ಕ್ರಿಕೆಟಿಗ ಅಕ್ಷರ್ ಪಟೇಲ್ ಹೆಸರು ಎಲ್ಲಾ ದಾಖಲೆಗಳಲ್ಲಿ ಅಕ್ಸಾರ್ ಪಟೇಲ್ ಎಂದಿರುವುದ್ಯಾಕೆ? ಇಲ್ಲಿದೆ ಎರಡೆರಡು ಕಾರಣಗಳು..!
ಅಕ್ಷರ್ ಆಸ್ಪತ್ರೆಯಲ್ಲಿ ಜನಿಸಿದಾಗ, ಅಕ್ಷರ್ ಅವರ ಜನನ ಪ್ರಮಾಣಪತ್ರವನ್ನು ನೀಡುವ ಆಸ್ಪತ್ರೆಯ ನರ್ಸ್, ಅಕ್ಷರ್ ಅವರ ಹೆಸರನ್ನು ಅಕ್ಸಾರ್ ಪಟೇಲ್ (AXAR PATEL) ಎಂದು ಜನನ ಪ್ರಮಾಣಪತ್ರದಲ್ಲಿ ನಮೂದಿಸಿದರಂತೆ.
ಅಕ್ಷರ್ ಪಟೇಲ್.. ಟೀಂ ಇಂಡಿಯಾದ ಪಾಲಿಗೆ ಈಗ ಆಪದ್ಭಾಂದವನಾಗಿರುವ ಈ ಎಡಗೈ ಆಲ್ರೌಂಡರ್ ತಾನು ಆಡಿದ ಕೇವಲ 3 ಟೆಸ್ಟ್ ಪಂದ್ಯಗಳಲ್ಲೇ ತನ್ನ ಸಾಮರ್ಥ್ಯವನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟಿದ್ದಾನೆ. ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯವಾಗಿ ಸೋಲೊಪ್ಪಿಕೊಂಡಿತ್ತು. ಮೊದಲ ಟೆಸ್ಟ್‌ನಲ್ಲಿ ಆಂಗ್ಲರ ಆಟವನ್ನು ಕಂಡ ಕ್ರಿಕೆಟ್ ಪಂಡಿತರು, ಟೀಂ ಇಂಡಿಯಾ ಈ ಸರಣಿಯಲ್ಲಿ ವೈಟ್ವಾಶ್ ಆಗುವುದು ಖಚಿತ ಎಂದು ಭವಿಷ್ಯ ನುಡಿದಿದ್ದರು. ಆದರೆ ಎರಡನೇ ಪಂದ್ಯಕ್ಕೆ ಟೀಂ ಇಂಡಿಯಾದ ಪಾಳಾಯಕ್ಕೆ ಬಿರುಗಾಳಿಯಂತೆ ಎಂಟ್ರಿಕೊಟ್ಟ ಅಕ್ಷರ್ ಪಟೇಲ್, ಕ್ರಿಕೆಟ್ ಪಂಡಿತರ ಲೆಕ್ಕಾಚಾರವನ್ನು ಬುಡಮೇಲು ಮಾಡಿದ್ದ.
ಅಕ್ಷರ್ ಟೆಸ್ಟ್ ಕ್ರಿಕೆಟ್ ಸಾಧನೆ..
ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಾಗಿನಿಂದಲೂ ಅದ್ಭುತ ಪ್ರದರ್ಶನ ನೀಡುತ್ತಿರುವ ಅಕ್ಷರ್ ಪಟೇಲ್, ಚೆನ್ನೈಯ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ್ದ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್‌ನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಎರಡನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ 40ರನ್ನಿಗೆ 2 ವಿಕೆಟ್ ಹಾಗೂ ದ್ವಿತೀಯ ಇನಿಂಗ್ಸ್‌ನಲ್ಲಿ 60ರನ್ನಿಗೆ 5ವಿಕೆಟ್ ಕಿತ್ತು ಟೀಂ ಇಂಡಿಯಾದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಹಾಗೆಯೇ ತೃತೀಯ ಟೆಸ್ಟ್‌ನಲ್ಲೂ ಅಕ್ಷರ್ ಪಟೇಲ್ ಮಾರಕ ಬೌಲಿಂಗ್ ಮುಂದುವರೆದಿತ್ತು. ಅಹ್ಮದಾಬಾದ್‌ನಲ್ಲಿ ನಡೆದಿದ್ದ ಪಿಂಕ್‌ಬಾಲ್ ಟೆಸ್ಟ್‌ನ ಪ್ರಥಮ ಇನಿಂಗ್ಸ್‌ನಲ್ಲಿ 38ರನ್ ನೀಡಿ 6 ವಿಕೆಟ್ ಪಡೆದಿದ್ದ ಅಕ್ಷರ್, ದ್ವಿತೀಯ ಇನಿಂಗ್ಸ್‌ನಲ್ಲಿ 32ರನ್ನಿಗೆ 5 ವಿಕೆಟ್ ಕಿತ್ತು ಮಿಂಚಿದರು. ಅದೇ ಮೈದಾನದಲ್ಲಿ ಶನಿವಾರ ಮುಕ್ತಾಯವಾದ ನಾಲ್ಕನೇ ಪಂದ್ಯದಲ್ಲಿ 68ರನ್ಗೆ 4 ವಿಕೆಟ್ ಹಾಗೂ 48ರನ್ಗೆ 5 ವಿಕೆಟ್ ಪಡೆದು ಸಾಧನೆ ಮಾಡಿದ್ದಾರೆ.
ಏಕದಿನ, ಟಿ20 ಪಂದ್ಯದಲ್ಲೂ ಮಿಂಚಿದ್ದಾರೆ
ಒಟ್ಟಾರೆಯಾಗಿ ತಾನು ಪದಾರ್ಪಣೆ ಮಾಡಿದ ಮೊದಲ ಟೆಸ್ಟ್ನಿಂದಲೂ ಇಂಗ್ಲೆಂಡ್ ವಿರುದ್ಧ ಈವರೆಗೆ ಅಕ್ಷರ್ ಒಟ್ಟು 22 ವಿಕೆಟ್ ಪಡೆದಿದ್ದಾರೆ. ಅಂದರೆ ಕೇವಲ 5 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 22 ವಿಕೆಟ್ ಪಡೆದಿದ್ದಾರೆ. 5 ಇನ್ನಿಂಗ್ಸ್‌ಗಳಲ್ಲಿ 22 ವಿಕೆಟ್ ಅಷ್ಟೇ ಅಲ್ಲ, ಇದರಲ್ಲಿ 3 ಇನ್ನಿಂಗ್ಸ್‌ಗಳಲ್ಲಿ 5 ವಿಕೆಟ್‌ಗಳನ್ನ ಪಡೆದ ದಾಖಲೆಯನ್ನು ಸಹ ನಿರ್ಮಿಸಿದ್ದಾರೆ. ಏಕದಿನದಲ್ಲಿ ಒಟ್ಟು 38 ಪಂದ್ಯಗಳನ್ನಾಡಿರುವ ಅಕ್ಷರ್ ಒಟ್ಟು 45 ವಿಕೆಟ್ ದಾಖಲೆ ಹೊಂದಿದ್ದಾರೆ. ಐಪಿಎಲ್‌ನಲ್ಲಿ ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿರುವ ಪಟೇಲ್ ಒಟ್ಟು 97 ಪಂದ್ಯಗಳಲ್ಲಿ 80 ವಿಕೆಟ್ ಪಡೆದಿದ್ದಾರೆ.
ಅಕ್ಷರ್ ಹೆಸರು ಬದಲಾಗಲು ಕಾರಣ?
ಆದರೆ ಈಗ ಸುದ್ದಿಯಲ್ಲಿರುವುದು ಅಕ್ಷರ್ ಪಟೇಲ್ ಅವರ ಈ ಸಾಧನೆಯ ಬಗ್ಗೆ ಅಲ್ಲ. ಬದಲಿಗೆ ಕ್ರಿಕೆಟ್ ಪ್ರೇಮಿಗಳಿಂದ, ತನ್ನ ಗೆಳೆಯರಿಂದ ಹಾಗೂ ಕುಟುಂಬಸ್ಥರಿಂದ ಅಕ್ಷರ್ ಪಟೇಲ್ ಎಂದು ಕರೆಸಿಕೊಳ್ಳುವ ಅಕ್ಷರ್, ಟೀಂ ಇಂಡಿಯಾ ಜರ್ಸಿಯಲ್ಲಿ ಮಾತ್ರ ಅಕ್ಸಾರ್ ಪಟೇಲ್ ಎಂದು ಬರೆಸಿಕೊಳ್ಳುವುದಕ್ಕೆ ಕಾರಣ ಏನೆಂಬುದು.
ಅಕ್ಷರ್ ಪಟೇಲ್ ಅವರ ಈ ಎರೆಡೆರಡು ಹೆಸರುಗಳ ಹಿಂದೆ ಎರೆಡೆರಡು ಕುತೂಹಲಕಾರಿ ಕತೆಗಳು ಅಡಗಿವೆ. ಅಕ್ಷರ್ ಅವರ ಹೆಸರಿನ ಬದಲಾವಣೆಯಲ್ಲಿ ನೀವೆಲ್ಲಾ ಊಹಿಸಿರುವಂತೆ ಯಾವೂದೋ ಜ್ಯೋತಿಷಿಗಳ ಕೈವಾಡವಾಗಲಿ, ಸಂಖ್ಯಾ ಶಾಸ್ತ್ರಜ್ಞರ ಕೈವಾಡವಾಗಲಿ ಇಲ್ಲ. ಬದಲಿಗೆ, ಅವರ ಹೆಸರಿನ ಹಿಂದೆ ಇರುವ ಎರೆಡೆರಡು ಕತೆಗಳಲ್ಲಿ ಒಂದರಲ್ಲಿ ಆಸ್ಪತ್ರೆಯ ನರ್ಸ್ ಕೈವಾಡವಿದ್ದರೆ, ಇನ್ನೊಂದರಲ್ಲಿ ಕಾಲೇಜಿನ ಪ್ರಾಂಶುಪಾಲರ ಕೈವಾಡವಿದೆ.
ಮೊದಲನೇಯದರಲ್ಲಿ ನರ್ಸ್ ಕೈವಾಡ
ಮೊದಲನೇ ಕತೆಯಲ್ಲಿ ಅಕ್ಷರ್ ಅವರೇ ತಮ್ಮ ಗೆಳೆಯರಾದ ಕೆ ಎಲ್ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ಅವರ ಬಳಿ ಹೇಳಿಕೊಂಡಿರುವಂತೆ, ಅಕ್ಷರ್ ಅವರು 19 ವರ್ಷದೊಳಗಿನವರ ವಿಶ್ವಕಪ್ ಸರಣಿ ಆಡಲು ವಿದೇಶಕ್ಕೆ ತೆರಳಬೇಕಾಗಿತಂತೆ. ಆ ಸಮಯದಲ್ಲಿ ಅಕ್ಷರ್ ವಿದೇಶಕ್ಕೆ ತೆರಳಲು ಪಾಸ್ಪೋರ್ಟ್ ಅವಶ್ಯಕತೆ ಇತ್ತು. ಹೀಗಾಗಿ ಅಕ್ಷರ್ ಅವರ ತಂದೆ ಪಾಸ್ಪೋರ್ಟ್ ಮಾಡಿಸಲು ದಾಖಲೆಗಳನ್ನು ನೀಡುವ ಸಲುವಾಗಿ, ಅಕ್ಷರ್ ಓದಿದ ಕಾಲೇಜಿಗೆ ತೆರಳಿ ಅವರ ಬಗೆಗಿನ ದಾಖಲೆಗಳನ್ನು ಪಡೆದುಕೊಂಡಿದ್ದರಂತೆ. ಆ ಸಮಯದಲ್ಲಿ ಕಾಲೇಜಿನ ಪ್ರಿನ್ಸಿಪಾಲ್ ತಾವು ಬರೆದುಕೊಟ್ಟ ದಾಖಲು ಪತ್ರದಲ್ಲಿ ಅಕ್ಷರ್ ಪಟೇಲ್ ಹೆಸರನ್ನು ಇಂಗ್ಲೀಷ್ನಲ್ಲಿ AXAR PATEL ಎಂದು ಬರೆದಿದರಂತೆ. ಹೀಗಾಗಿ ಅಕ್ಷರ್ ಅವರ ಹೆಸರು ಅಕ್ಸಾರ್ ಎಂದಾಯಿತಂತೆ.
ಎರಡನೇಯದರಲ್ಲಿ ಪ್ರಿನ್ಸಿಪಾಲ್ ಎಡವಟ್ಟು
ಇನ್ನೊಂದು ಕತೆಯಲ್ಲಿ ಅಕ್ಷರ್ ಪಟೇಲ್ ಅವರ ತಾಯಿ ಪ್ರೀತಿ ಅವರು ಹೇಳಿರುವಂತೆ, ಅಕ್ಷರ್ ಆಸ್ಪತ್ರೆಯಲ್ಲಿ ಜನಿಸಿದಾಗ, ಅಕ್ಷರ್ ಅವರ ಜನನ ಪ್ರಮಾಣಪತ್ರವನ್ನು ನೀಡುವ ಆಸ್ಪತ್ರೆಯ ನರ್ಸ್, ಅಕ್ಷರ್ ಅವರ ಹೆಸರನ್ನು ಅಕ್ಸಾರ್ ಪಟೇಲ್ (AXAR PATEL) ಎಂದು ಜನನ ಪ್ರಮಾಣಪತ್ರದಲ್ಲಿ ನಮೂದಿಸಿದರಂತೆ. ಹೀಗಾಗಿ ಅಕ್ಷರ್ ಪಟೇಲ್ ಅವರ ಹೆಸರು ಅಕ್ಸಾರ್ ಎಂದು ಬದಲಾಯಿತು.
ತಪ್ಪಾಗಿ ನಮೋದಿಸಲಾಗಿದ್ದ ಅಕ್ಷರ್ ಪಟೇಲ್ ಅವರ ಹೆಸರನ್ನು ಅಂದೇ ಏಕೆ ಬದಲಿಸಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿರುವ ಅಕ್ಷರ್ ಪಟೇಲ್ ಅವರ ಸಂಬಂಧಿಕರು, ಆತ ಇಷ್ಟು ದೊಡ್ಡ ಮಟ್ಟದ ಕ್ರಿಕೆಟರ್ ಆಗುತ್ತಾನೆ ಎಂದು ನಮಗೆ ಗೊತ್ತಿರಲಿಲ್ಲ. ಹಾಗಾಗಿ ನಾವು ಆತನ ಹೆಸರನ್ನು ಬದಲಾಯಿಸದೆ ಹಾಗೇ ಉಳಿಸಿಕೊಂಡವು ಎಂದಿದ್ದಾರೆ.
ಒಟ್ಟಾರೆಯಾಗಿ ಅಕ್ಷರ್ ಅವರ ಹೆಸರಿನ ಹಿಂದಿರುವ ಈ ಎರಡೆರಡು ಕತೆಗಳು ಕೇಳಲು ತುಂಬಾ ಕುತೂಹಲಕಾರಿಯಾಗಿದ್ದರೂ, ಕ್ರಿಕೆಟ್ ಪ್ರೇಮಿಗಳಿಗೆ ಬೇಕಾಗಿರುವುದು ಅಕ್ಷರ್ ಅವರ ಅದ್ಭುತ ಆಟವೇ ಹೊರತು ಅವರ ಹೆಸರಲ್ಲ. ಕ್ರಿಕೆಟ್ನಲ್ಲಿ ಮಿಂಚುತ್ತಿರುವ ಅಕ್ಷರ್ ಪಟೇಲ್ ಇನ್ನೂ ಮುಂದೆಯೂ ಅಭಿಮಾನಿಗಳಿಗೆ ತಮ್ಮ ಅದ್ಭುತ ಆಟದಿಂದ ರಸದೌತಣ ನೀಡಲಿ ಎಂಬುದೆ ಎಲ್ಲರ ಆಶಯವಾಗಿದೆ.
Source:TV9Kannada