ಕೇರಳ ಗಡಿಯಲ್ಲಿ ತೀವ್ರ ಕಟ್ಟೆಚ್ಚರ
ಮೈಸೂರು, ನ.28(ಎಂಟಿವೈ)– ಮೈಸೂರಲ್ಲಿ ಕೊರೊನಾ ಮತ್ತೆ ಆರ್ಭಟಿಸುವ ಲಕ್ಷಣಗಳ ಹಿಂದೆಯೇ ಅದರ ರೂಪಾಂತರಿ `ಒಮಿಕ್ರಾನ್’ ಹಾಗೂ ನ್ಯೂರೋ ವೈರಸ್ ಭೀತಿ ಹೆಚ್ಚಾಗು ತ್ತಿರುವುದರಿಂದ ಜಿಲ್ಲಾಡಳಿತ ಹೈ-ಅಲರ್ಟ್ ಆಗಿದೆ. ಕರ್ನಾಟಕ-ಕೇರಳ ಗಡಿ ಪ್ರದೇಶವಾದ ಬಾವಲಿ ಚೆಕ್‍ಪೋಸ್ಟ್‍ನಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದ್ದು, 72 ಗಂಟೆ ಅವಧಿಯಲ್ಲಿ ನೆಗೆ ಟಿವ್ ರಿಪೋರ್ಟ್ ಹೊಂದಿರುವವರಿಗೆ ಮಾತ್ರ ರಾಜ್ಯ ಪ್ರವೇಶಿಸಲು ಅವಕಾಶ ನೀಡಲಾಗುತ್ತಿದೆ.
ಮೈಸೂರಲ್ಲಿ ಕೊರೊನಾ ಸೋಂಕು ಕ್ಷೀಣಿಸು ತ್ತಿತ್ತು. ಆದರೆ, ಕಳೆದ ಒಂದು ವಾರದಿಂದ ಸೋಂಕಿ ತರ ಸಂಖ್ಯೆ ಉಲ್ಬಣಗೊಳ್ಳುತ್ತಿದೆ. ಅಲ್ಲದೆ ಮೈಸೂರಿನ ಎರಡು ನರ್ಸಿಂಗ್ ಕಾಲೇಜುಗಳ 63 ವಿದ್ಯಾರ್ಥಿ ಗಳಲ್ಲಿ ಸೋಂಕು ದೃಢಪಟ್ಟಿರುವುದು ಜಿಲ್ಲಾಡಳಿತಕ್ಕೆ ತಲೆನೋವುಂಟಾಗಿದ್ದರೆ, ಮೈಸೂರಿನ ಜನತೆ ಯನ್ನು ಆತಂಕಕ್ಕೀಡು ಮಾಡಿದೆ. ಇದರೊಂದಿಗೆ 3ನೇ ಅಲೆ ಮೈಸೂರಿಗೆ ಅಪ್ಪಳಿಸುತ್ತಿರುವ ಆತಂಕ ದಟ್ಟವಾಗುತ್ತಿದೆ. ಹಾಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿಗಾ ವಹಿಸಿದೆ.
ಎರಡು ವಾರದಿಂದ ಹೆಚ್ಚಾಗಿದೆ: ಮೈಸೂರು ಜಿಲ್ಲೆಯಲ್ಲಿ ಕಳೆದ ಎರಡು ವಾರದಿಂದ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಅದ ರಲ್ಲಿ ಮೈಸೂರಿನ ಎರಡು ನರ್ಸಿಂಗ್ ಕಾಲೇಜು ಗಳ ವಿದ್ಯಾರ್ಥಿಗಳಿಗೂ ಕೊರೊನಾ ಸೋಂಕು ಬಾಧಿಸಿದೆ. ವಿವಿಧೆಡೆ ಪ್ರವಾಸಕ್ಕೆ ಹೋಗಿ ಬಂದವ ರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತರ ಸಂಪರ್ಕಿತರಲ್ಲೂ ಸೋಂಕು ಪತ್ತೆಯಾಗುತ್ತಿದೆ. ಮೈಸೂರಲ್ಲಿ ಎರಡು ದಿನಗಳಿಂದ ಸೋಂಕಿನ ಸಂಖ್ಯೆ ಹೆಚ್ಚುತ್ತಿರುವುದು ಜನರಲ್ಲಿ ಆತಂಕ ಹಾಗೂ ಗೊಂದಲ ಮನೆ ಮಾಡಿದೆ.
ಕೇರಳದ ವಿದ್ಯಾರ್ಥಿಗಳಲ್ಲೇ ಸೋಂಕು: ರಜೆ ಮುಗಿಸಿ ಕೇರಳದಿಂದ ವಾಪಸ್ಸಾಗಿದ್ದ ನರ್ಸಿಂಗ್ ವಿದ್ಯಾರ್ಥಿ ಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಕೊರೊನಾ ಸೋಂಕಿತ ಎರಡು ನರ್ಸಿಂಗ್ ಕಾಲೇಜುಗಳ 63 ವಿದ್ಯಾರ್ಥಿಗಳಲ್ಲಿ ಬಹುತೇಕರು ಕೇರಳದ ವಿದ್ಯಾರ್ಥಿಗಳೇ ಆಗಿರುವುದು ವಿಶೇಷ. ಇದರಿಂದ ರಾಜ್ಯಕ್ಕೆ ಮತ್ತೊಮ್ಮೆ ಕೇರಳ ನಂಟು ಅಪಾಯಕಾರಿಯಾಗುತ್ತಿರುವುದು ದೃಢಪಡುತ್ತಿದೆ. ಮೈಸೂರಿನ ಅನೇಕ ಕಾಲೇಜು ಹಾಗೂ ನರ್ಸಿಂಗ್ ಕಾಲೇಜುಗಳಲ್ಲಿ ಸಾವಿರಾರು ಮಂದಿ ಕೇರಳದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡು ತ್ತಿದ್ದು, ಸೋಂಕು ವ್ಯಾಪಿಸುವ ಭೀತಿ ಇಮ್ಮಡಿಗೊಳಿಸಿದೆ.
ಬಾವಲಿ ಚೆಕ್‍ಪೋಸ್ಟ್‍ನಲ್ಲಿ ಕಟ್ಟುನಿಟ್ಟಿನ ಕ್ರಮ: ಕೊರೊನಾ ರೂಪಾಂತರಿ ಒಮಿಕ್ರಾನ್, ನ್ಯೂರೊ ವೈರಸ್ ಹಾಗೂ ಕೊರೊನಾ ಸೋಂಕಿತರ ಏರಿಕೆಯಿಂದಾಗಿ ಕರ್ನಾಟಕ-ಕೇರಳ ಗಡಿ ಬಾವಲಿ ಚೆಕ್‍ಪೋಸ್ಟ್‍ನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಪ್ರವಾಸಿ, ಖಾಸಗಿ, ಪ್ರಯಾಣಿಕರ ವಾಹನ, ತರಕಾರಿ ಹಾಗೂ ಇನ್ನಿತರೆ ಗೂಡ್ಸ್ ವಾಹನಗಳಲ್ಲಿ ರಾಜ್ಯ ಪ್ರವೇಶಿಸುವವರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.
ನೆಗೆಟಿವ್ ರಿಪೋರ್ಟ್ ಕಡ್ಡಾಯ: ಕಳೆದ ಕೆಲವು ದಿನಗಳಿಂದ ನಿಲ್ಲಿಸಲಾಗಿದ್ದ ನೆಗೆಟಿವ್ ರಿಪೋರ್ಟ್ ಕಡ್ಡಾಯ ನಿಯಮವನ್ನು ಮತ್ತೆ ಜಾರಿಗೊಳಿಸಲಾಗಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಉಲ್ಬಣಗೊಳ್ಳುತ್ತಿರುವುದರಿಂದ ಕೇರಳ ಹಾಗೂ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವವರಿಗೆ 72 ಗಂಟೆಗಳ ಅವಧಿಯ ನೆಗೆಟಿವ್ ರಿಪೋರ್ಟ್ ಇದ್ದರೆ ಮಾತ್ರ ರಾಜ್ಯ ಪ್ರವೇಶಿಸಲು ಅನುಮತಿ ನೀಡುವಂತೆ ಸರ್ಕಾರ ಆದೇಶಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆ ವ್ಯಾಪ್ತಿಯ ಬಾವಲಿ ಚೆಕ್‍ಪೋಸ್ಟ್‍ನಲ್ಲಿ ಕೇರಳದಿಂದ ಬರುವವರ ನೆಗೆಟಿವ್ ರಿಪೋರ್ಟ್ ಪರಿಶೀಲಿಸಲಾಗುತ್ತಿದೆ. ಇಲ್ಲದವರನ್ನು ಮುಲಾಜಿಲ್ಲದೆ ವಾಪಸ್ಸು ಕಳುಹಿಸಲಾಗುತ್ತದೆ.
ಪರಿಶೀಲನೆ: ಕೊರೊನಾ ಪರಿಸ್ಥಿತಿ ಬಿಗಡಾಯಿಸುವ ಹಂತಕ್ಕೆ ತಲುಪುವ ಸೂಚನೆ ಕಂಡು ಬಂದ ಹಿನ್ನೆಲೆಯಲ್ಲಿ ಭಾನುವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿ ಕಾರಿ ಡಾ.ಕೆ.ಹೆಚ್.ಪ್ರಸಾದ್, ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್, ಸಬ್‍ಇನ್ಸ್ ಪೆಕ್ಟರ್ ಜಯಪ್ರಕಾಶ್ ಸೇರಿದಂತೆ ಇನ್ನಿತರರು ಬಾವಲಿ ಚೆಕ್‍ಪೋಸ್ಟ್‍ಗೆ ಭೇಟಿ ನೀಡಿ ಪರಿಶೀಲಿಸಿದರು. ರಾಜ್ಯ ಪ್ರವೇಶಿಸುವ ಎಲ್ಲಾ ವಾಹನಗಳನ್ನು ಕೂಲಂಕುಶವಾಗಿ ಪರಿ ಶೀಲಿಸುವಂತೆ ಸೂಚಿಸಿದರು. ನೆಗೆಟಿವ್ ವರದಿ ಇಲ್ಲದವರಿಗೆ ರಾಜ್ಯ ಪ್ರವೇಶಿಸಲು ಬಿಡಬಾರದು. ನೆಗೆಟಿವ್ ವರದಿ ಇದ್ದವರಲ್ಲಿ ಅನಾರೋಗ್ಯದ ಲಕ್ಷಣ ಕಂಡು ಬಂದಲ್ಲಿ ಅವರನ್ನು ವಾಪಸ್ ಕಳುಹಿಸುವುದರೊಂದಿಗೆ, ಅನಿವಾರ್ಯ ಪರಿಸ್ಥಿತಿ ಇದ್ದಲ್ಲಿ ಅವರ ಸಂಪೂರ್ಣ ಮಾಹಿತಿ ದಾಖಲಿಸುವಂತೆ ಡಿಹೆಚ್‍ಓ ಡಾ.ಕೆ.ಹೆಚ್.ಪ್ರಸಾದ್ ಸೂಚಿಸಿದರು.
Source: mysoremithra