ಇನ್ಸೈಡ್ ಸ್ಟೋರಿ – ಕೊನೆಯ ಹಂತದಲ್ಲಿ ವಿಜಯೇಂದ್ರಗೆ ಸಚಿವ ಸ್ಥಾನ ತಪ್ಪಿದ್ದೇಗೆ?
ಬೆಂಗಳೂರು: ಕೊನೆಯ ಹಂತದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೆಸರನ್ನ ಸಂಪುಟದಿಂದ ಕೈಬಿಡಲಾಗಿದೆ. ಕೊನೆಯ ಹಂತದಲ್ಲಿ ವಿಜಯೇಂದ್ರ ಸಚಿವ ಸ್ಥಾನದಿಂದ ವಂಚಿರಾಗಿದ್ದು ಹೇಗೆ ಎಂಬುದರ ಇನ್ಸೈಡ್ ಸ್ಟೋರಿ ಇಲ್ಲಿದೆ.
ಬಿಎಸ್ವೈ ಷರತ್ತು, ‘ಹೈ’ ಗೊಂದಲ:
ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ವೇಳೆ ಹೈಕಮಾಂಡ್ ಮುಂದೆ ಕೆಲ ಷರತ್ತುಗಳನ್ನು ಇರಿಸಿದ್ದರು ಎನ್ನಲಾಗಿದೆ. ಆ ಷರತ್ತುಗಳ ಪೈಕಿ ತಮ್ಮ ವಿರುದ್ಧ ಮತ್ತು ತಮಗೆ ಆಡಳಿತ ನಡೆಸಲು ಬಿಡದ ಎಂಎಲ್ಸಿ ಸಿ.ಪಿ.ಯೋಗೇಶ್ವರ್, ಶಾಸಕರಾದ ಅರವಿಂದ್ ಬೆಲ್ಲದ್ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಗೆ ಸಚಿವ ಸ್ಥಾನ ನೀಡಬಾರದು. ಒಂದು ವೇಳೆ ಇವರಿಗೆ ಸಂಪುಟದಲ್ಲಿ ಸ್ಥಾನ ಮಾಡಿದ್ರೆ, ಪುತ್ರ ವಿಜಯೇಂದ್ರನ ಹೆಸರು ಪರಿಗಣಿಸಬೇಕೆಂಬ ಷರತ್ತು ಇರಿಸಿದ್ದರು ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಯಡಿಯೂರಪ್ಪನವರು ಹಾಕಿದ್ದ ಈ ಷರತ್ತಿನಿಂದಲೇ ಪಟ್ಟಿ ಅಂತಿಮಗೊಳ್ಳಲು ವಿಳಂಬವಾಯ್ತು ಎನ್ನಲಾಗಿದೆ. ನಿನ್ನೆಯವರೆಗೂ ಯೋಗೇಶ್ವರ್, ಬೆಲ್ಲದ್, ಯತ್ನಾಳ್ ಮತ್ತು ವಿಜಯೇಂದ್ರ ಹೆಸರು ಕೇಳಿ ಬಂದಿತ್ತು. ಆದ್ರೆ ಕೊನೆ ಹಂತದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡಿರುವ ಹೈಕಮಾಂಡ್ ಎಲ್ಲರ ಹೆಸರನ್ನು ಕೈ ಬಿಟ್ಟಿದೆ ಎನ್ನಲಾಗಿದೆ.
Source: public tv