ಕೊರೊನಾ 3ನೇ ಅಲೆ; ಸ್ಥೂಲಕಾಯ, ಟೈಪ್ 1 ಡಯಾಬಿಟಿಸ್ ಇರುವ ಮಕ್ಕಳ ಬಗ್ಗೆ ಇರಲಿ ಹೆಚ್ಚಿನ ಎಚ್ಚರ

Jun 28, 2021

ಸ್ಥೂಲಕಾಯ ಇರುವ ಮಕ್ಕಳಲ್ಲಿ ACE 2 ರಿಸೆಪ್ಟರ್ ಹೆಚ್ಚಿರುತ್ತೆ. ACE 2 ರಿಸೆಪ್ಟರ್, ವೈರಸ್‌ನ್ನು ಜೀವಕೋಶದೊಳಕ್ಕೆ ಎಳೆದುಕೊಳ್ಳುವ ಕೆಲಸ ಮಾಡುತ್ತದೆ. ಟೈಪ್ 1 ಡಯಾಬಿಟಿಸ್ ಇರುವ ಮಕ್ಕಳಲ್ಲೂ ಸೋಂಕು ಹರಡುವ ತೀವ್ರತೆ ಹೆಚ್ಚಿದೆ. ಮೊದಲ ಅಲೆ, 2ನೇ ಅಲೆಯಲ್ಲಿ ಈ ಮಕ್ಕಳಿಗೇ ಸೋಂಕು ಹೆಚ್ಚು ಕಾಡಿತ್ತು.

ಬೆಂಗಳೂರು: ಮಹಾಮಾರಿ ಕೊರೊನಾ ಎರಡನೇ ಅಲೆ ನಿಧಾನವಾಗಿ ಕಡಿಮೆಯಾಗುತ್ತಿದ್ದು ಇನ್ನೆರೆಡು ತಿಂಗಳಲ್ಲಿ ಕೊರೊನಾ 3ನೇ ಅಲೆ ಶುರುವಾಗಬಹುದು ಎಂದು ಅಂದಾಜಿಸಲಾಗಿದೆ. ಇನ್ನು ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರುವ ವಿಚಾರಕ್ಕೆ ಸಂಬಂಧಿಸಿ ಸ್ಥೂಲಕಾಯ ಇರುವ ಮಕ್ಕಳು ಹಾಗೂ ಟೈಪ್ 1 ಡಯಾಬಿಟಿಸ್ ಇರುವ ಮಕ್ಕಳ ಬಗ್ಗೆ ಹೆಚ್ಚಿನ ಎಚ್ಚರವಿರಲಿ ಎಂದು ಮಕ್ಕಳ ಶ್ವಾಸಕೋಶ ತಜ್ಞ ಹಾಗೂ ಮಕ್ಕಳ ತಜ್ಞರ ಸಮಿತಿ ಸದಸ್ಯ ಡಾ. ಶ್ರೀಕಂಠ ಜೆ.ಟಿ ಎಚ್ಚರಿಕೆ ನೀಡಿದ್ದಾರೆ.

ಸ್ಥೂಲಕಾಯ ಇರುವ ಮಕ್ಕಳಲ್ಲಿ ACE 2 ರಿಸೆಪ್ಟರ್ ಹೆಚ್ಚಿರುತ್ತೆ. ACE 2 ರಿಸೆಪ್ಟರ್, ವೈರಸ್‌ನ್ನು ಜೀವಕೋಶದೊಳಕ್ಕೆ ಎಳೆದುಕೊಳ್ಳುವ ಕೆಲಸ ಮಾಡುತ್ತದೆ. ಟೈಪ್ 1 ಡಯಾಬಿಟಿಸ್ ಇರುವ ಮಕ್ಕಳಲ್ಲೂ ಸೋಂಕು ಹರಡುವ ತೀವ್ರತೆ ಹೆಚ್ಚಿದೆ. ಮೊದಲ ಅಲೆ, 2ನೇ ಅಲೆಯಲ್ಲಿ ಈ ಮಕ್ಕಳಿಗೇ ಸೋಂಕು ಹೆಚ್ಚು ಕಾಡಿತ್ತು. ಹೀಗಾಗಿ ಸ್ಥೂಲಕಾಯ, ಟೈಪ್ 1 ಡಯಾಬಿಟಿಸ್ ಇದ್ರೆ ಅಂತಹ ಮಕ್ಕಳ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಡಾ.ಜೆ.ಟಿ.ಶ್ರೀಕಂಠ ತಿಳಿಸಿದ್ದಾರೆ.

ಜುಲೈ ಅಂತ್ಯ ಅಥವಾ ಆಗಸ್ಟ್ನಿಂದ ಮಕ್ಕಳಿಗೆ ಲಸಿಕೆ ನೀಡಿಕೆ?
ಇನ್ನು ಕೊರೊನಾ ವಿರುದ್ಧ ರಕ್ಷಣೆಗೆ ಝೈಡಸ್ ಕ್ಯಾಡಿಲಾ ಮಕ್ಕಳಿಗಾಗಿ ಲಸಿಕೆ ಕಂಡು ಹಿಡಿದಿದೆ. ಇದರ ತುರ್ತು ಬಳಕೆಗೆ ಅನುಮತಿ ಕೋರಿ ಡಿಸಿಜಿಐಗೆ ಅರ್ಜಿ ಸಲ್ಲಿಸಿದೆ. ಡಿಸಿಜಿಐ ಅನುಮತಿ ನೀಡಿದ್ರೆ. ಜುಲೈ ಅಂತ್ಯದ ವೇಳೆಗೆ ಝೈಡಸ್ ಕ್ಯಾಡಿಲಾ ಲಸಿಕೆ ಮಕ್ಕಳಿಗೆ ನೀಡಲು ಆರಂಭಿಸಲಾಗುತ್ತೆ ಅಂತಾ ಕೊವಿಡ್ ತಜ್ಞರ ಸಮಿತಿಯ ಅಧ್ಯಕ್ಷ ಡಾ.ಎನ್.ಕೆ.ಅರೋರ ಹೇಳಿದ್ದಾರೆ. ಮಕ್ಕಳಿಗೆ ಲಸಿಕೆ ನೀಡಲು ಆರಂಭಿಸಿದ ಬಳಿಕ ಶಾಲೆಗಳನ್ನ ತೆರೆಯಲು ಯಾವುದೇ ಅಡ್ಡಿ ಆತಂಕ ಇಲ್ಲ ಅಂತಾ ಏಮ್ಸ್ ಮುಖ್ಯಸ್ಥ ಡಾ.ರಣದೀಪ್ ಗುಲೇರಿಯಾ ಹೇಳಿದ್ದಾರೆ.

ಭಾರತ್ ಬಯೋಟೆಕ್ ಕಂಪನಿ 2 ರಿಂದ 18 ವರ್ಷದೊಳಗಿನ ಮಕ್ಕಳ ಮೇಲೆ ಒಂದು ಲಸಿಕೆಯನ್ನ ಪ್ರಯೋಗ ಮಾಡ್ತಿದೆ. ಇದರ ಎರಡನೇ ಹಂತ ಮತ್ತು ಮೂರನೇ ಹಂತದ ಪ್ರಯೋಗದ ಮಾಹಿತಿ ಶೀಘ್ರವೇ ಡಿಸಿಜಿಐಗೆ ಸಲ್ಲಿಕೆಯಾಗಲಿದೆ. ಇದು ಮಕ್ಕಳಿಗೆ ಕೊರೊನಾ ವಿರುದ್ಧ ರಕ್ಷಣೆ ನೀಡುತ್ತೆ ಅನ್ನೋದು ಪಕ್ಕಾ ಆದ್ರೆ, ಸೆಪ್ಟೆಂಬರ್ ವೇಳೆಗೆ ಭಾರತ್ ಬಯೋಟೆಕ್ ಲಸಿಕೆ ಕೂಡ ಮಾರುಕಟ್ಟೆಗೆ ಬರುತ್ತೆ ಅಂತಾ ರಣದೀಪ್ ಗುಲೇರಿಯಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಝೈಡಸ್ ಕ್ಯಾಡಿಲಾ, ಭಾರತ್ ಬಯೋಟೆಕ್ ಜೊತೆಗೆ ಶೀಘ್ರವೇ ಭಾರತಕ್ಕೆ ಫೈಜರ್ ಲಸಿಕೆ ಎಂಟ್ರಿ ಕೊಡಲಿದೆ. ಭಾರತದಲ್ಲಿ ಫೈಜರ್ ಪೂರೈಕೆ ಆರಂಭವಾದ್ರೆ, ಮಕ್ಕಳಿಗೆ ಈ ಲಸಿಕೆಯನ್ನ ಕೊಡಲು ಯಾವುದೇ ತೊಂದರೆ ಇಲ್ಲ ಅಂತಾ ರಣದೀಪ್ ಗುಲೇರಿಯಾ ಹೇಳಿದ್ದಾರೆ.

Source: Tv9Kannada