‘ಕೊವಿಡ್ 19 ಹೊಸ ರೂಪಾಂತರಿ ವೈರಾಣುಗಳು ಯಾವಾಗ ಬೇಕಾದರೂ ಉದ್ಭವಿಸಬಹುದು‘
ದೆಹಲಿ: ಕೊವಿಡ್ 19 ಸೋಂಕಿ (Covid 19)ನ ಹೊಸ ರೂಪಾಂತರ ವೈರಸ್ಗಳು (Covid Mutants) ಯಾವುದೇ ಸಮಯದಲ್ಲೂ ಉದ್ಭವ ಆಗಬಹುದು..ಎಚ್ಚರಿಕೆಯಿಂದ ಇರಬೇಕು ಎಂದು ಕೇಂದ್ರ ಸರ್ಕಾರ ಮಂಗಳವಾರ ಹೇಳಿದೆ. ಅದಾಗಲೇ ಎದ್ದಿರುವ ಆಲ್ಫಾ, ಬೇಟಾ, ಗಮ್ಮಾ, ಡೆಲ್ಟಾ, ಡೆಲ್ಟಾ ಪ್ಲಸ್ ರೂಪಾಂತರಿ ವೈರಾಣುಗಳ ಬಗ್ಗೆ ತೀವ್ರ ನಿಗಾ ವಹಿಸಲಾಗಿದೆ. ಆದರೆ ಕೊವಿಡ್ 19 ವೈರಸ್ನ ಇನ್ನಷ್ಟು ರೂಪಾಂತರಿ ವೈರಾಣುಗಳು ಹುಟ್ಟುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ರೋಗ ನಿಯಂತ್ರಣ ರಾಷ್ಟ್ರೀಯ ಕೇಂದ್ರದ ನಿರ್ದೇಶಕ ಡಾ. ಎಸ್.ಕೆ.ಸಿಂಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸದ್ಯ ಕಪ್ಪಾ ಮತ್ತು B1617.3 ರೂಪಾಂತರಿ ವೈರಾಣುಗಳ ಬಗ್ಗೆ ಹೆಚ್ಚಿನ ಪರಿಶೀಲನೆ ನಡೆಸಲಾಗುತ್ತಿದೆ. ನಾವು ಎರಡು ವಿಧದಲ್ಲಿ ಕಣ್ಗಾವಲು ವ್ಯವಸ್ಥೆ ಮಾಡಿದ್ದೇವೆ. ದೇಶದಲ್ಲೇ ಹುಟ್ಟಿದ ಕೊವಿಡ್ 19 ರೂಪಾಂತರವಾದ ಡೆಲ್ಟಾ ವೈರಾಣು ಮತ್ತು ಹೊರದೇಶಗಳಲ್ಲಿ ಹುಟ್ಟಿ, ನಮ್ಮ ದೇಶಕ್ಕೆ ಕಾಲಿಟ್ಟ ರೂಪಾಂತರಿ ವೈರಸ್ಗಳೆರಡರ ಬಗ್ಗೆಯೂ ಪ್ರತ್ಯೇಕವಾಗಿ ಕಣ್ಗಾವಲು ಇಟ್ಟು, ನಿರ್ವಹಣೆ ಮಾಡಲಾಗುತ್ತಿದೆ ಎಂದು ಎಸ್.ಕೆ.ಸಿಂಗ್ ಹೇಳಿದ್ದಾರೆ.
ಇನ್ನು ಕೊವಿಡ್ 19 ಸೋಂಕಿನ ಹೊಸ ರೂಪಾಂತರಿ ವೈರಾಣುಗಳು ಯಾವಾಗ ಬೇಕಾದರೂ ಹುಟ್ಟಬಹುದು..ನಮ್ಮ ದೇಶಕ್ಕೂ ಕಾಲಿಡಬಹುದು. ಕೊವಿಡ್ 19 ಮತ್ತು ಅದರ ರೂಪಾಂತರಿಗಳ ವಿರುದ್ಧ ಹೋರಾಡಲು ಡಬ್ಲ್ಯೂಎಚ್ಒ ಕೂಡ ಕೆಲವು ಕಾರ್ಯತಂತ್ರಗಳನ್ನು ರೂಪಿಸಿದೆ ಎಂದು ಮಾಹಿತಿ ನೀಡಿದ್ದಾರೆ. ಇನ್ನು ಕೇರಳದಲ್ಲಿ ಕೊರೊನಾ ಹೆಚ್ಚುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕೇರಳಕ್ಕೆ ಕೇಂದ್ರದಿಂದ ಆರೋಗ್ಯ ತಜ್ಞರ ತಂಡವನ್ನು ಕಳಿಸಲಾಗಿದೆ. ಅಲ್ಲಿ, ಟೆಸ್ಟ್-ಟ್ರ್ಯಾಕ್-ಟ್ರೀಟ್ ಎಂಬ ನಿಯಮಗಳನ್ನು ಅಳವಡಿಸಿಕೊಂಡು ಕೊವಿಡ್ 19 ವಿರುದ್ಧ ಹೋರಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
Source: tv9 kannada