ಗಮನಿಸಿ: ಹಬ್ಬ, ಭಾನುವಾರ, ಮುಷ್ಕರ ಸೇರಿ ಬ್ಯಾಂಕ್​ಗೆ ಸಾಲು ಸಾಲು ರಜೆ, ಅತಿ ಮುಖ್ಯ ಕೆಲಸವಿದ್ದರೆ ಈಗಲೇ ಮುಗಿಸಿಕೊಳ್ಳಿ

Mar 10, 2021

ಕೆಲ ಅನಿರೀಕ್ಷಿತ ಬೆಳವಣಿಗೆಗಳಿಂದಾಗಿ ಮಾರ್ಚ್ 15, ಸೋಮವಾರ ಮತ್ತು ಮಾರ್ಚ್ 16ರ ಮಂಗಳವಾರದಂದು ಹಲವು ಬ್ಯಾಂಕ್‌ ಯೂನಿಯನ್‌ಗಳು ಮುಷ್ಕರಕ್ಕೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ಹಲವು ಬ್ಯಾಂಕ್‌ಗಳು ಬಂದ್‌ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅಲ್ಲದೇ, ದೀರ್ಘ ರಜಾದಿನಗಳಿಂದಾಗಿ ಅನೇಕ ಬ್ಯಾಂಕ್ ಉದ್ಯೋಗಿಗಳು ಸಹ ರಜೆಯಲ್ಲಿರಬಹುದು.

ಜನಸಾಮಾನ್ಯರಿಗೆ ಹಬ್ಬ ಹರಿದಿನಗಳನ್ನು ತಿಳಿಸುವ ಕ್ಯಾಲೆಂಡರ್​ ಎಷ್ಟು ಮುಖ್ಯವೋ, ಬ್ಯಾಂಕ್​ ರಜೆಗಳ ಪಟ್ಟಿಯೂ ಅಷ್ಟೇ ಮುಖ್ಯ. ವ್ಯವಹಾರ ಕಾರಣಗಳಿಗಾಗಿ ತುರ್ತು ಸಂದರ್ಭದಲ್ಲಿ ಬ್ಯಾಂಕ್​ಗೆ ತೆರಳಿದಾಗ ಅಪ್ಪಿತಪ್ಪಿ ಅಂದು ಬ್ಯಾಂಕ್​ಗೆ ರಜೆಯಿದ್ದರೆ ಭಾರೀ ಕಷ್ಟವಾಗಿಬಿಡುತ್ತದೆ. ಹಾಗಾಗಿ, ಹೆಚ್ಚಿನವರು ಹೊಸ ತಿಂಗಳು ಹತ್ತಿರವಾಗುತ್ತಿದ್ದಂತೆಯೇ ಯಾವ್ಯಾವ ದಿನ ಬ್ಯಾಂಕ್​ಗಳಿಗೆ ರಜೆ ಎಂದು ತಿಳಿದುಕೊಳ್ಳಲು ಇಷ್ಟಪಡುತ್ತಾರೆ. ಈ ಬಾರಿ ಮಾರ್ಚ್​ನಲ್ಲಿ ಒಟ್ಟು 7 ರಜೆಗಳಿದ್ದವು. ಜನರು ಸಹ ಯಾವ ಯಾವ ದಿನ ರಜೆ ಎಂಬುದನ್ನು ಗೊತ್ತು ಮಾಡಿಟ್ಟುಕೊಂಡಿದ್ದರು. ಆದರೀಗ ಬ್ಯಾಂಕ್​ ರಜೆಯಲ್ಲಿ ಒಮ್ಮೆಲೆ ಏರುಪೇರುಗಳಾಗಿವೆ. ಹೀಗಾಗಿ ಈಗಾಗಲೇ ಮಾಡಿಕೊಂಡಿರುವ ಯೋಜನೆಗಳ ಲೆಕ್ಕಾಚಾರವೂ ತಲೆಕೆಳಗಾಗುವ ಸಾಧ್ಯತೆ ಇದೆ.

ಮಾರ್ಚ್​ನಲ್ಲಿ ಶಿವರಾತ್ರಿ ಹೊರತುಪಡಿಸಿದರೆ ಬೇರೆ ಯಾವುದೇ ದೊಡ್ಡ ಹಬ್ಬ ಅಥವಾ ಸರ್ಕಾರಿ ದಿನಾಚರಣೆಗಳಿಲ್ಲ. ಸಾಧಾರಣವಾಗಿ ಮಾರ್ಚ್​ ತಿಂಗಳಲ್ಲಿ ಎಲ್ಲಾ ವಹಿವಾಟುದಾರರಿಗೂ ತುಸು ಹೆಚ್ಚೇ ಒತ್ತಡವಿದ್ದು, ಬ್ಯಾಂಕ್​ಗೆ ಯಾವ ಸಂದರ್ಭದಲ್ಲಿ ಹೋಗಬೇಕಾಗಿ ಬರಬಹುದು ಎಂದು ಹೇಳಲಾಗುವುದಿಲ್ಲ. ಕಳೆದ ಭಾನುವಾರದ ರಜೆ ಸೇರಿ ಈ ತಿಂಗಳಲ್ಲಿ ಮಾರ್ಚ್​ 11 (ಶಿವರಾತ್ರಿ), ಮಾರ್ಚ್​ 13(ಎರಡನೇ ಶನಿವಾರ), ಮಾರ್ಚ್​ 14 (ಭಾನುವಾರ), ಮಾರ್ಚ್​ 21 (ಭಾನುವಾರ), ಮಾರ್ಚ್​ 27 (ನಾಲ್ಕನೇ ಶನಿವಾರ), ಮಾರ್ಚ್​ 28 (ಭಾನುವಾರ) ಹೀಗೆ ಒಟ್ಟು 7 ದಿನಗಳು ರಜೆ ನಿಗದಿಯಾಗಿತ್ತು. ಮಾರ್ಚ್​ 12ರ ಶುಕ್ರವಾರ ಒಂದು ರಜೆ ಹಾಕಿದರೆ ಬ್ಯಾಂಕ್​ ಉದ್ಯೋಗಿಗಳಿಗೆ ಸತತ ನಾಲ್ಕು ದಿನಗಳ ರಜೆ ಸಿಗಲಿದೆ ಎಂಬ ಕಾರಣಕ್ಕೆ ಜನರು ಸಹ 15ನೇ ತಾರೀಖಿಗೆ ಬ್ಯಾಂಕ್​ಗೆ ಹೋಗುವುದು ಉತ್ತಮ ಎಂದು ಯೋಚಿಸಿದ್ದರು.

ಆದರೆ, ಈಗ ಕೆಲ ಅನಿರೀಕ್ಷಿತ ಬೆಳವಣಿಗೆಗಳಿಂದಾಗಿ ಮಾರ್ಚ್ 15, ಸೋಮವಾರ ಮತ್ತು ಮಾರ್ಚ್ 16ರ ಮಂಗಳವಾರದಂದು ಹಲವು ಬ್ಯಾಂಕ್‌ ಯೂನಿಯನ್‌ಗಳು ಮುಷ್ಕರಕ್ಕೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ಹಲವು ಬ್ಯಾಂಕ್‌ಗಳು ಬಂದ್‌ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅಲ್ಲದೇ, ದೀರ್ಘ ರಜಾದಿನಗಳಿಂದಾಗಿ ಅನೇಕ ಬ್ಯಾಂಕ್ ಉದ್ಯೋಗಿಗಳು ಸಹ ರಜೆಯಲ್ಲಿರಬಹುದು. ಹೀಗಾಗಿ ನಿಮಗೆ ಬ್ಯಾಂಕ್​ನಲ್ಲಿ ಮುಖ್ಯ ಕೆಲಸವೇನಾದರೂ ಇದ್ದರೆ ಇಂದು ಮುಗಿಸಿಕೊಳ್ಳುವುದೇ ಒಳಿತು.

ಬ್ಯಾಂಕ್ ರಜೆ ಮತ್ತು ಮುಷ್ಕರದ ನಡುವೆ ಶುಕ್ರವಾರವೇನೋ ಬ್ಯಾಂಕ್​ ತೆರೆದಿರುತ್ತದೆ. ಹಾಗಂತ ಅಂದಿಗೆ ಕೆಲಸ ಬಾಕಿ ಉಳಿಸಿಕೊಳ್ಳುವುದು ಅಷ್ಟು ಸೂಕ್ತವಲ್ಲ. ಕೇವಲ ಒಂದು ದಿನ ಮಾತ್ರ ಬ್ಯಾಂಕ್ ತೆರೆಯುವುದರಿಂದ ಶಾಖೆಯಲ್ಲಿ ಶುಕ್ರವಾರ ಹೆಚ್ಚು ಜನ ಬರುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆ ನಿಮ್ಮ ಬ್ಯಾಂಕ್‌ ಕೆಲಸ ಇದ್ದರೆ, ಇಂದೇ ಹೋಗುವುದು ಒಳಿತು.

Source: TV9Kannada