ಇಂದಿನಿಂದ ರಾಷ್ಟ್ರಪತಿ ರಾಮನಾಥ ಕೋವಿಂದ್ ಉತ್ತರ ಪ್ರದೇಶ ಪ್ರವಾಸ; ರಾಮ ಮಂದಿರಕ್ಕೆ ಭೇಟಿ ನೀಡಲಿರುವ ಮೊದಲ ರಾಷ್ಟ್ರಪತಿ
ಇಂದಿನಿಂದ (ಆಗಸ್ಟ್ 26, ಗುರುವಾರ) ಉತ್ತರ ಪ್ರದೇಶಕ್ಕೆ ನಾಲ್ಕು ದಿನಗಳ ಪ್ರವಾಸ ಕೈಗೊಂಡಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್ ಅಯೋಧ್ಯೆಯಲ್ಲಿರುವ ರಾಮ ಲಲ್ಲಾಗೆ ವಂದನೆ ಸಲ್ಲಿಸಲಿರುವ ಮೊದಲ ರಾಷ್ಟ್ರಪತಿ ಎನಿಸಿಕೊಳ್ಳಲಿದ್ದಾರೆ. ನಿರ್ಮಾಣ ಹಂತದಲ್ಲಿರುವ ರಾಮ ಮಂದಿರಕ್ಕೆ ಕೋವಿಂದ್ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ರಾಷ್ಟ್ರಪತಿಗಳ ಭೇಟಿಯ ಅಧಿಕೃತ ಸೂಚಿ ಇನ್ನಷ್ಟೇ ಬಿಡುಗಡೆಯಾಗಬೇಕಿದ್ದು, ಮೂಲಗಳ ಪ್ರಕಾರ ಅವರು ಘಟಿಕೋತ್ಸವಗಳಲ್ಲಿ ಹಾಗೂ ವಿವಿಧ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಇಂದು(ಗುರುವಾರ) ರಾಷ್ಟ್ರಪತಿಗಳು ಲಕ್ನೋದ ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ವಿಶ್ವವಿದ್ಯಾಲಯದ ಒಂಬತ್ತನೇ ಘಟಿಕೋತ್ಸವದಲ್ಲಿ ಭಾಗವಹಿಸಲಿದ್ದಾರೆ. ನಾಳೆ (ಆಗಸ್ಟ್ 27) ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಡಾ.ಸಂಪೂರ್ಣಾನಂದ್ ಅವರ ಪ್ರತಿಮೆಯನ್ನು ಕೋವಿಂದ್ ಅನಾವರಣಗೊಳಿಸಲಿದ್ದು, ನಂತರ ಲಕ್ನೋದ ಕ್ಯಾ.ಮನೋಜ್ ಪಾಂಡೆ ಸೈನಿಕ ಶಾಲೆಯ ಸಭಾಂಗಣವನ್ನು ಉದ್ಘಾಟಿಸಲಿದ್ದಾರೆ. ಹಾಗೆಯೇ, ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ಕಾಲೇಜಿನ(SGPGIMS) 26ನೇ ಘಟಿಕೋತ್ಸವದಲ್ಲಿ ಭಾಗವಹಿಸಿ, ರಾಷ್ಟ್ರಪತಿಗಳು ಪದವಿ ಪ್ರದಾನ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆಗಸ್ಟ್ 28ರ ಶನಿವಾರದಂದು ರಾಷ್ಟ್ರಪತಿಗಳು ಆಯುಷ್ ವಿಶ್ವವಿದ್ಯಾನಿಲಯದ ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಆಯುಷ್ ವಿಶ್ವವಿದ್ಯಾಲಯವು ಸುಮಾರು 52 ಎಕರೆಯಲ್ಲಿ, ₹ 815 ಕೋಟಿ ವೆಚ್ಚದಲ್ಲಿ ತಯಾರಾಗಲಿದೆ. ಇದರ ನಂತರ ಕೋವಿಂದ್ ಗೋರಖ್ಪುರದಲ್ಲಿರುವ ಮಹಾಯೋಗಿ ಗುರು ಗೋರಖನಾಥ ವಿಶ್ವವಿದ್ಯಾನಿಲಯವನ್ನು ಉದ್ಘಾಟಿಸಲಿದ್ದಾರೆ. ಈಗಾಗಲೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಷ್ಟ್ರಪತಿ ಭೇಟಿಯ ಹಿನ್ನೆಲೆಯಲ್ಲಿ, ಗೋರಖ್ಪುರಕ್ಕೆ ತೆರಳಿ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ ಎಂದು ವರದಿಯಾಗಿದೆ.
ರಾಷ್ಟ್ರಪತಿಗಳು ಯೋಗಿ ಆದಿತ್ಯನಾಥರು ಮುಖ್ಯ ಅರ್ಚಕರಾಗಿ ಕಾರ್ಯ ನಿರ್ವಹಿಸುವ ಗೋರಖ್ನಾಥ ದೇವಾಲಯಕ್ಕೆ ಭೇಟಿ ಕೊಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭಾನುವಾರ ಲಕ್ನೋದಿಂದ ರಾಷ್ಟ್ರಪತಿಗಳು ವಿಶೇಷ ರೈಲಿನ ಮುಖಾಂತರ ಅಯೋಧ್ಯೆಗೆ ತೆರಳಲಿದ್ದಾರೆ. ಅಯೋಧ್ಯೆಯಲ್ಲಿ ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಸಚಿವಾಲಯದ ಕೆಲವು ಕಾರ್ಯಕ್ರಮಗಳನ್ನು ಉದ್ಘಾಟಿಸಲಿರುವ ರಾಷ್ಟ್ರಪತಿಗಳು, ನಂತರ ನಿರ್ಮಾಣ ಹಂತದಲ್ಲಿರುವ ರಾಮ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ ಎಂದು ‘ನ್ಯೂಸ್ ಆನ್ ಏರ್’ ತಿಳಿಸಿವೆ.
Source:tv9 Kannada