗುತ್ತೆ. ತೆರೆ ಹಿಂದೆ ಏನೇನು ನಡೆಯುತ್ತೆ ಎಂದು ಗೊತ್ತಾಗುವುದಿಲ್ಲ. ಎಷ್ಟು ಡೇಂಜರ್ನಲ್ಲಿ ಕೆಲಸ ಮಾಡ್ತಿದ್ದಾರೆಂದು ಗೊತ್ತಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಾರೆ. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಬೇಕು ಅಂತ ಅವರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಈ ಪ್ರಕರಣಕೆ ಸಂಬಂಧಿಸಿ ಬಿಡದಿ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದು, ಐವರ ವಿರುದ್ಧ ಎಫ್ಐಆರ್ ಹಾಕಿದ್ದಾರೆ. ನಿರ್ದೇಶಕ ಶಂಕರ್ ರಾಜ್ ಎ1, ನಿರ್ಮಾಪಕ ಗುರು ದೇಶಪಾಂಡೆ ಎ2, ಚಿತ್ರದ ಸಾಹಸ ನಿರ್ದೇಶಕ ವಿನೋದ್ ಕುಮಾರ್ ಎ3, ಸಿನಿಮಾ ಪ್ರೊಡಕ್ಷನ್ ಮ್ಯಾನೇಜರ್ ಫರ್ನಾಂಡಿಸ್ ಎ4 ಹಾಗೂ ಕ್ರೇನ್ ಆಪರೇಟರ್ ಮಹದೇವ್ ಎ5 ಎಂದು ಬಿಡದಿ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಆದರೆ ಘಟನೆ ಬಳಿಕ ಗುರು ದೇಶಪಾಂಡೆ ಮತ್ತು ಪ್ರೊಡಕ್ಷನ್ ಮ್ಯಾನೇಜರ್ ಫರ್ನಾಂಡಿಸ್ ಪರಾರಿ ಆಗಿದ್ದು, ಬಿಡದಿ ಪೊಲೀಸರು ಹುಡುಕುತ್ತಿದ್ದಾರೆ.
Source: tv9 kannada