ಇಂದಿನ ಪಂದ್ಯದ ಬಗ್ಗೆ ಹೆಚ್ಚು ಕುತೂಹಲ ಮೂಡಲು ಕಾರಣ ತಿಳಿಸಿದ ರವಿ ಶಾಸ್ತ್ರಿ

Apr 10, 2021

ಈ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಹಾಗೂ ರಿಷಭ್ ಪಂತ್ ಎದುರಾಳಿಗಳಾಗಿದ್ದಾರೆ. ಇಬ್ಬರೂ ಕೂಡ ಉಭಯ ತಂಡದ ನಾಯಕರು ಹಾಗೂ ವಿಕೆಟ್ ಕೀಪರ್​ಗಳೂ ಆಗಿರುವುದು ವಿಶೇಷವಾಗಿದೆ.

ಐಪಿಎಲ್ 2021ರ ಎರಡನೇ ಪಂದ್ಯಾಟ ಇಂದು ಮುಂಬೈನ ವಾಂಖೆಡೆ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯಲಿದೆ. ಕಳೆದ ಬಾರಿ ಕಳಪೆ ಪ್ರದರ್ಶನ ತೋರಿದ್ದ ಚೆನ್ನೈ, ಯುವಕರ ಎನರ್ಜಿಟಿಕ್ ತಂಡ ಡೆಲ್ಲಿ ಕ್ಯಾಪಿಟಲ್ಸ್​ನ್ನು ಎದುರಿಸಲಿದೆ. ಮೂರು ಬಾರಿ ಕಪ್ ಗೆದ್ದಿರುವ ಸಿಎಸ್​ಕೆ ನಾವು ಕಮ್ಮಿಯೇನೂ ಇಲ್ಲ ಎಂದು ಮತ್ತೆ ಆಡಿ ತೋರಿಸಲು ತಯಾರಾಗಿದೆ.

ನಿನ್ನೆ ಆರಂಭವಾದ ಐಪಿಎಲ್​ಗೆ ರಾಯಲ್ ಚಾಲೆಂಜರ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಆರಂಭ ನೀಡಿದ್ದವು. ಇಂದು ಸೀಸನ್​ನ ಮೊದಲ ವೀಕೆಂಡ್ ಪಂದ್ಯಾಟ ನಡೆಯಲಿದ್ದು, ಚೆನ್ನೈಗೆ ಡೆಲ್ಲಿ ಸವಾಲೊಡ್ಡಿದೆ. ಈ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಹಾಗೂ ರಿಷಭ್ ಪಂತ್ ಎದುರಾಳಿಗಳಾಗಿರುವುದು ಮತ್ತೊಂದು ವಿಶೇಷ. ಇಬ್ಬರೂ ಕೂಡ ಉಭಯ ತಂಡದ ನಾಯಕರು ಹಾಗೂ ವಿಕೆಟ್ ಕೀಪರ್​ಗಳೂ ಆಗಿದ್ದಾರೆ.

ಈ ಕುರಿತು ರವಿ ಶಾಸ್ತ್ರಿ ಕೂಡ ಟ್ವೀಟ್ ಮಾಡಿದ್ದಾರೆ. ಇಂದಿನ ಪಂದ್ಯವನ್ನು ಗುರು ವರ್ಸಸ್ ಚೇಲಾ ಎಂದು ಅವರು ಕರೆದಿದ್ದಾರೆ. ಇಂದಿನ ಪಂದ್ಯ ಬಹಳಷ್ಟು ಮಜವಾಗಿರಲಿದೆ. ಸ್ಟಂಪ್ ಮೈಕ್ ಕಡೆಗೆ ಇರಿಸಿಕೊಳ್ಳಿ. ಡು ಲಿಸನ್ ಟು ಸ್ಟಂಪ್ ಮೈಕ್ ಎಂದು ಕೇಳಿಕೊಂಡಿದ್ದಾರೆ. ವಿಕೆಟ್ ಕೀಪರ್ ಹಾಗೂ ಕ್ರೀಸ್​ನಲ್ಲಿ ಬ್ಯಾಟಿಂಗ್ ಮಾಡುವ ವೇಳೆ, ಧೋನಿ ಮತ್ತು ಪಂತ್ ನಡುವೆ ಏನು ಮಾತುಕತೆ ನಡೆಯಬಹುದು ಎಂಬ ಕುತೂಹಲ ಹೆಚ್ಚಿಸಿದ್ದಾರೆ.

ಈ ಟ್ವೀಟ್​ನಲ್ಲಿ ಅವರು ಮಹೇಂದ್ರ ಸಿಂಗ್ ಧೋನಿಯನ್ನು ಗುರು ಎಂದು ಹಾಗೂ ಪಂತ್ ಅವರನ್ನು ಚೇಲಾ (ಹಿಂಬಾಲಕ) ಎಂದು ಕರೆದಿದ್ದಾರೆ. ಅವರಿಬ್ಬರು ಆಟದ ವೇಳೆ ಏನು ಮಾತಾಡುತ್ತಾರೆ ಕೇಳಿಕೊಳ್ಳಿ ಎಂದು ಹೇಳಿ, ಪಂದ್ಯದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಪಂತ್ ಹಾಗೂ ಧೋನಿ ಇಬ್ಬರೂ ಸಾಧಾರಣವಾಗಿ ತಮ್ಮ ತಂಡದ ಸದಸ್ಯರೊಂದಿಗೆ ಮಾತನಾಡಿಕೊಂಡಿರುತ್ತಾರೆ. ಬೌಲಿಂಗ್ ವೇಳೆ ಬೌಲರ್​ಗಳಿಗೆ ಸಲಹೆ ನೀಡುತ್ತಿರುತ್ತಾರೆ. ಹಾಗಾಗಿ, ಸ್ಟಂಪ್​ನ ಹಿಂಬಾಗದ ಮಾತುಗಳಿಗೆ ಇಂದು ಹೆಚ್ಚೇ ಕುತೂಹಲ ಮೂಡಿಸಿದೆ.

ನಾಯಕನಾಗಿ ನನ್ನ ಮೊದಲ ಪಂದ್ಯ ಮಾಹಿ ಭಾಯ್ (ಮಹೇಂದ್ರ ಸಿಂಗ್ ಧೋನಿ) ವಿರುದ್ಧ ನಡೆಯುತ್ತಿರುವುದು ಖುಷಿ ಇದೆ. ಇದೊಂದು ಒಳ್ಳೆಯ ಅನುಭವ ಆಗಿರಲಿದೆ. ಅವರಿಂದ ನಾನು ಬಹಳಷ್ಟು ಕಲಿತಿದ್ದೇನೆ. ನನ್ನ ಸ್ವ ಅನುಭವ ಹಾಗೂ ಧೊನಿಯಿಂದ ಕಲಿತಿದ್ದನ್ನೂ ಅಳವಡಿಸಿ ಆಡುತ್ತೇನೆ ಎಂದು ಡೆಲ್ಲಿ ತಂಡದ ಪ್ರೆಸ್ ರಿಲೀಸ್​ನಲ್ಲಿ ಪಂತ್ ಹೇಳಿದ್ದರು.

Source: TV9Kannada