ಅರ್ಜುನ್​ ಜನ್ಯಗೆ ಕೊರೊನಾ ಪಾಸಿಟಿವ್​! ಆಸ್ಪತ್ರೆಗೆ ದಾಖಲಾದ ಖ್ಯಾತ ಸಂಗೀತ ನಿರ್ದೇಶಕ

Apr 9, 2021

Coronavirus: ಕೆಲವೇ ದಿನಗಳ ಹಿಂದೆ ಅರ್ಜುನ್​ ಜನ್ಯ ಅವರಿಗೆ ಕೊರೊನಾ ಲಕ್ಷಣಗಳು ಕಾಣಿಸಿದವು. ಕೂಡಲೇ ಪರೀಕ್ಷೆ ಮಾಡಿಸಿಕೊಂಡರು. ಪಾಸಿಟಿವ್​ ವರದಿ ಬಂದಿದ್ದರಿಂದ ಆಸ್ಪತ್ರೆಗೆ ದಾಖಲಾದರು. ಪ್ರಸ್ತುತ ಅವರು ಚೇತರಿಸಿಕೊಳ್ಳುತ್ತಿದ್ದಾರೆ.

ಕೊರೊನಾ ವೈರಸ್​ ಎರಡನೇ ಅಲೆ ಜೋರಾಗಿ ಹಬ್ಬುತ್ತಿದೆ. ಸೆಲೆಬ್ರಿಟಿಗಳ ವಲಯದಲ್ಲೂ ಅನೇಕರಿಗೆ ಕೊವಿಡ್​-19 ಪಾಸಿಟಿವ್​ ಆಗುತ್ತಿದೆ. ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್​ ಜನ್ಯ ಅವರಿಗೆ ಈಗ ಕೊರೊನಾ ವೈರಸ್​ ತಗುಲಿದೆ. ಹಾಗಾಗಿ ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುದ್ದಾರೆ. ಈ ಸುದ್ದಿ ಅವರ ಅಭಿಮಾನಿಗಳಿಗೆ ಬೇಸರ ತರಿಸಿದೆ. ಹಲವು ಸಿನಿಮಾ ಕೆಲಸಗಳನ್ನು ಬ್ಯುಸಿ ಆಗಿದ್ದ ಅರ್ಜುನ್​ ಜನ್ಯ, ಕೊವಿಡ್​-19 ಕಾರಣದಿಂದ ಗ್ಯಾಪ್​ ತೆಗೆದುಕೊಳ್ಳುವಂತಾಗಿದೆ.

ಅರ್ಜುನ್​ ಜನ್ಯ ಅವರ ಆರೋಗ್ಯದ ಕುರಿತಂತೆ ಕಳೆದ ವರ್ಷ ಕೂಡ ಶಾಕಿಂಗ್​ ನ್ಯೂಸ್​ ಕೇಳಿಬಂದಿತ್ತು. ಹೃದಯಾಘಾತ ಆಗಿದ್ದರಿಂದ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಅವರು ಚೇತರಿಸಿಕೊಂಡರು. ಆ ಘಟನೆ ಬಳಿಕ ಈಗ ಮತ್ತೆ ಅರ್ಜುನ್ ಜನ್ಯ ಅವರಿಗೆ ಅನಾರೋಗ್ಯ ಸಮಸ್ಯೆ ಎದುರಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗುತ್ತಿದೆ.

ಅನೇಕ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡುತ್ತಿರುವ ಅರ್ಜುನ್​ ಜನ್ಯ, ಕಿರುತೆರೆಯ ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​ ರಿಯಾಲಿಟಿ ಶೋ ಜಡ್ಜ್​ ಆಗಿಯೂ ಕೆಲಸ ಮಾಡುತ್ತಿದ್ದಾರೆ. ಆ ಎಲ್ಲ ಕೆಲಸಗಳಿಗೆ ಈಗ ಬ್ರೇಕ್​ ಬಿದ್ದಿದೆ. ಕೆಲವೇ ದಿನಗಳ ಹಿಂದೆ ಅವರಿಗೆ ಕೊರೊನಾ ಲಕ್ಷಣಗಳು ಕಾಣಿಸಿದವು. ಕೂಡಲೇ ಪರೀಕ್ಷೆ ಮಾಡಿಸಿಕೊಂಡರು. ಪಾಸಿಟಿವ್​ ವರದಿ ಬಂದಿದ್ದರಿಂದ ಆಸ್ಪತ್ರೆಗೆ ದಾಖಲಾದರು. ಪ್ರಸ್ತುತ ಅವರು ಚೇತರಿಸಿಕೊಳ್ಳುತ್ತಿದ್ದು, ನೆಗೆಟಿವಿವ್​ ವರದಿ ಬಂದ ತಕ್ಷಣ ಮತ್ತೆ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ.

‘ಎಲ್ಲ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದರೂ ಕೂಡ ನನಗೆ ಹೇಗೆ ಕೊರೊನಾ ವೈರಸ್​ ತಗುಲಿತು ಎಂಬುದು ತಿಳಿದಿಲ್ಲ. ಶೀಘ್ರವೇ ಚೇತರಿಸಿಕೊಳ್ಳುತ್ತೇನೆ ಎಂಬ ಭರವಸೆ ಇದೆ. ನೆಗೆಟಿವ್​ ವರದಿ ಬಂದ ಬಳಿಕ ವೈದ್ಯರ ಸಲಹೆ ಪಡೆದುಕೊಂಡು ಕೆಲಸ ಆರಂಭಿಸುತ್ತೇನೆ’ ಎಂದು ಮಾಧ್ಯಮಗಳಿಗೆ ಅರ್ಜುನ್ ಜನ್ಯ ಪ್ರತಿಕ್ರಿಯೆ ನೀಡಿದ್ದಾರೆ.

Source:TV9Kannada