Deepak Punia: ಸೆಮಿ ಫೈನಲ್​ಗೆ ಲಗ್ಗೆಯಿಟ್ಟ ರವಿ ದಹಿಯಾ, ದೀಪಕ್ ಪುನಿಯಾ: ಭಾರತಕ್ಕೆ ಪದಕದ ನಿರೀಕ್ಷೆ

Aug 4, 2021

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಪುರುಷ ಕುಸ್ತಿಪಟುಗಳಾದ ರವಿ ದಹಿಯಾ, ದೀಪಕ್ ಪುನಿಯಾ ಕ್ವಾರ್ಟರ್‌ ಫೈನಲ್‌ನಲ್ಲಿ ಗೆದ್ದು ಬೀಗಿದ್ದು ಸೆಮಿ ಫೈನಲ್​ಗೆ ಪ್ರವೇಶ ಪಡೆದಿದ್ದಾರೆ. ಪುರುಷರ 57 ಕೆ.ಜಿ ವಿಭಾಗದಲ್ಲಿ ರವಿ ದಹಿಯಾ ಮತ್ತು ಪುರುಷರ 86 ಕೆ.ಜಿ ವಿಭಾಗದಲ್ಲಿ ದೀಪಕ್ ಪೂನಿಯಾ ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿದರು. ಈ ಮೂಲಕ ಪದಕದ ಆಸೆ ಮೂಡಿಸಿದ್ದಾರೆ.

ರವಿ ಅವರು ಪುರುಷರ 57 ಕೆ.ಜಿ. ವಿಭಾಗದ ಫ್ರೀ ಸ್ಟ್ರೈಲ್‌ ಕುಸ್ತಿ ಸ್ಪರ್ಧೆಯಲ್ಲಿ ಕೊಲಂಬಿಯಾದ ಅರ್ಬಾನೊ ಟೈಗರೋಸ್ ಎದುರು 13-2 ಅಂಕಗಳ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟಿದ್ದರು. ಕ್ವಾರ್ಟರ್ ಫೈನಲ್​ನಲ್ಲಿ ಬಲ್ಜೆರಿಯಾದ ಜಾರ್ಗೀ ವಂಗೆಲೊವ್ ಎದುರು 14-4 ಅಂಕಗಳ ಅಂತರದಲ್ಲಿ ಅಮೋಘ ಗೆಲುವು ಸಾಧಿಸಿ ಸೆಮೀಸ್​ಗೆ ಅರ್ಹತೆಗಿಟ್ಟಿಸಿಕೊಂಡಿದ್ದಾರೆ.

ಇತ್ತ ಪುರುಷರ 86 ಕೆ.ಜಿ. ಸ್ಪರ್ಧೆಯಲ್ಲಿ ಭಾರತದ ಮತ್ತೋರ್ವ ಕುಸ್ತಿಪಟು ದೀಪಕ್‌ ಪುನಿಯಾ ಕೂಡಾ ನೈಜೀರಿಯಾದ ಅಗಿಮೋರ್ ಎದುರು 12-1 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟಿದ್ದರು. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇವರು ಚೀನಾದ ಶೂಶೆನ್ ಲಿನ್ ವಿರುದ್ಧ 6-3ರಲ್ಲಿ ರೋಚಕ ಗೆಲುವು ದಾಖಲಿಸಿದರು. ಜಿದ್ದಾಜಿದ್ದಿನಿಂದ ಸಾಗಿದ ಸಮಬಲದ ಹೋರಾಟದ ಕೊನೆಯ ಕ್ಷಣದಲ್ಲಿ ದೀಪಕ್ ಮೇಲುಗೈ ಸಾಧಿಸಿದರು.

Source: Tv9 kannada