ಕರ್ನಾಟಕಕ್ಕೆ ಹೆಚ್ಚು ಕೊವಿಡ್ ಲಸಿಕೆ ಪೂರೈಕೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸಿಎಂ ಬೊಮ್ಮಾಯಿ ಮನವಿ
ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಗೆ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಭೇಟಿ ನೀಡಿ ರಾಜ್ಯಕ್ಕೆ ಸಂಬಂಧಿಸಿದ ಕೆಲ ವಿಚಾರಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯರನ್ನು ಭೇಟಿಯಾಗಿ, ಕರ್ನಾಟಕಕ್ಕೆ ಹೆಚ್ಚು ಕೊವಿಡ್ ಲಸಿಕೆಯನ್ನು ಪೂರೈಕೆ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ. ಈ ವೇಳೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್, ಜಲಸಂಪನ್ಮೂಲ ಇಲಾಖೆ ಸಚಿವ ಗೋವಿಂದ ಕಾರಜೋಳ ಮತ್ತು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಉಪಸ್ಥಿತರಿದ್ದರು.
ನವದೆಹಲಿಯ ಚಾಣಕ್ಯಪುರಿಯಲ್ಲಿರುವ ರಾಷ್ಟ್ರೀಯ ಪೊಲೀಸ್ ಸ್ಮಾರಕ ಮತ್ತು ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿಗಳು, ಸಂದರ್ಶಕರ ಪುಸ್ತಕದಲ್ಲಿ ಅಭಿಪ್ರಾಯವನ್ನು ದಾಖಲಿಸಿದ್ದಾರೆ.
ರಾಜ್ಯದ ಯೋಜನೆಗಳ ಬಗ್ಗೆ ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿದ್ದೇವೆ. ವಕೀಲರಾದ ಮೋಹನ್ ಕಾತರಕಿ, ಶಾಮ್ ದಿವಾನ್ ಜೊತೆ ಚರ್ಚೆ ನಡೆಸಿದ್ದೇವೆ. ಕೃಷ್ಣಾ ನದಿ ನೀರು ಹಂಚಿಕೆ ಬಗ್ಗೆ ತೆಲಂಗಾಣ ಅರ್ಜಿ ವಿಚಾರಣೆಗೆ ಬರಲಿದೆ. ಈ ವೇಳೆ ಕೃಷ್ಣ ನೀರಿನ ಬಳಕೆಗೆ ಅನುಮತಿಗಾಗಿ ಮನವಿ ಕೋರಲಿದ್ದೇವೆ. ಮೇಕೆದಾಟು ವಿರೋಧಿಸಿ ಮದುರೈ ಕೋರ್ಟ್ನಲ್ಲಿ ಕೇಸ್ ಇದೆ. ಕೇಸ್ನಲ್ಲಿ ಭಾಗಿದಾರರನ್ನಾಗಿ ಮಾಡಲು ಮನವಿ ಮಾಡಬೇಕಿದೆ ಎಂದು ದೆಹಲಿಯಲ್ಲಿ ಸಿಎಂ ಬೊಮ್ಮಾಯಿ ಹೇಳಿದರು.
ಮೇಕೆದಾಟು ಯೋಜನೆಗೆ ಅನುಮತಿ ಕೊಡುವಂತೆ ಮನವಿ ಮಾಡಲಿದ್ದೇವೆ ಎಂದು ತಿಳಿಸಿದ ಬಸವರಾಜ ಬೊಮ್ಮಾಯಿ, ಮಹದಾಯಿ ಸೆಪ್ಟೆಂಬರ್ ಹೊತ್ತಿಗೆ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ವಿಚಾರಣೆಗೆ ಬರಲಿದೆ. ತಮಿಳುನಾಡಿನ ಅಕ್ರಮ ಯೋಜನೆಗಳ ಬಗ್ಗೆ ಅರ್ಜಿ ಸಲ್ಲಿಸಲು ತಯಾರಿ ನಡೆಸಿದ್ದೇವೆ. ಇನ್ನೊಂದು ವಾರದಲ್ಲಿ ವರದಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ತಿಳಿಸಿದ್ದಾರೆ
Source:tv9 Kannada