ಅಫ್ಘಾನಿಸ್ತಾನದಲ್ಲಿ ಕಟ್ಟರ್ ಷರಿಯಾ ಕಾನೂನು ಜಾರಿ ಸಾಧ್ಯತೆ, ಮನೆಯಿಂದ ಹೊರ ಬರಲು ಹೆದರುತ್ತಿರುವ ಮಹಿಳೆಯರು

Aug 19, 2021

ತಾಲಿಬಾನ್ ಅನ್ನೋ ನರ ರಾಕ್ಷಸರು ಕೊಟ್ಟ ಮಾತಿನಂತೆ ನಡೆದುಕೊಳ್ಳಲ್ಲ ಅಂತಾ ಒಂದೇ ಒಂದು ದಿನದಲ್ಲಿ ಇಡೀ ಜಗತ್ತಿಗೆ ಗೊತ್ತಾಗಿ ಹೋಗಿದೆ. ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ಕೈವಶವಾದ ಬಳಿಕ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿದ್ದ ಜಬೀವುಲ್ಲಾ ಮುಜಾಹಿದ್, ತಾಲಿಬಾನ್ ಅಧಿಕಾರಕ್ಕೇರಿದ್ರೂ ಮಹಿಳೆಯರ ಹಕ್ಕುಗಳಿಗೆ ಯಾವುದೇ ಚ್ಯುತಿ ತರಲ್ಲ ಅಂತಾ ಹೇಳಿದ್ರು. ಆದ್ರೆ, ಇದಾದ 24 ಗಂಟೆಗಳಲ್ಲೇ ತಾಲಿಬಾನಿಗಳು ಯುಟರ್ನ್ ಹೊಡೆದಿದ್ದು.. ಮಹಿಳೆಯರ ಹಕ್ಕುಗಳ ಕುರಿತು ಉಲೇಮಾಗಳು ನಿರ್ಧರಿಸ್ತಾರೆ ಅಂತಾ ವಹೀದುಲ್ಲಾ ಹಶೀಮಿ ಹೇಳೋ ಮೂಲಕ ಮಹಿಳಾ ಹಕ್ಕುಗಳ ಕುರಿತು ತಾನು ಬಿಟ್ಟಿದ್ದೆಲ್ಲಾ ಬರೀ ಓಳು ಅಂತಾ ನಿರೂಪಿಸಿದೆ.

ಮಹಿಳಾ ಹಕ್ಕುಗಳ ಕುರಿತು 24 ಗಂಟೆಯಲ್ಲೇ ಯು-ಟರ್ನ್
ಆರಂಭದಲ್ಲಿ ಮಹಿಳೆಯರ ಹಕ್ಕುಗಳು.. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನಿರ್ಬಂಧ ವಿಧಿಸಲ್ಲ ಅಂತಿದ್ದ ತಾಲಿಬಾನ್ ಈಗ ತನ್ನ ನಿಲುವಿನಿಂದ ಹಿಂದೆ ಸರಿದಂತೆ ಕಾಣ್ತಿದೆ. 1996ರಿಂದ 2001ರವರೆಗೆ ತಾಲಿಬಾನ್ ಅಧಿಕಾರದಲ್ಲಿದ್ದ ವೇಳೆ ಜಾರಿಗೆ ತಂದಿದ್ದ ಷರಿಯಾ ಕಾನೂನು ಮತ್ತೆ ಜಾರಿ ಮಾಡೋ ಎಲ್ಲ ಸಾಧ್ಯತೆಗಳಿವೆ ಅನ್ನೋ ಹಿಂಟ್ ಬಿಟ್ಟುಕೊಟ್ಟಿದೆ. ಮಹಿಳೆಯರು ಬುರ್ಖಾ ಧರಿಸಬೇಕೋ.. ಹಿಜಬ್ ಧರಿಸಬೇಕೋ ಅಂತಾ ಉಲೇಮಾಗಳು ನಿರ್ಧರಿಸುತ್ತವೆ ಅಂತಾ ವಹೀದುಲ್ಲಾ ಹಶೀಮಿ ಹೇಳಿದ್ದು ಅಫ್ಘಾನಿಸ್ತಾನದ ಮಹಿಳೆಯರಲ್ಲಿ ಆತಂಕ ಹುಟ್ಟುಹಾಕಿದೆ. ಅಲ್ದೆ, ಅಂತಾ ರಾಷ್ಟ್ರೀಯ ಮಾನವ ಹಕ್ಕುಗಳ ಹೋರಾಟಗಾರರು ಅಫ್ಘಾನಿಸ್ತಾನದ ಮಹಿಳೆಯರ ಕುರಿತು ಆತಂಕ ವ್ಯಕ್ತಪಡಿಸಿವೆ.

ಈಗಾಗಲೇ ಹೆರಾತ್, ಕಂದಹಾರ್ ಪ್ರಾಂತ್ಯಗಳಲ್ಲಿ ಬ್ಯಾಂಕ್ಗಳಲ್ಲಿ ಕೆಲಸ ಮಾಡ್ತಿದ್ದ ಮಹಿಳೆಯರಿಗೆ ಕೆಲಸಕ್ಕೆ ಬರದಂತೆ ತಾಲಿಬಾನಿಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ. ಅಲ್ದೆ, ಪುರಷರಿಗೂ ವಸ್ತ್ರ ಸಂಹಿತೆ ಜಾರಿಗೆ ತಂದಿದ್ದು ಕಾಬೂಲ್ನಲ್ಲಿ ಜೀನ್ಸ್ ಪ್ಯಾಂಟ್, ಟೀಶರ್ಟ್ ಬದಲು ಜುಬ್ಬಾ-ಪೈಜಾಮಾ ಧರಿಸಬೇಕು ಅಂತಾ ಆದೇಶಿಸಿದೆ. ಕಾಬೂಲ್ನಲ್ಲಿ ಕೆಲವೇ ಕೆಲವು ಮಹಿಳೆಯರು ಮಾತ್ರ ಹೊರಗೆ ಬರ್ತಿದ್ದಾರೆ. ಇನ್ನು ತಾಲಿಬಾನ್ ವಿಧಿಸಲು ಹೊರಟಿರೋ ಷರಿಯಾ ಕಾನೂನುಗಳೇನು..? 1996ರಿಂದ 2001ರವರೆಗೆ ಏನೇನು ಕಾನೂನುಗಳಿತ್ತು ಅಂತಾ ನೋಡೋದಾದ್ರೆ,

ಹೇಗಿತ್ತು ತಾಲಿಬಾನ್ ಆಡಳಿತ?
ಕಟ್ಟರ್ ಷರಿಯಾ ಕಾನೂನಿನಲ್ಲಿ ಮಹಿಳೆಯರು, ಹೆಣ್ಣು ಮಕ್ಕಳಿಗೆ ಯಾವುದೇ ಹಕ್ಕುಗಳು ಇರಲಿಲ್ಲ. 12 ವರ್ಷ ದಾಟಿದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಬ್ರೇಕ್ ಹಾಕಲಾಗಿತ್ತು. ಅಲ್ದೆ, ಮಹಿಳೆಯರು ಯಾವುದೇ ಉದ್ಯೋಗ ಮಾಡುವಂತೆ ಇರಲಿಲ್ಲ. ಹಿಜಬ್ ಧರಿಸಿಯೇ ಮಹಿಳೆಯರು ಹೊರ ಬರಬೇಕಿತ್ತು. ಮಹಿಳೆಯರು ಹೊರಗೆ ಓಡಾಡಬೇಕಾದ್ರೆ, ಅವರ ಜೊತೆ ಒಬ್ಬ ಪುರುಷ ಇರೋದು ಕಡ್ಡಾಯವಾಗಿತ್ತು. ಅಪ್ಪಿ ತಪ್ಪಿಯೂ ಪರ ಪುರುಷರ ಜೊತೆ ಮಾತನಾಡುವಂತೆ ಇರಲಿಲ್ಲ, ಓಡಾಡುವಂತಿರಲಿಲ್ಲ. ಅಲ್ದೆ, ಮಾಡ್ರನ್ ಡ್ರೆಸ್ ಧರಿಸುವಂತಿರಲಿಲ್ಲ. ಹಾಡು, ಡ್ಯಾನ್ಸ್, ಸಂಗೀತಕ್ಕೂ ಬ್ರೇಕ್ ಹಾಕಲಾಗಿತ್ತು. ಷರಿಯಾ ಕಾನೂನು, ನೀತಿ, ನಿಯಮಗಳನ್ನು ಯಾರೂ ಕೂಡ ಉಲಂಘಿಸುವಂತಿರಲಿಲ್ಲ. ಒಂದು ವೇಳೆ ನಿಯಮ ಉಲಂಘಿಸಿದ್ರೆ, ಅಂಥವರನ್ನು ಪ್ರತಿ ಶುಕ್ರವಾರ ಸಾರ್ವಜನಿಕವಾಗಿ ನಡುರಸ್ತೆಯಲ್ಲೇ ಹತ್ಯೆ ಮಾಡ್ತಿದ್ರು. ಮಹಿಳೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆ ಅಂತಾ ಗೊತ್ತಾದ್ರೆ, ಮಹಿಳೆಯರನ್ನೂ ರಾಷ್ಟ್ರೀಯ ಸ್ಟೇಡಿಯಂನಲ್ಲಿ ಕಲ್ಲು ಹೊಡೆದು ಸಾಯಿಸುತ್ತಿದ್ದರು. ಪುರುಷರು ಸಣ್ಣಪುಟ್ಟ ತಪ್ಪು ಮಾಡಿದ್ರೂ ಗುಂಡು ಹೊಡೆದು ಸಾಯಿಸ್ತಿದ್ರು.

ಅಫ್ಘಾನಿಸ್ತಾನದಲ್ಲಿ ಈಗ ಮತ್ತೆ ತಾಲಿಬಾನಿಗಳು ಅಧಿಕಾರಕ್ಕೆ ಬರ್ತಿರೋದ್ರಿಂದ ಮತ್ತೆ ಹಳೆಯ ಪರಿಸ್ಥಿತಿ ನಿರ್ಮಾಣವಾಗೋ ಭಯ ಅಫ್ಘಾನಿಸ್ತಾನದ ಜನರನ್ನ ಕಾಡುತ್ತಿದ್ದು ಇದೇ ಕಾರಣಕ್ಕೆ ದೇಶ ತೊರೆಯಲು ಮುಂದಾಗಿದ್ದಾರೆ. ಹೀಗಾಗಿ ತಾಲಿಬಾನಿಗಳು ಉದಾರತೆ ತೋರುತ್ತಾರಾ.. ಇಲ್ಲ ಹಳೆಯ ಕಾನೂನು ಜಾರಿಗೆ ತರ್ತಾರಾ ಅಂತಾ ಕಾದು ನೋಡಬೇಕಿದೆ.

Source: tv9 Kannada