ಏಕಲವ್ಯ ಪ್ರಶಸ್ತಿ ವಿಜೇತೆ, ಕೊಡಗಿನ ಸ್ಟಾರ್​ ಬಾಸ್ಕೆಟ್​​ಬಲ್ ಆಟಗಾರ್ತಿ ನವನೀತಾ ಏಷ್ಯಾ ಕಪ್ ಟೂರ್ನಮೆಂಟ್​ಗೆ ಆಯ್ಕೆ

Sep 16, 2021

ಮಡಿಕೇರಿ: ರಾಷ್ಟ್ರೀಯ ಕ್ರೀಡಾ ಕ್ಷೇತ್ರಕ್ಕೆ ಕೊಡಗಿನ ಕೊಡುಗೆ ಅಪಾರ. ಇದೀಗ ಇವರ ಸಾಲಿಗೆ ಕೊಡಗಿನ ಮತ್ತೊಬ್ಬ ಕ್ರೀಡಾಪಟು ಸೇರ್ಪಡೆಯಾಗಿದ್ದಾರೆ. ಸುಂಟಿಕೊಪ್ಪ ನಿವಾಸಿ ಪಟ್ಟೆಮನೆ ನವನೀತಾ ರಾಷ್ಟ್ರೀಯ ಬಾಸ್ಕೆಟ್ ಬಾಲ್ ತಂಡಕ್ಕೆ ಆಯ್ಕೆಯಾಗಿದ್ದು ಏಷ್ಯಾ ಕಪ್ ಟೂರ್ನಮೆಂಟ್​ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದೇ 27 ರಿಂದ ಅಕ್ಟೋಬರ್ 3 ರವರೆಗೆ ಜೋರ್ಡಾನ್​ನ ಅಮನ್​ನಲ್ಲಿ ಏಷ್ಯಾಕಪ್​ ಪಂದ್ಯಾವಳಿ ನಡೆಯಲಿದೆ. ಭಾರತ ಕೊರಿಯಾ ಜಪಾನ್ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಎ ಗುಂಪಿನಲ್ಲಿವೆ. ಭಾರತ ತಂಡ ತನ್ನ ಮೊದಲ ಪಂದ್ಯವನ್ನು ತಾ. 27 ರಂದು ಜಪಾನ್ ವಿರುದ್ಧ ಸೆಣಸಲಿದೆ. ಮಡಿಕೇರಿ ತಾಲೂಕಿನ ಸುಂಟಿಕೊಪ್ಪ ಬಳಿಯ ಗದ್ದೆಹಳ್ಳ ನಿವಾಸಿಯಾಗಿರೋ ಪಟ್ಟೆಮನೆ ಉದಯ್​ಕುಮಾರ್​ ಗಿರಿಜಾ ದಂಪತಿಯ ಪುತ್ರಿಯಾಗಿರೋ ನವನೀತಾ ಸದ್ಯ ರೈಲ್ವೇ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದಾರೆ.

ಇವರು ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಇದೇ ಸುಂಟಿಕೊಪ್ಪ ಊರಿನ ಅಂಕಿತಾ ಸುರೇಶ್​ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತ ಹಾಕಿ ತಂಡದ ಸಹಾಯಕ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.

Source:tv9kannada