ಕಡಿಮೆ ಸಾಕ್ಷರತೆ ಇರುವ ರಾಜ್ಯದ ಈ 5 ಜಿಲ್ಲೆಗಳಲ್ಲಿ ವಿವಿಧ ಯೋಜನೆ; 2030ರೊಳಗೆ ಶೇಕಡಾ 100 ಸಾಕ್ಷರತೆಯ ಗುರಿ
ಬೆಂಗಳೂರು: ರಾಜ್ಯದಲ್ಲಿ ರಾಯಚೂರು, ಯಾದಗಿರಿ, ಚಾಮರಾಜನಗರ, ಕಲಬುರಗಿ ಹಾಗೂ ವಿಜಯಪುರ ಜಿಲ್ಲೆಗಳನ್ನು ನೀತಿ ಆಯೋಗ ಕಡಿಮೆ ಸಾಕ್ಷರತೆ ಜಿಲ್ಲೆ ಎಂದು ಗುರುತಿಸಿದೆ. ಈ ಜಿಲ್ಲೆಗಳಲ್ಲಿ ಸಾಕ್ಷರತೆ ಹೆಚ್ಚಿಸಲು ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. 1 ರಿಂದ 5ನೇ ತರಗತಿಯವರೆಗಿನ ಶಾಲೆಗಳನ್ನು ತೆರೆಯುವ ವಿಚಾರವನ್ನು ಈವರೆಗೂ ಮಾಡಿಲ್ಲ. ಸದ್ಯ ನಡೆಯುತ್ತಿರುವ ಸದನ ಮುಗಿಯುವವರೆಗೂ ಯಾವುದೇ ತೀರ್ಮಾನ ಮಾಡುವುದಿಲ್ಲ. ಕೊವಿಡ್ ಮೂರನೇ ಅಲೆ ತಡೆಯುವ ಬಗ್ಗೆ ಸರ್ಕಾರ ಗಮನಹರಿಸುತ್ತಿದೆ. ಮಕ್ಕಳ ಮೇಲೆ ಪರಿಣಾಮ ಬೀರಬಹುದಾದ ಬಗ್ಗೆ ಚರ್ಚೆ ನಡೆಯುತ್ತಿದೆ. ಕೊವಿಡ್ ಟಾಸ್ಕ್ಫೋರ್ಸ್ ಸಹ ಗಂಭೀರ ಅಧ್ಯಯನ ನಡೆಸುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾಹಿತಿ ನೀಡಿದರು.
55ನೇ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ ಅವರು, 2021-22ನೇ ಸಾಲಿನ ಸಾಕ್ಷರತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಸಾಕ್ಷರತಾ ಸಪ್ತಾಹಕ್ಕೆ ಚಾಲನೆ ನೀಡಿದರು.
ಹಮ್ಮಿಕೊಳ್ಳಲಾದ ಯೋಜನೆಗಳು
ಈ ಐದು ಜಿಲ್ಲೆಗಳ ಒಟ್ಟು 24 ತಾಲೂಕಿನ 219 ಗ್ರಾಮ ಪಂಚಾಯತ್ ಹಾಗೂ 19 ನಗರ-ಪಟ್ಟಣ ಪ್ರದೇಶಗಳಿವೆ
1) ಇದರಲ್ಲಿ 15 ವರ್ಷದ ಮೇಲ್ಪಟ್ಟ ಹಾಗೂ 50 ವರ್ಷದ ಒಳಗಿನ ವಯಸ್ಸಿನ ವರಿಗೆ ಶಿಕ್ಷಣ ನೀಡಲಾಗುತ್ತದೆ
2) 20 ಜನರಿಗೆ ಓರ್ವ ಬೋಧಕರು ಕಲಿಕಾ ಕೇಂದ್ರದಲ್ಲಿ ಇರುತ್ತಾರೆ
3) 120 ಗಂಟೆಗಳು, 4 ತಿಂಗಳ ಅವಧಿಯಲ್ಲಿ ಬೆಳಗ್ಗೆ ಮಧ್ಯಾಹ್ನ ಸಂಜೆ ವೇಳೆಯಲ್ಲಿ ಕಲಿಕೆ
4) ಬಾಳಿನ ಬೆಳಕು ಹಾಗೂ ಬರೆಯೋಣ ಬನ್ನಿ ಎಂಬ ಪಠ್ಯ ಪುಸ್ತಕಗಳೊಂದಿಗೆ ಕಲಿಕೆ
5) 2030 ರವರೆಗೆ ಶೇಕಡಾ 100ರಷ್ಟು ಸಾಕ್ಷರತೆಗೆ ಸರ್ಕಾರ ಗುರಿ ಇಟ್ಟುಕೊಂಡಿದೆ.
Source:tv9kannada