ಅತಿವೃಷ್ಟಿ ಹಾನಿಯ ಪರಿಹಾರ ಕಾಮಗಾರಿಗೆ 283 ಕೋಟಿ ರೂ. ಅನುದಾನ ಕೋರಿಕೆ
ಮೈಸೂರು, ನ.9(ಆರ್‍ಕೆ)-ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಮೈಸೂರು ನಗರ ಮತ್ತು ಜಿಲ್ಲೆಯಾದ್ಯಂತ ಉಂಟಾಗಿರುವ ಹಾನಿಯ ಪರಿಹಾರ ಕಾಮಗಾರಿಗೆ 283.35 ಕೋಟಿ ರೂ.ಗಳ ವಿಶೇಷ ಅನುದಾನ ಕಲ್ಪಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಉಸ್ತುವಾರಿ ಸಚಿವರು, ನವೆಂಬರ್ 1ರಂದು ಮಳೆ ಹಾನಿ ಸಂಬಂಧ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ತುರ್ತು ಕಾಮಗಾರಿ ಕೈಗೊಳ್ಳಲು ಅಗತ್ಯವಿರುವ ಅನುದಾನದ ಬಗ್ಗೆ ವರದಿ ಸಿದ್ಧಪಡಿಸು ವಂತೆ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ 48 ರಸ್ತೆ ಕಾಮಗಾರಿಗಳಿಗೆ 152.5 ಕೋಟಿ ಮೈಸೂರು ನಗರ ಒಳಚರಂಡಿ ಸುಧಾರಣಾ ಸಂಬಂಧ 35 ಕಾಮಗಾರಿಗಳಿಗೆ 130.85 ಕೋಟಿ ರೂ. ಅನುದಾನ ಅಗತ್ಯವಿದೆ ಎಂದು ಜಿಲ್ಲಾಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ. ಮಳೆ ಹಾನಿ ಸಂಬಂಧ ತುರ್ತಾಗಿ ಕಾಮಗಾರಿ ಕೈಗೊಳ್ಳಬೇಕಾಗಿರುವುದರಿಂದ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
Source: mysoremithra