ಗೋಲ್ಡನ್ ಸ್ಟಾರ್​ ಗಣೇಶ್​ ಜನ್ಮದಿನ; ‘ಸಖತ್​’, ‘ಗಾಳಿಪಟ 2’ ಚಿತ್ರಗಳಿಂದ ಸಿಕ್ಕ ಗಿಫ್ಟ್​ಗಳೇನು?

Jul 2, 2021

Ganesh Birthday: ಗಣೇಶ್​ ಹುಟ್ಟುಹಬ್ಬದ ಪ್ರಯುಕ್ತ ಸಿಂಪಲ್​ ಸುನಿ ನಿರ್ದೇಶನದ ‘ಸಖತ್​’ ಸಿನಿಮಾ ತಂಡ ಹೊಸ ಪೋಸ್ಟರ್​ ಬಿಡುಗಡೆ ಮಾಡಿದೆ. ಆ ಮೂಲಕ ಕುತೂಹಲ ಮೂಡಿಸಿದೆ.

ಗೋಲ್ಡನ್​ ಸ್ಟಾರ್​ ಗಣೇಶ್​ ಅವರಿಗೆ ಇಂದು (ಜು.2) ಜನ್ಮದಿನ. ಆದರೆ ಕೊವಿಡ್​ ವೈರಸ್​ ಹಾವಳಿಯಿಂದ ಪರಿಸ್ಥಿತಿ ಸರಿಯಿಲ್ಲದ ಕಾರಣ ಅವರು ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಿಲ್ಲ. ಆದ್ದರಿಂದ ಅಭಿಮಾನಿಗಳು ಸಾರ್ವಜನಿಕವಾಗಿ ಸಂಭ್ರಮಿಸುವ ಬದಲು, ಸೋಶಿಯಲ್​ ಮೀಡಿಯಾದಲ್ಲಿ ವಿಶ್​ ಮಾಡುತ್ತಿದ್ದಾರೆ. ಗಣೇಶ್​ ನಟಿಸುತ್ತಿರುವ ‘ಸಖತ್​’ ಸಿನಿಮಾ ತಂಡ ಪೋಸ್ಟರ್​ ಬಿಡುಗಡೆ ಮಾಡಿ ಗಣೇಶ್​ಗೆ ಜನ್ಮದಿನದ ಶುಭಕೋರಿದೆ. ‘ಗಾಳಿಪಟ 2’ ಚಿತ್ರದ ಮೋಷನ್​ ಪೋಸ್ಟರ್​ ಬಿಡುಗಡೆ ಆಗಲಿದೆ.

‘ಸಿಂಪಲ್​’ ಸುನಿ ನಿರ್ದೇಶನದ ‘ಸಖತ್​’ ಸಿನಿಮಾ ತಂಡ ಹೊಸ ಪೋಸ್ಟರ್​ ಬಿಡುಗಡೆ ಮಾಡುವ ಮೂಲಕ ಕುತೂಹಲ ಮೂಡಿಸಿದೆ. ಈ ಪೋಸ್ಟರ್​ನಲ್ಲಿ ಗಣೇಶ್​ ಅವರಿಗೆ ಕುರುಡನ ಗೆಟಪ್ ಹಾಕಿಸಲಾಗಿದೆ. ಅದರಲ್ಲೂ ಅವರು ಕೋರ್ಟ್​ನ ಕಟಕಟೆಯಲ್ಲಿ ನಿಂತಿರುವ ಈ ಪೋಸ್ಟರ್​ ನೋಡಿದರೆ ಕಥೆಯ ಬಗ್ಗೆ ಸಿಕ್ಕಾಪಟ್ಟೆ ನಿರೀಕ್ಷೆ ಮೂಡುವಂತಿದೆ. ಈ ಹಿಂದೆ ಗಣೇಶ್​ ಅವರು ಲುಂಗಿ ಧರಿಸಿ, ರಿಯಾಲಿಟಿ ಶೋನಲ್ಲಿ ಹಾಡು ಹೇಳುತ್ತಿರುವ ಭಂಗಿಯಲ್ಲಿನ ಪೋಸ್ಟರ್​ ಬಿಡುಗಡೆ ಮಾಡಲಾಗಿತ್ತು. ಒಟ್ಟಿನಲ್ಲಿ ಸುನಿ ನಿರ್ದೇಶನ ಮಾಡುತ್ತಿರುವ ಈ ಸಿನಿಮಾ ಹೈಪ್​ ಪಡೆದುಕೊಳ್ಳುತ್ತಿದೆ.

‘ಸಿನಿಮಾ ರೈತರು ಕಾದ ಮಳೆ, ಹೊನ್ನಿನ ನಕ್ಷತ್ರದ ಬೆಳೆ, ಚೆಲುವಿನ ಹೂ ಪಕಳೆ, ಕರ್ನಾಟಕದ ಮಾತಿನ ಕಹಳೆ.. ಗಣೇಶ್​ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಸಖತ್ತಾಗಿರಲಿ ನಿಮ್ಮ ಜೀವನ’ ಎಂದು ಸುನಿ ವಿಶ್​ ಮಾಡಿದ್ದಾರೆ. ‘ಸಖತ್’​ ಚಿತ್ರತಂಡಕ್ಕೆ ಗಣೇಶ್​ ಧನ್ಯವಾದ ಅರ್ಪಿಸಿದ್ದಾರೆ.

 

ಗಣೇಶ್​ ನಟಿಸುತ್ತಿರುವ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ‘ಗಾಳಿಪಟ 2’. ಯೋಗರಾಜ್​ ಭಟ್​ ನಿರ್ದೇಶನದ ಆ ಚಿತ್ರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ತಂಡದಿಂದಲೂ ಇಂದು ಮೋಷನ್​ ಪೋಸ್ಟರ್​ ಉಡುಗೊರೆಯಾಗಿ ಸಿಗುತ್ತಿದೆ. ಬೆಳಗ್ಗೆ 11 ಗಂಟೆಗೆ ಆನಂದ್​​ ಆಡಿಯೋ ಮೂಲಕ ಮೋಷನ್​ ಪೋಸ್ಟರ್​ ಬಿಡುಗಡೆ ಆಗಲಿದೆ. ಗಣೇಶ್​-ಯೋಗರಾಜ್​ ಭಟ್​ ಕಾಂಬಿನೇಷನ್​ ಆದ್ದರಿಂದ ಹೆಚ್ಚು ಕೌತುಕ ಮೂಡಿದೆ.

ಜನ್ಮದಿನವನ್ನು ಸಂಭ್ರಮಿಸುವುದು ಬೇಡ ಎಂದು ಗಣೇಶ್​ ಕೆಲವೇ ದಿನಗಳ ಹಿಂದೆ ಮನವಿ ಮಾಡಿಕೊಂಡಿದ್ದರು. ‘ಈ ವರ್ಷ ಕೊರೊನಾ ಮಹಾಮಾರಿಯ ಆರ್ಭಟಕ್ಕೆ ಸಿಕ್ಕು ನನ್ನ ಹಲವು ಸಿನಿಮಾ ಸಹೋದ್ಯೋಗಿಗಳು, ಆತ್ಮೀಯರು ಗೆಳೆಯರು ಬಲಿಯಾಗಿದ್ದು ನೋವು ತರಿಸಿದೆ. ಅದೆಷ್ಟೋ ಜನರ ಜೀವನ ನಲುಗಿ ಹೋಗಿದೆ. ಇಷ್ಟೆಲ್ಲ ನೋವುಗಳ ನಡುವೆ ಸಂಭ್ರಮಕ್ಕಿದು ಸರಿಹೊಂದುವ ಸಮಯವಲ್ಲ ಎಂದೆನಿಸಿ, ಈ ವರ್ಷ ಜನ್ಮದಿನವನ್ನು ಆಚರಿಸಿಕೊಳ್ಳದಿರಲು ಇಚ್ಛಿಸಿರುತ್ತೇನೆ. ಅಲ್ಲದೇ ನಾನು ಜನ್ಮದಿನದಂದು ಹೊರಾಂಗಣ ಚಿತ್ರೀಕರಣದಲ್ಲಿ ತೊಡಗಿರುತ್ತೇನೆ. ಪ್ರತಿ ವರ್ಷವೂ ಹುಟ್ಟುಹಬ್ಬ ಆಚರಣೆಗೆ ಪ್ರೀತಿಯಿಂದ ನೀವು ತರುವ ಕೇಕ್​, ಹಾರ, ಉಡುಗೊರೆ ಮುಂತಾದವುಗಳಿಗಾಗಿ ಈ ವರ್ಷ ಹಣ ವ್ಯಯಿಸದೇ ಅದೇ ಖರ್ಚಿನ ಮೊತ್ತವನ್ನು ಕೊರೊನಾ ಸಂಕಷ್ಟದಲ್ಲಿ ಇರುವ ಮತ್ತಷ್ಟು ಜೀವಗಳಿಗೆ ಸಹಾಯ ಮಾಡಿ ಎಂದು ಕೇಳಿಕೊಳ್ಳುತ್ತೇನೆ. ಅದೇ ನನಗೆ ಶ್ರೀರಕ್ಷೆ’ ಎಂದು ಗಣೇಶ್​ ಹೇಳಿದ್ದರು.

Source: TV9 Kannada