ಕರ್ನಾಟಕದ ದೇವಸ್ಥಾನಗಳ ಜೀರ್ಣೋದ್ದಾರ ಅನುದಾನ ತಡೆ ಹಿಡಿದ ಸರ್ಕಾರ ಬೆನ್ನಲ್ಲೇ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ, ದೇಗುಲಗಳ ಅನುದಾನಕ್ಕೆ ತಡೆ ನೀಡಿದ್ದ ಆದೇಶ ಹಿಂಪಡೆಯಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ
 

ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಸಚಿವ, ದೇಗುಲಗಳ ಅನುದಾನಕ್ಕೆ ತಡೆ ನೀಡಿದ್ದ ಆದೇಶ ವಾಪಸ್

ಬೆಂಗಳೂರು, (ಆಗಸ್ಟ್ 18): ಕರ್ನಾಟಕದ ದೇವಸ್ಥಾನಗಳ (Karnataka Temples) ಜೀರ್ಣೋದ್ದಾರ ಅನುದಾನ ತಡೆ ಹಿಡಿದು ಆದೇಶ ಹೊರಡಿಸಿರುವುದು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ(ramalinga reddy) ಎಚ್ಚೆತ್ತುಕೊಂಡಿದ್ದು, ಕೂಡಲೇ ಅನುದಾನಕ್ಕೆ ತಡೆ ನೀಡಿದ್ದ ಆದೇಶ ಹಿಂಪಡೆಯಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದರೊಂದಿಗೆ ಹಿಂದೂಪರ ಸಂಘಟನೆಗಳು ಹಾಗೂ ಬಿಜೆಪಿ ನಾಯಕರು ಇದನ್ನು ತೀವ್ರ ಸ್ವರೂಪಕ್ಕೆ ಕೊಂಡೊಯ್ಯುವ ಮೊದಲೇ ರಾಮಲಿಂಗರೆಡ್ಡಿ ಎಚ್ಚೆತ್ತುಕೊಂಡಿದ್ದಾರೆ.

ಇನ್ನು ಈ ಬಗ್ಗೆ ಇಂದು (ಆಗಸ್ಟ್ 18) ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ, ದೇಗುಲಗಳ ಅನುದಾನಕ್ಕೆ ತಡೆ ನೀಡಿದ್ದ ಆದೇಶ ವಾಪಸ್ ಪಡೆಯುವಂತೆ ಆಯುಕ್ತರಿಗೆ ಸೂಚನೆ ನೀಡಿದ್ದೇನೆ. ಮುಜರಾಯಿ ಇಲಾಖೆ ಆಯುಕ್ತರು ಕನ್​ಫ್ಯೂಸ್​ ಆಗಿದ್ದಾರೆ ಅಷ್ಟೇ. ಇಲಾಖೆಯಲ್ಲಿ ಅಕ್ರಮ ನಡೆದಿದೆ ಎಂಬ ಯಾವ ಅನುಮಾನವೂ ಇಲ್ಲ. ಯಾವ ದೇವಸ್ಥಾನದ ಕೆಲಸವನ್ನೂ ನಿಲ್ಲಿಸುವುದಕ್ಕೆ ಹೋಗುವುದಿಲ್ಲ. ಸ್ಟೇಟಸ್ ರಿಪೋರ್ಟ್ ಕೇಳಿದ್ದಕ್ಕೆ ಕನ್​ಫ್ಯೂಸ್ ಮಾಡಿಕೊಂಡಿಕೊಂಡು ನಮ್ಮ ಇಲಾಖೆಯ ಆಯುಕ್ತರು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದರು.

ದೇವಸ್ಥಾನ ಜೀರ್ಣೋದ್ದಾರ ಕಾಮಗಾರಿ ಇನ್ನೂ ಪ್ರಾರಂಭ ಆಗದಿದ್ದರೆ ಹಣ ಬಿಡುಗಡೆ ಮಾಡದಂತೆ ಧಾರ್ಮಿಕ ದತ್ತಿ ಇಲಾಖೆ ಆದೇಶದಲ್ಲಿ ಸೂಚಿಸಿತ್ತು. ಇನ್ನು ಶೇ‌.50 ರಷ್ಟು ಹಣ ಬಿಡುಗಡೆಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದರೆ ಅದನ್ನು ತಕ್ಷಣ ತಡೆ ಹಿಡಿದು ಅನುದಾನ ಬಿಡುಗಡೆ ಮಾಡದಂತೆ ತಿಳಿಸಿತ್ತು. ಹಾಗೂ ಅನುದಾನದ ಆಡಳಿತಾತ್ಮಕ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಕೆ ಆಗಿದ್ದರೆ ಆಡಳಿತಾತ್ಮಕ ಮಂಜೂರಾತಿಯನ್ನು ತಡೆಹಿಡಿಯುವುದು. ಹೀಗೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಮೂರು ನಿರ್ದೇಶನಗಳನ್ನು ಎಲ್ಲಾ ಜಿಲ್ಲಾಧಿಕಾರಿಗಳಿಗೆ ನೀಡಲಾಗಿತ್ತು. ಇದರೊಂದಿಗೆ ಈ ಆದೇಶ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಬಗ್ಗೆ ಪ್ರತಿಭಟನೆ ನಡೆಸಲಿಉ ಬಿಜೆಪಿ ನಾಯಕರು ಸಿದ್ಧತೆ ನಡೆಸಿದ್ದರು. ಇದರ ಬೆನ್ನಲ್ಲೇ ಇದೀಗ ರಾಮಲಿಂಗಾರೆಡ್ಡಿ ಅವರು ಆದೇಶ ವಾಪಸ್​​ ಪಡೆದುಕೊಳ್ಳುವಂತೆ ದತ್ತಿ ಇಲಾಖೆ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ಇದರೊಂದಿಗೆ ವಿವಾದವನ್ನು ಇಲ್ಲಿಗೆ ಕೊನೆಗೊಳಿಸಿದ್ದಾರೆ.

 

Source: TV9 KANNADA